(ನ್ಯೂಸ್ ಕಡಬ) newskadaba.com ಸೌತಡ್ಕ, ಎ. 03. ಒಂಟಿ ಮನೆಗೆ ನುಗ್ಗಿ ಮನೆ ಮಾಲಿಕ ತುಕ್ರಪ್ಪ ಶೆಟ್ಟಿ ಎಂಬವರನ್ನು ಕಟ್ಟಿಹಾಕಿದ್ದಲ್ಲದೇ ಅವರ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ 9 ಮಂದಿ ದರೋಡೆಕೋರರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಅಬ್ದುಲ್ ರವೂಫ್ (24 ), ರಾಮಮೂರ್ತಿ (23), ಅಶ್ರಫ್ ಪೆರಾಡಿ(27), ಸಂತೋಷ್(24), ನವೀದ್(36), ರಮಾನಂದ ಎನ್ ಶೆಟ್ಟಿ(48), ಸುಮನ್(24), ಸಿದ್ಧಿಕ್(27) ಹಾಗೂ ಅಲಿಕೋಯಾ ಎಂದು ಗುರುತಿಸಲಾಗಿದೆ. ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣಾ ಸಂದರ್ಭ ಆರೋಪಿಗಳು ಸುಮಾರು 12 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಆರೋಪಿಗಳು ಪುಂಜಾಲಕಟ್ಟೆಯಲ್ಲಿ ಮನೆಕಳ್ಳತನ, ಮೂಡಬಿದಿರೆ, ಬಜಪೆ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ದರೋಡೆ, ಬೆಂಗಳೂರು ವಿಜಯನಗರದಲ್ಲಿ ಮನೆಕಳ್ಳತನ ಯತ್ನ, ಅರೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಶಾಮೀಲಾಗಿದ್ದಾರೆ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿರುವ ಎರಡು ತಲವಾರು, ಏರ್ ಗನ್, ಒಂದು ಕಬ್ಬಿಣದ ರಾಡು ಒಂದು ಕಬ್ಬಿಣದ ಲಿವರ್, ಒಂದು ಉದ್ದನೆಯ ಚಾಕು, ಮೆಣಸಿನ ಪುಡಿ ಹಾಗೂ ಮರದ ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧನದ ವೇಳೆ ಆರೋಪಿಗಳು ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ವಿವಿಧೆಡೆ ದರೋಡೆ ನಡೆಸಿರುವುದು ಬಯಲಾಗಿದೆ.