(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 01. ಹೈಕೋರ್ಟ್ ಕಲಾಪ ನಡೆಯುತ್ತಿದ್ದ ಸಂದರ್ಭ ಕರಾವಳಿ ಮೂಲದ ವ್ಯಕ್ತಿಯೋರ್ವರು ಅರೆನಗ್ನ ಸ್ಥಿತಿಯಲ್ಲಿ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ.
ನ. 30ರ ಮಂಗಳವಾರದಂದು ಬೆಳಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿದ್ದ ವೇಳೆ ಅಲ್ಲಿ ಉಜಿರೆ ಮೂಲದ ವ್ಯಕ್ತಿಯೋರ್ವರು ಅರೆನಗ್ನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಜಾರಕಿಹೊಳಿ ಅವರ ಸಿಡಿ ಪ್ರಕರಣದ ತನಿಖೆಗೆ ಎಸ್ಐಟಿ ತಂಡವನ್ನು ನೇಮಕ ಮಾಡಿರುವುದರ ಕುರಿತಂತೆ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಧೀಶರಾದ ರಿತುರಾಜ್ ಅವಸ್ಥಿ ನೇತೃತ್ವದ ನ್ಯಾಯಪೀಠವು ವಿಚಾರಣೆ ನಡೆಸುತ್ತಿತ್ತು. ಈ ವೇಳೆ, ಸಂತ್ರಸ್ತ ಯುವತಿಯ ಪರವಾಗಿ ಹಿರಿಯ ಮಹಿಳಾ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡನೆ ಮಾಡುತ್ತಿದ್ದ ಸಂದರ್ಭ ವಿಡಿಯೋ ಕಾನ್ಫರೆನ್ಸ್ ಗೆ ಲಾಗಿನ್ ಆಗಿದ್ದ ‘ಶ್ರೀಧರ ಭಟ್ ಉಜಿರೆ ಎಸ್ ಡಿಎಂ’ ಎಂಬ ಹೆಸರಿನ ವ್ಯಕ್ತಿ ಸ್ನಾನ ಮಾಡಿಕೊಂಡು ಬಂದು ಬರಿ ಮೈಯಲ್ಲಿ ಇಪ್ಪತ್ರು ನಿಮಿಷಗಳ ಕಾಲ ಕಾಣಿಸಿಕೊಂಡಿದ್ದು, ಇದರಿಂದ ಮಹಿಳಾ ವಕೀಲೆ ತೀವ್ರ ಮುಜುಗರ ಅನುಭವಿಸಿದ್ದಾರೆ. ಈ ಬಗ್ಗೆ ವಕೀಲೆ ಇಂದಿರಾ ಜೈಸಿಂಗ್, ನ್ಯಾಯಾಧೀಶರ ಗಮನಕ್ಕೆ ತಂದಿದ್ದು, ಈ ರೀತಿ ವ್ಯಕ್ತಿಯೊಬ್ಬ ಕಾಣಿಸಿಕೊಂಡು ಅಡ್ಡಿಪಡಿಸಿರುವುದರಿಂದ ಮುಜುಗರಕ್ಕೀಡಾಗಿ ವಾದ ಮಂಡನೆಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಾವು ಇದರ ಬಗ್ಗೆ ಗಮನಿಸಿಲ್ಲ. ಯಾವ ವ್ಯಕ್ತಿ ಅರೆನಗ್ನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೋ ಅದರ ಬಗ್ಗೆ ತನಿಖೆ ನಡೆಸಿ, ಅವರಿಗೆ ನೋಟೀಸ್ ನೀಡುವುದಾಗಿ ತಿಳಿಸಿದ್ದಾರೆ.