ಉಪ್ಪಿನಂಗಡಿ: ಬೈಕ್ – ಬಸ್ ಢಿಕ್ಕಿ ► ದಂಪತಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.17. ಬೈಕ್ ಹಾಗೂ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಗಂಡ-ಹೆಂಡತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಮೇಲೆ ನಡೆದಿದೆ.

ಮೃತಪಟ್ಟ ದಂಪತಿಯನ್ನು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೊಯಿಲತಡ್ಡ ನಿವಾಸಿ ಶೀನಪ್ಪ ಆಚಾರ್ಯ ಹಾಗೂ ಅವರ ಪತ್ನಿ ವಿಶಾಲಾಕ್ಷಿ ಎಂದು ಗುರುತಿಸಲಾಗಿದೆ. ಇವರು ಉಪ್ಪಿನಂಗಡಿಯಿಂದ ಗುರುವಾಯನಕೆರೆ ಕಡೆಗೆ ತೆರಳುತಿದ್ದಾಗ ಉಪ್ಪಿನಂಗಡಿಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ವರುಣ್ ಟ್ರಾವೆಲ್ಸ್ ಎಂಬ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ್ದು, ಢಿಕ್ಕಿಯ ರಭಸಕ್ಕೆ ದಂಪತಿ ಬಸ್ಸಿನಡಿಗೆ ಎಸೆಯಲ್ಪಟ್ಟು ಬಸ್ಸಿನ ಚಕ್ರಗಳು ಶೀನಪ್ಪ ಆಚಾರ್ಯ ಅವರ ಮೇಲೆ ಹರಿದಿದ್ದು ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡ ವಿಶಾಲಾಕ್ಷಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.

Scroll to Top