(ನ್ಯೂಸ್ ಕಡಬ) newskadaba.com ಕಡಬ, ಎ.28. ಮಾಸ್ಕ್ ಧರಿಸಿಲ್ಲವೆಂದು ಕೂಲಿ ಕಾರ್ಮಿಕನೋರ್ವನಿಗೆ ದಂಡ ವಿಧಿಸಿದ ಕಡಬ ಪಟ್ಟಣ ಪಂಚಾಯತ್ ನ ಕೊರೋನಾ ವಾರಿಯರ್ ಅಧಿಕಾರಿಯೋರ್ವರು ಕೈ ಸುಟ್ಟುಕೊಂಡ ಘಟನೆ ಕಡಬ ಪೇಟೆಯಲ್ಲಿ ನಡೆದಿದೆ.
ಕೂಲಿ ಕೆಲಸಕ್ಕೆ ತೆರಳಿ ಹಿಂತಿರುಗಿದ್ದ ದಂಪತಿ ಕಡಬ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಮಾಸ್ಕ್ ಧರಿಸಿಲ್ಲವೆಂದು ಕಡಬ ಪಟ್ಟಣ ಪಂಚಾಯತ್ ನ ಕೊರೋನಾ ವಾರಿಯರ್ ತಂಡದ ಅಧಿಕಾರಿಯೋರ್ವರು 100 ರೂ. ದಂಡ ವಿಧಿಸಿ ಜಿಲ್ಲಾಡಳಿತದ ರಶೀದಿಯನ್ನು ನೀಡಿದ್ದಾರೆ. ಈ ವೇಳೆ ಹಣವಿಲ್ಲವೆಂದು ಪರಿ ಪರಿಯಾಗಿ ಬೇಡಿಕೊಂಡ ಕೂಲಿ ಕಾರ್ಮಿಕ ಕೊನೆಗೆ ತನ್ನ ಕೈಯಲ್ಲಿದ್ದ 10 ರೂ. ವನ್ನು ಅಧಿಕಾರಿಯ ಕೈಗಿತ್ತಿದ್ದಾರೆ. ಕೊನೆಗೆ 100 ರೂ. ರಶೀದಿಯನ್ನು ನೀಡಿದ ಅಧಿಕಾರಿಯವರು ಬೇರೆ ದಾರಿ ಕಾಣದೆ ತನ್ನ ಕೈಯಿಂದ 90 ರೂ.ವನ್ನು ಸೇರಿಸಿ ಸರಕಾರಕ್ಕೆ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.
ಬಹುತೇಕರು ಕೆಲಸವನ್ನು ಕಳೆದುಕೊಂಡು ಕೈಯಲ್ಲಿ ದುಡ್ಡಿಲ್ಲದೆ ಪರದಾಡುತ್ತಿರುವ ವೇಳೆ ಮಾಸ್ಕ್ ಸ್ವಲ್ಪ ಜಾರಿದ್ದರೂ ಸಹ ಸರಿಯಾಗಿ ಮಾಸ್ಕ್ ಧರಿಸಿಲ್ಲವೆಂದು ಅಧಿಕಾರಿಗಳು ದಂಡ ವಿಧಿಸುತ್ತಿರುವುದು ಒಂದೆಡೆಯಾದರೆ, ಅಧಿಕಾರಿಗಳು ಒತ್ತಡದಿಂದ ಕಾರ್ಯ ನಿರ್ವಹಿಸುವುದರ ಜೊತೆಗೆ ಸಾರ್ವಜನಿಕರಿಂದ ಹಿಡಿಶಾಪಕ್ಕೆ ಒಳಗಾಗುವುದು ಇನ್ನೊಂದೆಡೆ ಕಂಡು ಬರುತ್ತಿದೆ.