(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 21. ಮಾರ್ಕ್ಸ್ ಕಾರ್ಡ್ ಗೆ ಪೋಷಕರ ಸಹಿ ಹಾಕುವ ಬದಲು ವಿದ್ಯಾರ್ಥಿಯೇ ಸಹಿ ಹಾಕಿದ್ದಾನೆ ಎಂಬ ಕಾರಣಕ್ಕೆ ಮುಖ್ಯ ಶಿಕ್ಷಕರು ಬೆದರಿಕೆಯೊಡ್ಡಿದ್ದು, ಇದರಿಂದ ಬೇಸತ್ತ ವಿದ್ಯಾರ್ಥಿಯೋರ್ವ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಟಿಪಳ್ಳದಲ್ಲಿ ನಡೆದಿದೆ.
ಆತ್ಮಹತ್ಯೆಗೈದ ವಿದ್ಯಾರ್ಥಿಯನ್ನು ಸುರತ್ಕಲ್ ಕಾಟಿಪಳ್ಳದ ಎರಡನೇ ಬ್ಲಾಕ್ ನಿವಾಸಿ ಗೋಪಾಲ ಶೆಟ್ಟಿ ಮತ್ತು ಬೇಬಿ ಶೆಟ್ಟಿ ಅವರ ಪುತ್ರ ದರ್ಶನ್ ಎಂದು ಗುರುತಿಸಲಾಗಿದೆ. ಈತ ಕಾಟಿಪಳ್ಳದ ಮೂರನೇ ಬ್ಲಾಕ್ ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕೊರೋನಾ ಲಾಕ್ ಡೌನ್ ಬೆನ್ನಲ್ಲೇ ಶಾಲೆ ಆರಂಭವಾಗಿದ್ದು, ಶಿಕ್ಷಕರು ಪರೀಕ್ಷೆ ನಡೆಸಿದ್ದಾರೆ. ಆದರೆ ಪರೀಕ್ಷೆಯಲ್ಲಿ ದರ್ಶನ್ ಕೆಲ ವಿಷಯಗಳಲ್ಲಿ ಫೇಲ್ ಆಗಿದ್ದ. ಮಾರ್ಕ್ಸ್ ಕಾರ್ಡ್ ಮನೆಯವರಿಗೆ ತೋರಿಸಿದರೆ ಪೋಷಕರು ಬೈಯುತ್ತಾರೆ ಎಂಬ ಕಾರಣಕ್ಕೆ ಪೋಷಕರ ಬದಲು ತಾನೇ ಸಹಿ ಹಾಕಿ ವಾಪಾಸ್ ನೀಡಿದ್ದಾನೆ. ಇದರಿಂದ ಕೋಪಗೊಂಡ ಶಾಲಾ ಮುಖ್ಯಶಿಕ್ಷಕರು ತಂದೆಯನ್ನು ಶಾಲೆಗೆ ಕರೆದುಕೊಂಡು ಬರುವಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿಯು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದೀಗ ದರ್ಶನ್ ಸಾವಿನ ಬೆನ್ನಲ್ಲೇ ಪೋಷಕರು ಶಾಲೆಯ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದು, ತನ್ನ ಮಗನ ಸಾವಿಗೆ ಕಾರಣವಾಗಿರುವ ಶಿಕ್ಷಕರ ವಿರುದ್ದ ಕ್ರಮ ಕೈಗೊಂಡು, ತನ್ನ ಮಗನ ಸಾವಿಗೆ ನ್ಯಾಯ ಒದಗಿಸುವಂತೆ ಸುರತ್ಕಲ್ ಪೊಲೀಸ್ ಠಾಣೆಗೆ ದರ್ಶನ್ ತಂದೆ ಗೋಪಾಲ ಶೆಟ್ಟಿ ದೂರು ನೀಡಿದ್ದಾರೆ. ಅನಗತ್ಯವಾಗಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ ಶಾಲೆಯ ವಿರುದ್ದ ಕ್ರಮಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.