ಕಡಬ: ಭೀಮ್ ಆರ್ಮಿ ಸಂಘಟನೆಯ ಕಡಬ ತಾಲೂಕು ಘಟಕ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ನ. 09. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಸರಕಾರ ಹಾಕಿಕೊಂಡಿರುವ ಯೋಜನೆಗಳು ಸಮರ್ಪಕವಾಗಿ ತಲುಪಬೇಕು. ಆಗ ಮಾತ್ರ ಸಮುದಾಯದ ಅಭಿವೃದ್ಧಿಯಾಗಲು ಸಾಧ್ಯ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಮಂಗಳೂರಿನ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಅಂಬೇಡ್ಕರ್ ಭವನದಲ್ಲಿ ಭೀಮ್ ಆರ್ಮಿ ಸಂಘಟನೆಯ ಕಡಬ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಅಲ್ಲದೇ ಸಮುದಾಯದಲ್ಲಿ ಇನ್ನೂ ಶೋಷಣೆಗೆ ಒಳಗಾದವರಿದ್ದಾರೆ, ಅವರನ್ನು ಮೇಲೆತ್ತಬೇಕು. ಈ ನಿಟ್ಟಿನಲ್ಲಿ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು, ತುಳಿತಕ್ಕೊಳಗಾದವರನ್ನು ಮುಖ್ಯ ವಾಹಿನಿಗೆ ತರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ಭೀಮ್ ಆರ್ಮಿ ಹಾಸನ ಜಿಲ್ಲಾಧ್ಯಕ್ಷ ಪ್ರದೀಪ್ ಎಚ್.ಎಸ್ ಮಾತನಾಡಿ, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಇಚ್ಛೆ ಇರುವ ಎಲ್ಲರೂ ನಮ್ಮ ಆರ್ಮಿಯ ಸದಸ್ಯರು ಆಗಬಹುದು ಎಂದರು. ರಾಷ್ಟ್ರೀಯ ಆದಿವಾಸಿ ಏಕತಾ ಪರಿಷತ್ ರಾಜ್ಯಧ್ಯಕ್ಷ ಜಯ ಕುಮಾರ್ ಹಾದಿಗೆ ಮಾತನಾಡಿ, ದಮನಿತ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಸಂಘಟನಾತ್ಮಕವಾಗಿ ಖಂಡಿಸಲು ಸಂಘಟನೆಯು ಮುಂದಾಗಲಿದೆ ಎಂದು ತಿಳಿಸಿದರು.

Also Read  ಸುರತ್ಕಲ್: ಯುವಕನಿಗೆ ಚೂರಿ ಇರಿತ ಪ್ರಕರಣ ➤ ಮೂವರ ಬಂಧನ

ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕ ಅಣ್ಣಿ ಎಳ್ತಿಮಾರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಡಿ.ಕೆ ರವಿಚಂದ್ರ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆನಂದ ಬೆಳ್ಳಾರೆ, ಸುಳ್ಯ ಆದಿದ್ರಾವಿಡ ಮಹಿಳಾ ಸಮಾಜದ ಅಧ್ಯಕ್ಷೆ ಕು| ಲಕ್ಷ್ಮೀ, ಹಿರಿಯ ದಲಿತ ಮುಂದಾಳು ತನಿಯಪ್ಪ ಬೆದ್ರೋಳಿ, ದಲಿತ ಮುಖಂಡ ವಿಶ್ವನಾಥ ಅಲೆಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಕಡಬ ಠಾಣಾ ಉಪ ನಿರೀಕ್ಷಕ ರುಕ್ಮ ನಾಯಕ್, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ರಂಗಭೂಮಿ ಕಲಾವಿದ ರವಿ ರಾಮಕುಂಜ ಅವರನ್ನು ಸನ್ಮಾನಿಸಲಾಯಿತು.

Also Read  ಸೂಕ್ತ ಕಾಲದ ಹೂಡಿಕೆಯಿಂದ ನಿರಂತರ ಲಾಭ– ಡಾ. ಡೊನಾಲ್ಡ್ ಲೋಬೊ

error: Content is protected !!
Scroll to Top