(ನ್ಯೂಸ್ ಕಡಬ) newskadaba.com ಕಡಬ, ಫೆ.14. ಎರಡು ದಿನಗಳ ಹಿಂದಷ್ಟೇ ಕಡಬ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಜಿ ಕೆ.ಎಂ ಹನೀಫ್ ಅವರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದ ಅಪರಿಚಿತರು ಮೆಸೇಂಜರ್ ಮೂಲಕ ಹಲವರಿಗೆ ಹಣ ಕಳುಹಿಸಿಕೊಡುವಂತೆ ಮೆಸೇಜ್ ರವಾನಿಸಿದ್ದು, ಈ ನಡುವೆ ಇಂದು ಮತ್ತೆ ಕಡಬದ ಮತ್ತೋರ್ವ ವ್ಯಕ್ತಿಯನ್ನು ಗುರಿ ಮಾಡಲಾಗಿದೆ.
ಕಡಬದ ಪ್ರಸಿದ್ಧ ಭಾಗವತರಾದ ರಾಮಚಂದ್ರ ರೈ ಯವರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್‌ಮಾಡಿರುವ ದುಷ್ಕರ್ಮಿಗಳು ಅವರ ಸ್ನೇಹಿತರಿಗೆ ಮೆಸೆಂಜರ್ ಮೂಲಕ ಹಣ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಅದರಂತೆ ಮರ್ಧಾಳದ ಜಿನಿತ್ ಎಂಬವರಿಗೂ ಮೆಸೇಜ್ ಬಂದಿದ್ದು, ಕಡಬದ ಹನೀಫ್ ರವರ ಹೆಸರಿನಲ್ಲಿ ಮೋಸ ನಡೆದಿರುವುದನ್ನು ನೆನೆದ ಜಿನಿತ್ ತಕ್ಷಣವೇ ರಾಮಚಂದ್ರ ರವರನ್ನು ಸಂಪರ್ಕಿಸಿದಾಗ ಸತ್ಯಾಂಶ ಹೊರಬಂದಿದೆ. ದೂರದಲ್ಲೆಲ್ಲೋ ಕೇಳಿ ಬರುತ್ತಿದ್ದ ಸೈಬರ್ ಕ್ರೈಮ್ ವಂಚಕರು ಇದೀಗ ನಮ್ಮ ಊರಿಗೂ ಕಾಲಿಟ್ಟಿದ್ದು, ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯವಾಗಿದೆ.