(ನ್ಯೂಸ್ ಕಡಬ) newskadaba.com ಕಡಬ, ಫೆ.05. ಸುತ್ತು ಬಳಸಿ ಸಂಚರಿಸುವುದನ್ನು ತಪ್ಪಿಸಲು ಊರವರೇ ಸೇರಿಕೊಂಡು ನದಿಗೆ ಅಡ್ಡಲಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದು, ಗುರುವಾರದಂದು ಸಂಚಾರಕ್ಕೆ ಮುಕ್ತವಾಗಿದೆ.
ತಾಲೂಕು ಕೇಂದ್ರವಾಗಿರುವ ಕಡಬದಿಂದ ಎಡಮಂಗಲ ಸಂಪರ್ಕಿಸಲು ಸುತ್ತು ಬಳಸಿ 15 ಕಿಲೋಮೀಟರ್ ದೂರ ಸಂಚರಿಸುವುದಕ್ಕೆ ಇದೀಗ ಬ್ರೇಕ್ ಬಿದ್ದಿದ್ದು, ಕಡಬದಿಂದ ಪಿಜಕ್ಕಳ – ಪಾಲೋಳಿ ಮಾರ್ಗವಾಗಿ ಸಂಚರಿಸಿದರೆ ಕೇವಲ 5 ಕಿಲೋಮೀಟರ್ ಅಂತರದಲ್ಲಿ ಎಡಮಂಗಲವನ್ನು ಸಂಪರ್ಕಿಸಬಹುದಾಗಿದೆ. ಪಿಜಕ್ಕಳ ಸಮೀಪ ಪಾಲೋಳಿ ಎಂಬಲ್ಲಿ ಕುಮಾರಧಾರ ನದಿಗೆ ಊರವರೇ ಸೇರಿಕೊಂಡು ಅಡ್ಡಲಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ. ಕಳೆದ ಹಲವು ವರ್ಷಗಳ ಹಿಂದೆ ಇಲ್ಲಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ನೀರಿನ ರಭಸಕ್ಕೆ ಕೊಚ್ಚಿಹೋಗುತ್ತದೆ. ಆ ನಂತರ ಪ್ರತೀ ವರ್ಷ ಊರವರೇ ಸೇರಿಕೊಂಡು ದುರಸ್ತಿ ಮಾಡಿ ಸಂಚಾರಕ್ಕೆ ಮುಕ್ತಗೊಳಿಸುತ್ತಾರೆ. ಇದೀಗ ತಾತ್ಕಾಲಿಕ ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದು, ಇದರಿಂದಾಗಿ ಕಡಬ ಮತ್ತು ಎಡಮಂಗಲ ನಡುವೆ ಅಂತರ ಕಡಿಮೆಯಾಗಲಿದೆ.
ಇಲ್ಲಿ ಸರ್ವಋತು ಸೇತುವೆ ನಿರ್ಮಿಸಲು ಗ್ರಾಮಸ್ಥರು ಹಲವಾರು ವರ್ಷಗಳಿಂದ ಬೇಡಿಕೆಯನ್ನು ಸಲ್ಲಿಸುತ್ತಲೇ ಬಂದಿದ್ದು, ಗ್ರಾಮಸ್ಥರ ಬೇಡಿಕೆಗೆ ಮನ್ನಣೆ ದೊರೆತಿಲ್ಲ. ಕಳೆದ ವರ್ಷ ಅಂದಾಜು ಪಟ್ಟಿ ಮಾಡಲಾಗಿದ್ದು, ಅನುಮೋದನೆಯ ಹಂತದಲ್ಲಿದೆ ಎನ್ನಲಾಗಿದೆ. ಸರ್ವಋತು ಸೇತುವೆ ನಿರ್ಮಾಣವಾದಲ್ಲಿ ನೂರಾರು ಪರಿಸರದ ನಿವಾಸಿಗಳಿಗೂ ಅನುಕೂಲವಾಗಲಿದ್ದು, ಆದಷ್ಟು ಬೇಗ ಸೇತುವೆ ನಿರ್ಮಾಣವಾಗಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.