ಮಧ್ಯರಾತ್ರಿ ಮನೆಗೆ ನುಗ್ಗಿ ಅರಣ್ಯಾಧಿಕಾರಿಗಳಿಂದ ದಾಂಧಲೆ ಆರೋಪ ➤ ಅರಣ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ

ಕಡಬ, ಮಾ.20. ಸುಬ್ರಹ್ಮಣ್ಯ ವಲಯದ ಐತ್ತೂರು ರಕ್ಷಿತಾರಣ್ಯದಿಂದ ಬೆಲೆ ಬಾಳುವ ಮರಗಳ ಲೂಟಿಯಾಗುತ್ತಿದೆ ಎಂದು ದೂರು ನೀಡಿದ ಐತ್ತೂರು ಗ್ರಾಮದ ಮೂಜೂರು ನಿವಾಸಿ ಪ್ರಸಾದ್ ಎಂಬವರ ಮನೆಗೆ ಅರಣ್ಯಾಧಿಕಾರಿಗಳು ನಡು ರಾತ್ರಿ ದಾಳಿ ನೆಪದಲ್ಲಿ ದಾಂಧಲೆ ನಡೆಸಿ ದ್ವೇಷ ಸಾಧನೆ ಮಾಡಿದ್ದಾರೆ ಎಂದು ಹೇಳಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯಾಧಿಕಾರಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅಗ್ರಹಿಸಿ ದೂರುದಾರ ಮನೆಯವರು ಹಾಗೂ ನೀತಿ ತಂಡದವರು ಕಳೆದ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದುವರೆಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾರು ಕೂಡ ಸಂಸತ್ರಸ್ಥರ ನೆರವಿಗೆ ಬಾರದಿದ್ದರೂ ನ್ಯಾಯಾಲಯದಲ್ಲಿ ಈ ಬಗ್ಗೆ ಖಾಸಗಿ ದೂರು ಸಲ್ಲಿಕೆಯಾಗಿದ್ದು, ಇದನ್ನು ಸ್ವೀಕರಿಸಿದ ನ್ಯಾಯಾಲಯ ದೌರ್ಜನ್ಯ ಎಸಗಿದ ಅರಣ್ಯಾಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ಈ ಹಿನ್ನಲೆಯಲ್ಲಿ ಕಳೆದ ಆರು ದಿವಸಗಳಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದ ಐತ್ತೂರು ಭಾಗದ ಅರಣ್ಯದಲ್ಲಿ ಕೋಟ್ಯಾಂತರ ಪ್ರಮಾಣದ ಬೆಳೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡಲಾಗಿದೆ, ಇದರಲ್ಲಿ ಅರಣ್ಯಾಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಇದರ ವಿರುದ್ಧ ಐತ್ತೂರು ಗ್ರಾಮದ ಮೂಜೂರು ನಿವಾಸಿ ಪ್ರಸಾದ್ ಎನ್ನುವವರು ಸಾಕ್ಷಿ ಸಮೇತ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು. ಆದರೆ ಇದಕ್ಕೆ ಯಾವುದೇ ಸ್ಪಂದನ ದೊರೆಯದಿದ್ದಾಗ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿತ್ತು. ಆಗ ಶುರುವಾಯಿತು ತನಿಖಾ ಆದೇಶ, ಅರಣ್ಯ ಸಂಚಾರಿ ದಳದ ಮುಖ್ಯಸ್ಥೆ ಸಂಧ್ಯಾ ಅವರ ನೇತೃತ್ವದ ತಂಡ ತನಿಖೆಯ ಕಾರ್ಯಚರಣೆಗೆ ಇಳಿದಿತ್ತು, ಇದರಿಂದ ಅರಣ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದ ಬುಡಕ್ಕೆ ನೀರು ಬರುವ ಸನ್ನಿವೇಶ ನಿರ್ಮಾಣವಾಗುತ್ತದೆ ಎನ್ನುವ ಪರಿಸ್ಥಿತಿ ಬಂದಾಗ ದೂರುದಾರನ ಮೇಲೆ ಹಗೆ ಸಾಧನೆ ಮಾಡಲಾಗಿದೆ ಎನ್ನುವುದು ಪ್ರಸಾದ್ ಅವರ ಆರೋಪ. ಮಾರ್ಚ್ 2 ರಂದು ರಾತ್ರಿ ಸಂಚಾರಿ ದಳದ ಅಧಿಕಾರಿ ಸಂಧ್ಯಾ, ಅರಣ್ಯಾಧಿಕಾರಿಗಳು, ಪೋಲೀಸರು ಹಾಗೂ ಇನ್ನಿತರ ಕೆಲವು ಜನ ಪ್ರಸಾದ್ ಮನೆಗ ದಾಳಿ ನಡೆಸಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

Also Read  'ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ 44 ಕೋಟಿಗಳನ್ನು ಮಂಜೂರು' – ಸಿಎಂ

ಇದಕ್ಕೆ ಪೂರಕವೆಂಬಂತೆ ದಾಳಿ ವೇಳೆ ದರ್ಪದಿಂದ ವರ್ತಿಸಿದ ವೀಡಿಯೋ ಕೂಡಾ ವೈರಲಾಗಿತ್ತು. ಅದೇ ದಿನ ರಾತ್ರಿ ಪ್ರಸಾದ್ ಅವರು ಮನೆಯಲ್ಲಿ ಇಲ್ಲದ ವೇಳೆ ಮನೆಯೊಳಗಿನ ಅಟ್ಟಕ್ಕೆ ಹಾಸಲಾಗಿದ್ದ ಮೂವತ್ತು ವರ್ಷ ಹಳೆಯದಾದ ಮರದ ಹಲಗೆಗಳನ್ನು ಕಿತ್ತು, ವಶಪಡಿಸಿಕೊಳ್ಳಲಾಗಿತ್ತು, ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿತ್ತು ಎನ್ನುವ ಆರೋಪ ಕೂಡಾ ಕೇಳಿ ಬಂತು. ಅಧಿಕಾರಿಗಳು ಮಾತ್ರವಲ್ಲದೆ ಐತ್ತೂರು ವಲಯದಲ್ಲಿ ಮರಳು ದಂಧೆಯಲ್ಲಿ ತೊಡಗಿಸಿಕೊಂಡಿರುವ ಅನ್ಯ ಮತೀಯ ವ್ಯಕ್ತಿಯೊಬ್ಬ ಬೂಟು ಕಾಲಿನಿಂದ ಒಳಗೆ ಪ್ರವೇಶಿಸಿ ದೇವರ ಕೋಣೆಗೆ ಹೋಗಿರುವುದಲ್ಲದೆ, ಅಟ್ಟಕ್ಕೆ ಹತ್ತಿ ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡಿದ್ದಾರೆ ಎಂದು ಮನೆಯವರು ಆರೋಪಿಸಿದ್ದರು.

ಬಳಿಕ ಪ್ರಸಾದ್ ಮೇಲೆ ಹೆಬ್ಬಲಸು ಮರ ಮತ್ತು ಇತರ ಬೆಳೆಬಾಳುವ ಮರಗಳನ್ನು ಕಡಿದು ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ದಾಳಿ ವೇಳೆ ಪ್ರಸಾದ್ ತಾಯಿ ಸೀತಮ್ಮ ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇದಕ್ಕೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಬಳಿಕ ನಡೆದ ಬೆಳವಣಿಗೆಯಲ್ಲಿ ಅರಣ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಗಳು ದಾಂಧಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದರೂ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಪ್ರಸಾದ್ ಅವರ ಕುಟಂಬದ ಬೆನ್ನಿಗೆ ನಿಂತು ಪ್ರಕರಣ ದಾಖಲಿಸಬೇಕೆಂದು ರೈತ ಸಂಘದ ಪ್ರಮುಖರು, ಮಲೆನಾಡು ಜನಹಿತರಕ್ಷಣಾ ಸಮಿತಿಯವರು ಕಡಬ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು.

Also Read  ರಾಜ್ಯಕ್ಕೆ 'ಟಾಪರ್' 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿ.! ➤ ಅನುಪಮಾ

ಇದಾದ ಬಳಿಕ ನೀತಿ ತಂಡ ಎನ್ನುವ ಸಾಮಾಜಿಕ ಸಂಘಟನೆ ಕೂಡಾ ಪ್ರಸಾದ್ ಬೆಂಬಲಕ್ಕೆ ನಿಂತು, ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು. ಆದರೆ ಯಾವುದೇ ಪ್ರಯೋಜವಾಗಿರಲಿಲ್ಲ. ಇದರಿಂದ ಅಕ್ರೋಶಗೊಂಡ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಟಿ. ಅವರು ಅರಣ್ಯಾಧಿಕಾರಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ಇಲ್ಲದಿದ್ದರೆ ಹಿಂಬರಹ ನೀಡಿ ಎಂದು ಆಗ್ರಹಿಸಿ ಕಳೆದ ಆರು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಎಲ್ಲಾ ಬೆಳವಣಿಗೆಗಳಿಗೆ ಇಂದು ತಾರ್ಕಿಕ ಅಂತ್ಯ ಕಂಡಿದೆ.

 

 

error: Content is protected !!
Scroll to Top