(ನ್ಯೂಸ್ ಕಡಬ) newskadaba.com ಮೇ.09. ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯು ಮಿತಿ ಮೀರಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ರಾಜ್ಯದಾದ್ಯಂತ ಪರಿಷ್ಕೃತ ಮಾರ್ಗ ಸೂಚಿಯನ್ನು ಪ್ರಕಟಿಸಿದೆ.
ಮೇ.10 ರ ಬೆಳಿಗ್ಗೆ 6 ಗಂಟೆಯಿಂದ ಮೇ.24 ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದ್ದು, ಈ ಹಿಂದೆ ಹೊರತರಲಾಗಿದ್ದ ಮಾರ್ಗ ಸೂಚಿಯಲ್ಲಿ ಕೆಲವೊಂದು ಸೇರ್ಪಡೆ ಮಾಡಲಾಗಿದೆ. ಈ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯ ಆಗುವಂತೆ ಈ ಸೇರ್ಪಡೆಗಳನ್ನು ಅಳವಡಿಸಿ ಸರಕಾರ ಆದೇಶ ನೀಡಿದೆ. ರಾಜ್ಯದಲ್ಲಿ ಸ್ಟೀಲ್ ಉದ್ಯಮಕ್ಕೆ ಅಗತ್ಯವಿರುವ ಕಬ್ಬಿಣದ ಅದಿರು ಗಣಿಗಾರಿಕೆಗೆ ಅವಕಾಶ ನೀಡಲಾಗಿದ್ದು, ಸಿಮೆಂಟ್ ಉದ್ಯಮಗಳಿಗೆ ಸಂಬಂದಿತ ಸಣ್ಣ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ.
ಮದುವೆ ಕಾರ್ಯಕ್ರಮಗಳನ್ನು ಸರಕಾರದ ನಿಯಮಗಳನ್ನು ಅನುಸರಿಸಿಕೊಂಡು ಕೇವಲ 40 ಜನರ ಪಾಲ್ಗೊಳ್ಳುವಿಕೆಯಲ್ಲಿ ನಡೆಸಲು ಅವಕಾಶ ನೀಡಲಾಗಿದೆ. ಅಲ್ಲದೆ ಮದುವೆ ಕಾರ್ಯಕ್ರಮವನ್ನು ಆಯೋಜಿಸುವವರು ಮದುವೆ ಆಮಂತ್ರಣ ಪತ್ರದೊಂದಿಗೆ ಆಹ್ವಾನಿತರ ಸಹಿ ಇರುವ ಅರ್ಜಿಯನ್ನು ಸಲ್ಲಿಸಿ ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕಾಗಿದ್ದು, ಜಿಲ್ಲಾಡಳಿತ ನೀಡಿದ ಪಾಸ್ ಹೊಂದಿರುವವರು ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಹಾಗೂ ಮದುವೆ ಸಮಾರಂಭದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಕೋವಿಡ್ ಮಾರ್ಗ ಸೂಚಿಯನ್ನು ಅನುಸರಿಸಬೇಕಾಗುತ್ತದೆ ಎಂದು ನೂತನ ಆದೇಶದಲ್ಲಿ ತಿಳಿಸಲಾಗಿದೆ.