(ನ್ಯೂಸ್ ಕಡಬ) Newskadaba.com ಚಾಮರಾಜನಗರ, ಮೇ. 04. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಗಂಟೆಗಳ ಅವಧಿಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿ ಘಟನೆಗೆ ಕ್ಯಾಂಪಸ್ ಫ್ರಂಟ್ ಕರ್ನಾಟಕ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ. ಅಲ್ಲದೇ ಈ ದುರಂತಕ್ಕೆ ಜಿಲ್ಲಾಡಳಿತ ಸೇರಿದಂತೆ ಸರಕಾರವು ನೇರ ಹೊಣೆಯಾಗಿದೆ. ಮತ್ತು ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿರವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಆರೋಪಿಸುತ್ತಿದೆ.
ಕೊರೋನಾ ಎರಡನೇ ಅಲೆಯಿಂದ ದೇಶದಲ್ಲಿ ದಿನನಿತ್ಯ ಆಗುತ್ತಿರುವ ಸಾವುಗಳಿಂದ ದೇಶವೇ ಭೀತಿಗೊಳಪಟ್ಟಿದೆ.
ಈಗಾಗಲೇ ದೇಶದ ನಾನಾ ಭಾಗಗಳಲ್ಲಿ ವೈದ್ಯಕೀಯ ಸೌಲಭ್ಯ ದೊರಕದೆ ಹಲವಾರು ಸೋಂಕಿತರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರ ಬೆನ್ನಲೇ ರಾಜ್ಯದಲ್ಲೂ ಈ ಪರಿಸ್ಥಿತಿ ಮುಂದುವರಿದಿದೆ. ಕೋವಿಡ್ ಸೋಂಕಿತರಿಗೆ ಅತೀ ಅವಶ್ಯಕವಾಗಿರುವ
ಆಕ್ಸಿಜನ್, ವೆಂಟಿಲೇಟರ್, ರೆಮಿಡಿಸಿವೆರ್ ಮತ್ತು ಇತರೆ ಔಷಧಿಗಳ ಕೊರತೆಯಿಂದಾಗಿ ಸಾವಿನ ಸಂಖ್ಯೆಯು ಹೆಚ್ಚುತ್ತಲೇ ಇದೆ. ಎಲ್ಲಿ ನೋಡಿದರು ಕಣ್ಣೀರು, ಹೆಣದ ರಾಶಿಯು ದೇಶವನ್ನೇ ಸ್ಮಶಾನವನ್ನಾಗಿ ಮಾಡಿದೆ. ಕೋವಿಡ್ ಸೋಂಕಿನ ಬಗ್ಗೆ ವರ್ಷದ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಇರುವ ಸರಕಾರದ ಬೇಜವಾಬ್ದಾರಿತನದಿಂದ ಇಷ್ಟೆಲ್ಲ ಸಾವು ನೋವುಗಳಿಂದ ದೇಶ ನರಳುತ್ತಿದೆ.
ಆಕ್ಸಿಜನ್ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದರೂ ಅದರ ಪೂರೈಕೆಗೆ ಸರ್ಕಾರ ಕ್ರಮ ಕೈಗೊಂಡು ಹೆಚ್ಚುತ್ತಿರುವ ಸಾವಿನ ಸಂಖ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದ್ದ ಸರಕಾರವು ನಾವು ಸ್ಮಶಾನಗಳ ಸಂಖ್ಯೆ ಹೆಚ್ಚಿಸಿದ್ದೇವೆ ಈ ಬಗ್ಗೆ ಯಾರೂ ಭಯಭೀತರಾಗಬೇಡಿ ಎಂಬ ಸಂದೇಶ ಜನತೆಗೆ ನೀಡುತ್ತಿರುವುದನ್ನು ಗಮನಿಸಿದರೆ ಸರಕಾರ ಜನರ ಕುರಿತಾದ ಚಿಂತನೆಗಳೇನೆಂಬುದು ಅರ್ಥವಾಗುತ್ತದೆ. ರಾಜ್ಯ ಬಿಜೆಪಿ ಸರಕಾರಕ್ಕೆ ಜನಪರ ಯಾವುದೇ ಕಾಳಜಿ ಇಲ್ಲದಿರುವುದರಿಂದ ಆಕ್ಸಿಜನ್ ಕೊರತೆಯಿಂದಾಗಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಮಧ್ಯಪ್ರವೇಶಿಸಿ ಸ್ವಾರ್ಥ ರಾಜ್ಯ ಸರಕಾರದ ನಿರ್ಲಕ್ಷ್ಯತನವನ್ನು ಗಂಭೀರವಾಗಿ ಪರಿಗಣಿಸಿ, ಸರಕಾರದ ವಿರುದ್ಧ ಸೂಕ್ತ ಪ್ರಕರಣವನ್ನು ದಾಖಲಿಸಿ, ರಾಜ್ಯದಲ್ಲಿ ಆರೋಗ್ಯ ವಿಪತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮುಂದಾಗಬೇಕು ಮತ್ತು ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ, ರಾಜ್ಯ ಸಮಿತಿ ಸದಸ್ಯರಾದ ಅಡ್ವಕೇಟ್ ರೋಷನ್ ತುಮಕೂರು ಆಗ್ರಹಿಸಿದ್ದಾರೆ.