ಇಂದು (ಜೂ.08) ವಿಶ್ವ ಮೆದುಳಿನ ಟ್ಯೂಮರ್ ಜಾಗೃತಿ ದಿನ ➤ ಬ್ರೈನ್ ಟ್ಯೂಮರ್ ಎಷ್ಟು ಅಪಾಯಕಾರಿ..? ಚಿಕಿತ್ಸೆ ಹೇಗೆ..?

✍? ಡಾ|| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ: ಪ್ರತಿ ವರ್ಷ ಜೂನ್ 8 ರಂದು ವಿಶ್ವದಾದ್ಯಂತ “ವಿಶ್ವ ಬ್ರೈನ್ ಟ್ಯೂಮರ್ ಜಾಗೃತಿ ದಿನ” ಎಂದು ಆಚರಿಸಿ ಮೆದುಳಿನ ಟ್ಯೂಮರ್‍ನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 2000ರಿಂದ ಈ ಆಚರಣೆ ಜಾರಿಗೆ ಬಂದಿತು. ಹೆಚ್ಚಿನ ಮೆದುಳಿನ ಗಡ್ಡೆಗಳು ಮಾರಣಾಂತಿಕವಾಗಿರುತ್ತದೆ ಮತ್ತು ಗುರುತಿಸಿದ ಒಂದು ವರ್ಷದೊಳಗೆ ಸಾವಿನಲ್ಲಿ ದುರಂತ ಅಂತ್ಯಕಾಣುತ್ತದೆ.

ಪ್ರತಿ ವರ್ಷ 40ರಿಂದ 50 ಸಾವಿರ ಮಂದಿ ಮೆದುಳಿನ ಟ್ಯೂಮರ್‍ಗೆ ತುತ್ತಾಗುತ್ತಾರೆ. ಇದರಲ್ಲಿ 20 ಶೇಕಡಾ ಮಕ್ಕಳಲ್ಲಿ ಕಾಣಸಿಗುತ್ತದೆ. ಸುಮಾರು 120 ಬಗೆಯ ವಿಧವಿಧದ ಮೆದುಳಿನ ಟ್ಯೂಮರ್ ಗುರುತಿಸಲಾಗಿದ್ದು, ಬೇರೆ ಬೇರೆ ರೀತಿಯಲ್ಲಿ ಇವುಗಳು ರೋಗಿಯನ್ನು ಕಾಡುತ್ತದೆ. ರೋಗದ ಚಿಹ್ನೆಗಳು ಮೆದುಳಿನ ಯಾವ ಭಾಗದಲ್ಲಿ ಮೆದುಳಿನ ಗಡ್ಡೆ ಬೆಳೆದಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಾಗಿ ಇಳಿ ವಯಸ್ಸಿನಲ್ಲಿ ಕಾಣಸಿಗುವ ಈ ಬ್ರೈನ್ ಟ್ಯೂಮರ್, 65 ವರ್ಷ ದಾಟಿದ ಬಳಿಕ ಸುಮಾರು 1 ಲಕ್ಷದಲ್ಲಿ 15 ರಿಂದ 20 ಮಂದಿಯಲ್ಲಿ ಕಾಣಿಸಿಕೊಳ್ಳಬಹುದು. ವಯಸ್ಸಾದಂತೆ ಈ ರೋಗ ಬರುವ ಸಾಧ್ಯತೆ ಹೆಚ್ಚಾಗುತ್ತದೆ.

ಮೆದುಳಿನ ಟ್ಯೂಮರ್‍ನ ಲಕ್ಷಣಗಳು: ಮೆದುಳಿನ ಟ್ಯೂಮರ್‍ನ ಚಿಹ್ನೆಗಳು ಟ್ಯೂಮರ್‍ನ ಗಾತ್ರ, ಜಾಗ ಮತ್ತು ಬೆಳವಣಿಗೆಯ ತೀವ್ರತೆಯ ಮೇಲೆ ಅವಲಂಬಿತವಾಗಿರುತ್ತದೆ
1. ತಲೆನೋವು : ಮೆದುಳು ನಮ್ಮ ದೇಹದ ಅತ್ಯಂತ ಗಟ್ಟಿಯಾದ ತಲೆಬುರುಡೆ ಎಲುಬಿನ ಒಳಭಾಗದಲ್ಲಿರುವುದರಿಂದ, ಮೆದುಳಿನಲ್ಲಿ ಗಡ್ಡೆ ಬೆಳೆದಾಗ ಮೆದುಳಿನ ಒಳಭಾಗದ ಒತ್ತಡ ಹೆಚ್ಚಾಗುತ್ತದೆ. ಹೀಗೆ ಮೆದುಳಿನ ಒತ್ತಡ ಜಾಸ್ತಿಯಾದಾಗ ತಲೆನೋವು ಬರುತ್ತದೆ. ಮೆದುಳಿನ ಟ್ಯೂಮರ್‍ನ ಗಾತ್ರ ಜಾಸ್ತಿಯಾದಂತೆಲ್ಲಾ ತಲೆನೋವಿನ ತೀವ್ರತೆ ಹೆಚ್ಚುತ್ತದೆ. ತಲೆನೋವು ಮೆದುಳು ಗಡ್ಡೆಯ ಸೂಚಕವಲ್ಲ. ಆದರೆ ಮೆದುಳುಗಡ್ಡೆ ಇದ್ದವರಲ್ಲಿ ತಲೆನೋವು ಸಾಮಾನ್ಯ. ಸುತ್ತಿಗೆಯಿಂದ ಹೊಡೆದಂತಹಾ ತಲೆಸಿಡಿಯುವಂತಹಾ ತಲೆನೋವು ಇರಬಹುದು. ತಲೆನೋವು ಕೆಮ್ಮಿದಾಗ, ಸೀನಿದಾಗ, ಮುಂದೆ ಬಾಗಿದಾಗ ನೋವು ಹೆಚ್ಚಾಗುವುದರ ಜೊತೆಗೆ, ವಾಂತಿಯಾಗುತ್ತಿದ್ದರೆ ಬಹಳ ಗಂಭೀರವಾಗಿ ಪರಿಗಣಿಸಬೇಕು.
2. ವಾಕರಿಕೆ ಮತ್ತು ವಾಂತಿ : ಪದೇ ಪದೇ ವಾಕರಿಕೆ ಬಂದಂತಾಗುವುದು ಮತ್ತು ತಲೆನೋವು ಜಾಸ್ತಿಯಾದಂತೆ ವಾಂತಿ ಹೆಚ್ಚಾಗುವುದು ಮೆದುಳಿನ ಟ್ಯೂಮರ್‍ನ ಪ್ರಾಥಮಿಕ ಲಕ್ಷಣ. ಪರೀಕ್ಷೆಗಳು ನಕಾರಾತ್ಮಕವೆಂದು ತಿಳಿಯುವವರೆಗೂ ಮೆದುಳು ಗಡ್ಡೆಯ ಸಂಶಯವನ್ನು ತಳ್ಳಿ ಹಾಕುವಂತಿಲ್ಲ.
3. ಜಡತ್ವ, ನೆನಪು, ಬುದ್ಧಿ ಶಕ್ತಿಯ ಬದಲಾವಣೆಗಳು, ಮಾತನಾಡುವ ಸಾಮರ್ಥ್ಯ ಕುಂಠಿತವಾಗುವುದು. ಅಂಧತ್ವ, ದೃಷ್ಟಿದೋಷ, ಮಾನಸಿಕ ಗೊಂದಲ ಕಾಣಿಸಿಕೊಳ್ಳಬಹುದು. ರೋಗದ ಲಕ್ಷಣಗಳು ಮೆದುಳು ಯಾವ ಭಾಗದಲ್ಲಿ ಗೆಡ್ಡೆ ಬೆಳೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿಯನ್ನು ವೈದ್ಯರಿಗೆ ನೀಡುತ್ತದೆ.
4. ವಿಪರೀತ ಸುಸ್ತು, ದೇಹದಲ್ಲಿ ವಿವಿಧ ರೀತಿಯ ಬದಲಾವಣೆ, ದೇಹದ ಭಾಗಗಳಲ್ಲಿ ನರಗಳ ದೌರ್ಬಲ್ಯ ಕಾಣಿಸಬಹುದು.
5. ಮೂರ್ಛೆ ತಪ್ಪುವುದು ಅಥವಾ ಅಪಸ್ಮಾರ ಪದೇ ಪದೇ ಕಾಡುತ್ತದೆ.
6. ಕೆಲಸ ಕಾರ್ಯಗಳಲ್ಲಿ ಅನಾಸಕ್ತಿ, ಮಂಕಾಗುವುದು, ಪ್ರಜ್ಞೆ ಇಲ್ಲದಂತಾಗುವುದು. ಕಲಿಕೆಯ ಸಾಮರ್ಥ್ಯ ಕುಸಿಯುವುದು, ನಿತ್ಯದ ಬೇಕು-ಬೇಡಗಳನ್ನು ನೋಡಿಕೊಳ್ಳುವ ಸಾಮರ್ಥ್ಯ ಕುಂಠಿತವಾಗುತ್ತದೆ.

ಮೆದುಳಿನ ಟ್ಯೂಮರ್ ಬಗೆಗಿನ 10 ಅಪನಂಬಿಕೆಗಳು :
1. ಮೆದುಳಿಗೆ ಬರುವ ಎಲ್ಲಾ ಟ್ಯೂಮರ್‍ಗಳು ಕ್ಯಾನ್ಸರ್ ಆಗಿರಲೇಬೇಕಿಲ್ಲ. ಕೆಲವೊಂದು ಮೆದುಳಿನ ಗಡ್ಡೆಗಳು ಬಹಳ ನಿಧಾನವಾಗಿ ಬೆಳೆಯುವ ಗುಂಪಿಗೆ ಸೇರಿದ ತೀವ್ರವಲ್ಲದ ಗುಂಪಿನ ಗಡ್ಡೆಗಳಾಗಿರುತ್ತದೆ. ಇವುಗಳ ಸುತ್ತ ಗಟ್ಟಿಯಾದ ಚೀಲದಂತ ಪೊರೆಯಿರುತ್ತದೆ ಮತ್ತು ಸುತ್ತಲಿನ ಮೆದುಳಿನ ಅಂಗಾಂಶಗಳಿಗೆ ಹಾನಿಮಾಡುವುದಿಲ್ಲ. ಮತ್ತು ಬೇರೆ ಕಡೆಗೆ ಹರಡುವುದೂ ಇಲ್ಲ. ಇಂತಹ ಬ್ರೈನ್ ಟ್ಯೂಮರ್‍ಗಳಿಗೆ ಸರಿಯಾದ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ತೀವ್ರತರವಾಗಿ ಬೆಳೆಯುವ ಮಾಲಿಗ್ನೆಂಟ್ ಗಡ್ಡೆಗಳು ಬಹಳ ಅಪಾಯಕಾರಿ. ಇವು ಸುತ್ತಲಿನ ಮೆದುಳಿನ ಅಂಗಾಂಶಗಳನ್ನು ಹಾನಿಗೆಡವಿ, ದೇಹದೆಲ್ಲೆಡೆ ಹರಡಿ ವರ್ಷದೊಳಗೆ ಮೃತ್ಯು ಕೂಪಕ್ಕೆ ತಳ್ಳುವ ಸಾಮರ್ಥ್ಯ ಹೊಂದಿದೆ.
2. ಅತಿಯಾದ ವಿಕಿರಣದ ವಾತಾವರಣದಲ್ಲಿ ಕೆಲಸ ಮಾಡುವವರಿಗೆ ಮೆದುಳಿನ ಟ್ಯೂಮರ್ ಬರುತ್ತವೆ ಎಂದು ಹೆಚ್ಚಿನವರು ಭಾವಿಸುತ್ತಾರೆ. 1 ಲಕ್ಷದಲ್ಲಿ ಒಂದು ಅಥವಾ 2 ಮಂದಿಗೆ ಬರುವ ಸಾಧ್ಯತೆ ಇದೆ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಆದರೆ ಹೆಚ್ಚು ವಿಕಿರಣ ತೆಗೆದುಕೊಂಡಲ್ಲಿ ದೇಹದ ಆರೋಗ್ಯದ ಮೇಲೆ ಮಾರಕ ಪರಿಣಾಮ ಉಂಟಾಗಬಹುದು.
3. ಎಲ್ಲಾ ಮೆದುಳಿನ ಗಡ್ಡೆಗಳು ಮಾರಣಾಂತಿಕವಾಗಿರುತ್ತದೆ ಎಂದು ತಪ್ಪು ತಿಳುವಳಿಕೆ, 120 ಬಗೆಯ ಮೆದುಳಿನ ಗಡ್ಡೆಗಳು ದಾಖಲಾಗಿದ್ದು, ರೋಗದ ಲಕ್ಷಣಗಳು, ಮೆದುಳಿನ ಗಡ್ಡೆಗಳ ಗಾತ್ರ, ಜಾಗ ಮತ್ತು ಯಾವ ಜೀವಕೋಶಗಳಿಂದ ಹುಟ್ಟಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ರೋಗದ ತೀವ್ರತೆ, ಮೆದುಳಿನ ಟ್ಯೂಮರ್‍ನ ಗ್ರೇಡ್‍ನ ಮೇಲೆ ಅವಲಂಬಿತವಾಗಿದೆ.
4. ಎಲ್ಲಾ ಮೆದುಳಿನ ಟ್ಯೂಮರ್‍ಗಳು ಒಂದೇ ರೀತಿಯಲ್ಲಿ ವರ್ತಿಸುತ್ತದೆ ಎಂಬುದು ಕೂಡ ತಪ್ಪು ಕಲ್ಪನೆ. ಪ್ರಾಥಮಿಕವಾಗಿ ಮೆದುಳಿನ ಜೀವಕೋಶಗಳಿಂದ ಹುಟ್ಟಿದ ಮೆದುಳಿನ ಗಡ್ಡೆ ಬೇರೆಯೇ ರೀತಿಯಲ್ಲಿ ವರ್ತಿಸುತ್ತದೆ. ಆದರೆ ದೇಹದ ಇತರ ಭಾಗಗಳಾದ ಶ್ವಾಸಕೋಶ, ಗರ್ಭಕೋಶ, ಮೊಲೆಗಳು, ಕಿಡ್ನಿ, ಕರುಳು ಮುಂತಾದ ಕಡೆ ಪ್ರಾಥಮಿಕವಾಗಿ ಹುಟ್ಟಿ ಬೆಳೆದು ಅಲ್ಲಿಂದ ಮೆದುಳಿಗೆ ಹರಡಿದ ಗಡ್ಡೆಗಳು ವಿಭಿನ್ನ ರೀತಿಯಲ್ಲಿ ವರ್ತಿಸಬಹುದು.
5. ಎಲ್ಲಾ ಮೆದುಳಿನ ಗಡ್ಡೆಗಳ ಪ್ರಾಥಮಿಕ ಚಿಹ್ನೆಗಳು ಒಂದೇ ರೀತಿಯಲ್ಲಿ ಇರಲಿಕ್ಕಿಲ್ಲ. ಮೆದುಳಿನ ಗಡ್ಡೆಯ ಗಾತ್ರ, ಜಾಗ ಮತ್ತು ಜೀವಕೋಶಗಳ ಆಕೃತಿ ಮತ್ತು ವರ್ತನೆಯ ಮೇಲೆ ರೋಗದ ಚಿಹ್ನೆಗಳು ಅವಲಂಬಿತವಾಗಿದೆ.
6. ಪದೇ ಪದೇ ಬರುವ ತಲೆನೋವು ಮತ್ತು ಕಣ್ಣು ಮಂಜಾಗುವುದು ಬ್ರೈನ್ ಟ್ಯೂಮರ್‍ನ ಲಕ್ಷಣ ಎಂದು ಹೆಚ್ಚಿನವರು ತಪ್ಪು ತಿಳುವಳಿಕೆ ಹೊಂದಿದ್ದಾರೆ. ಆದರೆ ತಲೆನೋವು ಮತ್ತು ಕಣ್ಣು ಮಂಜಾಗಲು ನೂರಾರು ಕಾರಣವಿರುತ್ತದೆ. ರೋಗ ತಜ್ಞರು ಸರಿಯಾಗಿ ಪರಿಕ್ಷೀಸಿ, ಮೆದುಳಿನ ಸಿ.ಟಿ. ಸ್ಕ್ಯಾನ್ ಮಾಡಿಸಿ ರೋಗವನ್ನು ನಿರ್ಣಯಿಸುತ್ತಾರೆ. ಅನಗತ್ಯವಾಗಿ ಚಿಂತೆ ಮಾಡಬಾರದು.
7. ಸಣ್ಣ ವಯಸ್ಸಿನಲ್ಲಿ ಮೆದುಳಿನ ಟ್ಯೂಮರ್ ಬರುವುದಿಲ್ಲ ಎಂಬುದು ಕೂಡಾ ತಪ್ಪು ಕಲ್ಪನೆ. ಪ್ರತಿ ಲಕ್ಷದಲ್ಲಿ 3 ಮಂದಿಗೆ ಮಕ್ಕಳಲ್ಲಿ ಮತ್ತು 2 ಮಂದಿ ಹದಿಹರೆಯದವರಿಗೆ ಮೆದುಳಿನ ಟ್ಯೂಮರ್ ಬರುವ ಸಾಧ್ಯತೆ ಇರುತ್ತದೆ. ಹೆಚ್ಚಾಗಿ 65ರ ವಯಸ್ಸಿನ ಬಳಿಕ ಮೆದುಳಿನ ಗಡ್ಡೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತಿ ಲಕ್ಷದಲ್ಲಿ 15 ರಿಂದ 20 ಮಂದಿಗೆ ಬರಬಹುದು.
8. ಎಲ್ಲಾ ಮೆದುಳಿನ ಟ್ಯೂಮರ್‍ಗೆ ಒಂದೇ ರೀತಿಯ ಚಿಕಿತ್ಸೆ ನೀಡುತ್ತಾರೆ ಎಂಬುದು ಕೂಡಾ ತಪ್ಪು ಕಲ್ಪನೆ. ಗಡ್ಡೆಯ ಗಾತ್ರ, ಸ್ಥಳ ಮತ್ತು ಗ್ರೇಡನ್ನು ಹೊಂದಿಕೊಂಡು ರೋಗದ ತೀವ್ರತೆಯನ್ನು ಪತ್ತೆ ಹಚ್ಚಿ ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ. ಗ್ರೇಡ್ 1 ಮತ್ತು 2 ಮೆದುಳಿನ ಗಡ್ಡೆಗಳಿಗೆ ಸರ್ಜರಿ ಮಾಡಲಾಗುತ್ತದೆ ಮತ್ತು ಪ್ರತಿ 6 ತಿಂಗಳಿಗೊಮ್ಮೆ ತಪಾಸಣೆ ಮಾಡಿ ರೋಗದ ಮುಂದುವರಿಕೆಯನ್ನು ಕಂಡು ಹಿಡಿಯುತ್ತಾರೆ. ಗ್ರೇಡ್ 3 ಮತ್ತು 4 ಮೆದುಳಿನ ಟ್ಯೂಮರ್‍ಗೆ ಸರ್ಜರಿಯ ಜೊತೆಗೆ ವಿಕಿರಣ ಚಿಕಿತ್ಸೆ ಮತ್ತು ಕಿಮೋಥೆರಪಿ ಚಿಕಿತ್ಸೆ ನೀಡಿ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಕೊಲ್ಲಲಾಗುತ್ತದೆ.
9. ರಾತ್ರಿ ಮಲಗುವಾಗ ಮೊಬೈಲ್ ಫೋನ್ ತಲೆ ಬಳಿ ಇಟ್ಟುಕೊಂಡಲ್ಲಿ ಮೆದುಳಿನ ಟ್ಯೂಮರ್ ಬರುತ್ತದೆ ಎಂದು ಹೆಚ್ಚಿನವರು ನಂಬಿದ್ದಾರೆ. ಸೆಲ್‍ಫೋನಿನಿಂದ ಹೊರಸೊಸುವ ವಿಕಿರಣದಿಂದ ನಮ್ಮ ದೇಹದ ಜೀವಕೋಶಗಳಿಗೆ ಯಾವುದೇ ತೊಂದರೆ ಆಗದು ಆದರೆ ಜೀವಕೋಶಗಳ ಒಳಗೆ ಉಷ್ಣತೆ ಹೆಚ್ಚಾಗಬಹುದು. ಈವರೆಗೆ ಸಂಶೋಧನೆಗಳಿಂದ ಯಾವುದೇ ರೀತಿಯ ತೊಂದರೆ ಇದೆ ಎಂದು ಸಾಬೀತಾಗಿಲ್ಲ. ಆದರೆ ಅತಿಯಾದ ಬಳಕೆಯಿಂದ ಜೀನ್‍ಗಳಲ್ಲಿ ಮ್ಯುಟೇಶನ್ ಆಗುವ ಸಾಧ್ಯತೆ ಇದೆ ಎಂಬ ಬಲವಾದ ನಂಬಿಕೆ ವಿಜ್ಞಾನಿಗಳಲ್ಲಿ ಇದೆ.
10. ಒಮ್ಮೆ ಚಿಕಿತ್ಸೆ ನೀಡಿದ ಬಳಿಕ ಮತ್ತೆ ಬ್ರೈನ್ ಟ್ಯೂಮರ್ ಬರುವುದಿಲ್ಲ ಎಂಬುದು ಕೂಡ ತಪ್ಪು ಅಭಿಪ್ರಾಯ ಹೆಚ್ಚಿನ ಬ್ರೈನ್ ಟ್ಯೂಮರ್‍ಗಳು ಪದೇ ಪದೇ ಬರುವ ಸಾಮಥ್ಯ ಹೊಂದಿರುವುದರಿಂದ ಪ್ರತಿ 6 ತಿಂಗಳಿಗೊಮ್ಮೆ ನರತಜ್ಞರ ಸಲಹೆ ಮತ್ತು ಸಂದರ್ಶನ ಅತೀ ಅಗತ್ಯ.

Also Read  ದಂತ ಕುಳಿಗೂ ಬಂತು ಬಹ್ಮಾಸ್ತ್ರ ► ಡಾ| ಮುರಲೀ ಮೋಹನ್ ಚೂಂತಾರು ಅವರ ವಿಶೇಷ ಲೇಖನ

ಪತ್ತೆ ಹಚ್ಚುವುದು ಹೇಗೆ ?
ರೋಗಗಳ ಲಕ್ಷಣಗಳ ಬಗೆಗಿನ ವಿವರವಾದ ಮಾಹಿತಿಗಳು, ದೈಹಿಕ ಪರೀಕ್ಷೆ ತಲೆಯ ಕ್ಷ-ಕಿರಣ, ಮೆದುಳಿನ ಸಿ.ಟಿ ಸ್ಕ್ಯಾನ್ ಮಾಡಿಸಿ ರೋಗವನ್ನು ಗುರುತಿಸಲಾಗುತ್ತದೆ. ಮೆದುಳಿನ ಕಾರ್ಯದಕ್ಷತೆಯನ್ನು ಎಂಬ ಪರೀಕ್ಷೆ ಮುಖಾಂತರ ಕಂಡು ಹಿಡಿಯುತ್ತಾರೆ. ಒಂದು ವೇಳೆ ಮೆದುಳಿನ ಒಳಗೆ ಟ್ಯೂಮರ್ ಅಥವಾ ಗಡ್ಡೆ ಇದೆ ಎಂದು ತಿಳಿದು ಬಂದಲ್ಲಿ ಅದರ ಗಾತ್ರ, ಅದರ ಸುತ್ತಳತೆ ಮತ್ತು ಸುತ್ತಲಿನ ಮೆದುಳಿನ ಅಂಗಾಂಶಗಳ ಬಗೆಗಿನ ಮಾಹಿತಿಯನ್ನು ಪಡೆಯಲಾಗುತ್ತದೆ. ಅಗತ್ಯವಿದ್ದಲ್ಲಿ ನ್ಯೂರೋಸರ್ಜನ್, ಮೆದುಳಿನ ಹೊರಭಾಗದ ತಲೆಬುರುಡೆ ಎಲುಬಿನಲ್ಲಿ ರಂಧ್ರ ಮಾಡಿ, ಗಡ್ಡೆಯ ಸಣ್ಣ ತುಂಡನ್ನು ತೆಗೆದು ಸೂಕ್ಷ್ಮದರ್ಶಕದಲ್ಲಿ ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಗೆ ‘ಬಯಾಪ್ಸಿ’ ಎನ್ನುತ್ತಾರೆ. ಒಟ್ಟಿನಲ್ಲಿ ನರರೋಗ ತಜ್ಞರು ಮತ್ತು ನ್ಯೂರೋಸರ್ಜನ್ ಒಟ್ಟುಗೂಡಿ, ರೋಗದ ಲಕ್ಷಣಗಳ ಮತ್ತು ಪರೀಕ್ಷೆಯ ಫಲಿತಾಂಶವನ್ನು ತಾಳೆ ಹಾಕಿ ರೋಗ ನಿರ್ಣಯಮಾಡುತ್ತಾರೆ. ಕೆಲವೊಮ್ಮೆ ರೋಗ ನಿರ್ಣಯ ಮಾಡಲು ಹಲವಾರು ಬಾರಿ ಸಿ.ಟಿ ಸ್ಕ್ಯಾನ್ ಮಾಡಬೇಕಾಗಬಹುದು. ಮೆದುಳಿನ ಅಂಗಾಂಶಗಳನ್ನು ಕಾಲ್ಪನಿಕವಾಗಿ ಸಣ್ಣ ಸಣ್ಣ ಹಾಳೆಗಳಾಗಿ ಕತ್ತರಿಸಿ, ಆ ಬಳಿಕ ಮರು ಜೋಡಣೆ ಮಾಡಿ ಗಡ್ಡೆಯನ್ನು ಪತ್ತೆ ಹಚ್ಚುತ್ತಾರೆ. ನುರಿತ ರೇಡಿಯೋಲಾಜಿಸ್ಟ್ ತಜ್ಞರ ಸಲಹೆ ಇದಕ್ಕೆ ಅತೀ ಅಗತ್ಯ.

Also Read  ► ಅಡುಗೆ ಮಾಹಿತಿ ► ರುಚಿಯಾದ ಅಕ್ಕಿ ಪಾಯಸ ಮಾಡುವ ವಿಧಾನ

ಚಿಕಿತ್ಸೆ ಹೇಗೆ :
ರೋಗಿಯ ಸಾಮಾನ್ಯ ಆರೋಗ್ಯ ಸ್ಥಿತಿ, ಮೆದುಳು ಗಡ್ಡೆಯ ಗಾತ್ರ, ವಿಧ ಮತ್ತು ಯಾವ ಜಾಗದಲ್ಲಿದೆ ಎಂಬುದನ್ನು ಗುರುತಿಸಲಾಗುತ್ತದೆ. ಅದೇ ರೀತಿ ಗಡ್ಡೆಯ ಬೆಳವಣಿಗೆಯ ವೇಗ ಮತ್ತು ರೋಗಿಯ ವಯಸ್ಸು ಇವೆಲ್ಲವನ್ನು ತಾಳೆ ಹಾಕಿ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಮೆದುಳಿನ ಹೊರಭಾಗದಲ್ಲಿರುವ ಚಿಕ್ಕ ಪುಟ್ಟ ತೀವ್ರತರವಲ್ಲದ ಗಡ್ಡೆಗಳನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಲಾಗುತ್ತದೆ. ಆದರೆ ಕೆಲವೊಮ್ಮೆ ಮೆದುಳು ಒಳಭಾಗದಲ್ಲಿ ಗಡ್ಡೆ ಬೆಳೆದಿದ್ದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ರೋಗಿಗೆ ಗಡ್ಡೆಗಿಂತ, ಶಸ್ತ್ರಚಿಕಿತ್ಸೆಯಿಂದಲೇ ಹೆಚ್ಚು ಹಾನಿಯಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಗಡ್ಡೆಗಳ ಗಾತ್ರ ಜಾಸ್ತಿಯಾಗಿ ಪಕ್ಕದ ಅಂಗಾಂಶಗಳ ಜೊತೆ ಸೇರಿಹೋಗಿದ್ದಲ್ಲಿ, ಗಡ್ಡೆಯನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಾಗದಿರಬಹುದು. ಈ ಕಾರಣದಿಂದ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಜೊತೆಗೆ ವಿಕಿರಣ ಚಿಕಿತ್ಸೆ ಮತ್ತು ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಯಾವ ರೀತಿಯ ಚಿಕಿತ್ಸೆ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಕೆಲವೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕ ತಲೆಬುರುಡೆಯೊಳಗಿನ ಉರಿಯೂತದಿಂದಾಗಿ ಸಣ್ಣ ಪುಣ್ಣ ತೊಂದರೆಗಳೂ ಉಂಟಾಗಬಹುದು. ಇವೆಲ್ಲವನ್ನು ರೋಗಿಯ ಒಡನಾಡಿಗಳಿಗೆ ಸೂಕ್ತ ಮಾಹಿತಿ ನೀಡಿ ಮನವರಿಕೆ ಮಾಡಲಾಗುತ್ತದೆ. ಶಸ್ತ್ರ ಚಿಕಿತ್ಸೆಯಿಂದ ಉಂಟಾಗುವ ಅಡ್ಡ ಪರಿಣಾಮದ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ರೋಗಿ ಮತ್ತು ರೋಗಿಯ ಸಂಬಂಧಿಕರಿಗೆ ಆಪ್ತ ಸಮಾಲೋಚಕರಿಂದ ಸಮಾಲೋಚನೆ ಮಾಡಿ ಮಾನಸಿಕ ಧೈರ್ಯ ಮತ್ತು ನೈತಿಕ ಸ್ಥೈರ್ಯ ನೀಡುವುದು ಅತೀ ಅವಶ್ಯಕ.

Also Read  "ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು" - ಡಾ. ಚೂಂತಾರು

ಕೊನೆ ಮಾತು :
ಬ್ರೈನ್ ಟ್ಯೂಮರ್ ಮಾರಣಾಂತಿಕ ಕಾಯಿಲೆ ಹೌದಾದರೂ, ಪ್ರಥಮ ಮತ್ತು ದ್ವಿತೀಯ ಹಂತದ ಬ್ರೈನ್ ಟ್ಯೂಮರ್ ಹೊಂದಿರುವವರಿಗೆ ಪರಿಣಾಮಕಾರಿ ಚಿಕಿತ್ಸೆ ಇದೆ. ತೀವ್ರತರವಲ್ಲದ ಬ್ರೈನ್‍ಟ್ಯೂಮರನ್ನು ಶಸ್ತ್ರ ಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದು. ರೋಗಿಗೆ ಮಾನಸಿಕ ಧೈರ್ಯ ಮತ್ತು ಕೌನ್ಸಿಲಿಂಗ್ ಮಾಡಿಸುವುದು ಅತೀ ಅವಶ್ಯಕ. ರೋಗಿಗೆ ಸಾಕಷ್ಟು ನೈತಿಕ ಬೆಂಬಲ ನೀಡಿ ಆಶಾವಾದಿಯಾಗಿರುವಂತೆ ಮಾನಸಿಕವಾಗಿ ಸಿದ್ದತೆ ಮಾಡಬೇಕು. ರೋಗಿ ಚಿಕಿತ್ಸೆಯ ಬಳಿಕ ಅಳಿದುಳಿದ ಶಕ್ತಿ ಸಾಮರ್ಥ್ಯಗಳನ್ನು ಸರಿಯಾಗಿ ಬಳಸಿಕೊಂಡು, ಸ್ವಾವಲಂಬಿಯಾಗಿ ಕೆಲಸ ಮಾಡಲು ಪೂರಕವಾದ ವಾತಾವರಣ ಸೃಷ್ಟಿಸಬೇಕು. ಶಸ್ತ್ರಚಿಕಿತ್ಸೆ ಬಳಿಕವೂ ನಿರಂತರವಾಗಿ ನೋವು ನಿವಾರಕ ಔಷಧಿಗಳು, ಮೂರ್ಛೆ ನಿರೋಧಕ ಮಾತ್ರೆಗಳು ಮತ್ತು ಕಿಮೋಥೆರಪಿ ಔಷಧಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಇವೆಲ್ಲದರ ಅಡ್ಡ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಸಾಕಷ್ಟು ಸಹಕಾರ ಮತ್ತು ಪ್ರೇರಣೆ ಬಂಧುಗಳಿಂದ ಮತ್ತು ಸ್ನೇಹಿತರಿಂದ ಅತೀ ಅವಶ್ಯಕ. ದೀರ್ಘಕಾಲದ ಔಷಧಿ ಮತ್ತು ವೈದ್ಯರ ಭೇಟಿ ಮಾಡುತ್ತಾ ಗುಣಮಟ್ಟದ ಬದುಕನ್ನು ಸಾಗಿಸಲು ಕುಟುಂಬದವರು, ಸ್ನೇಹಿತರು, ಬಂಧುಗಳು, ಹೆತ್ತವರು ಮತ್ತು ಸಮಾಜ ಅನುವು ಮಾಡಿಕೊಡಬೇಕು. ಅದರಲ್ಲಿಯೇ ಸಮಾಜದ ಹಿತ ಅಡಗಿದೆ.

✍? ಡಾ|| ಮುರಲೀ ಮೋಹನ್ ಚೂಂತಾರು

 

 

 

error: Content is protected !!
Scroll to Top