(ನ್ಯೂಸ್ ಕಡಬ) newskadaba.com ಮಂಗಳೂರು, ಅ.20. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅ. 22ರಂದು ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮುಖ್ಯಮಂತ್ರಿ 148.29 ಕೋಟಿ ರೂ.ಗಳ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ 104.21 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಉದ್ಘಾಟನೆಗೊಳ್ಳಲಿರುವ ಯೋಜನೆಗಳು:
ಬಿಸಿರೋಡ್‌ನಲ್ಲಿ 90 ಸೆಂಟ್ಸ್ ವಿಸ್ತೀರ್ಣದ ಜಮೀನಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಇತರ ಎಲ್ಲಾ ತಾಲೂಕು, ಜಿಲ್ಲೆಗಳಿಗಿಂತಲೂ ವಿಭಿನ್ನವಾದ ರೀತಿಯಲ್ಲಿ ಮಿನಿ ವಿಧಾನಸೌಧ ರಚನೆಗೊಂಡಿದೆ ಎಂದವರು ಹೇಳಿದರು. ಬಂಟ್ವಾಳ ಪೇಟೆಯಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಹೊಸತಾಗಿ ನಿರ್ಮಾಣಗೊಂಡ ನಿರೀಕ್ಷಣಾ ಮಂದಿರ ಕಟ್ಟಡ, ಬಿಸಿರೋಡ್‌ನಲ್ಲಿ 1.50 ಎಕರೆ ನಿವೇಶನದಲ್ಲಿ ಅಂದಾಜು 10 ಕೋಟಿ 7 ಲಕ್ಷ ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಹೈಟೆಕ್ ಬಸ್ಸು ನಿಲ್ದಾಣ ರಚನೆ, ಬಂಟ್ವಾಳದಲ್ಲಿ 30 ಹಾಸಿಗೆಗಳ ತಾಲೂಕು ಸರಕಾರಿ ಆಸ್ಪತ್ರೆಯನ್ನು 6.15 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ.
ಬಿ. ಮೂಡ ಗ್ರಾಮದಲ್ಲಿ ಮೆಸ್ಕಾಂ ಕಟ್ಟಡ ರಚನೆಯಾಗಿದ್ದು, ಈ ಕಟ್ಟಡದಲ್ಲಿ ವಿಭಾಗೀಯ ಕಚೇರಿ, 2 ಉಪ ವಿಭಾಗೀಯ ಕಚೇರಿ, ಎಚ್‌ಟಿ ಮತ್ತು ಎಲ್‌ಟಿ ಸಬ್ ಡಿವಿಸನ್ ಕಚೇರಿ, ಡಿವಿಜನಲ್ ಸ್ಟೋರ್ ಕಚೇರಿ, ಸೆಕ್ಷನ್ ಕಚೇರಿ, ಕ್ಯಾಶ್ ಕೌಂಟರ್, ಎಟಿಪಿಯನ್ನು ಒಳಗೊಂಡಿದೆ, ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಯನ್ನು ಮೂಲವಾಗಿರಿಸಿಕೊಂಡು ಬಂಟ್ವಾಳ ಪಟ್ಟಣಕ್ಕೆ 52.79 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ನೀರು ಸರಬರಾಜು ಯೋಜನೆಯ ಕಾಮಗಾರಿ ರಚನೆಯಾಗಿದೆ, ಬಂಟ್ವಾಳ ಐ.ಬಿ. ಪಕ್ಕದಲ್ಲಿ ನೇತ್ರಾವತಿ ನದಿ ತೀರದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಅರಣ್ಯ ಇಲಾಖೆ ಟ್ರೀ ಪಾರ್ಕ್ ನಿರ್ಮಿಸಿದೆ, ಬಂಟ್ವಾಳಕ್ಕೆ ಮಂಜೂರಾದ ನೂತನ ಆರ್‌ಟಿಓ ಕಚೇರಿ ಉದ್ಘಾಟನೆ, ಬಂಟ್ವಾಳ ತಾಲೂಕಿನ ಕನ್ಯಾನ, ಕರೋಪಾಡಿ, ಕೊಳ್ನಾಡು ಮತ್ತು ವಿಟ್ಲಪಡ್ನೂರು ಗ್ರಾಮಗಳ 79 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆ 25 ಕೋಟಿ 82 ಲಕ್ಷ ರೂ. ವೆಚ್ಚದಲ್ಲಿ ಸಂಗಬೆಟ್ಟುವಿನಲ್ಲಿ ಉದ್ಘಾಟನೆಗೊಳ್ಳಲಿದೆ ಅಲ್ಲದೆ ಇನ್ನೂ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.