ಹಳೇ ಕಾನೂನು ಬಳಸಿ ಎಂ.ಆರ್.ಪಿ.ಎಲ್.ಗೆ ಭೂಸ್ವಾಧೀನ: ಮುಖ್ಯಮಂತ್ರಿಗೆ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.08. ಕೆಐಎಡಿಬಿಯು ಹಳೇ ಕಾನೂನನ್ನು ಬಳಕೆ ಮಾಡಿಕೊಂಡು ಎಂ ಆರ್ ಪಿಎಲ್ ವಿಸ್ತರಣೆಗಾಗಿ ರೈತರ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡುತ್ತಿದೆ ಎಂದು ಮಂಗಳೂರು ವಿಶೇಷ ಆರ್ಥಿಕ ವಲಯ ವಿರೋಧಿ ಹೋರಾಟಗಾರ್ತಿ ವಿದ್ಯಾ ದಿನಕರ್ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ವಿದ್ಯಾ ದಿನಕರ್ ನೇತೃತ್ವದ ನಿಯೋಗ, ಹಳೇ ಕಾನೂನನ್ನು ಬಳಕೆ ಮಾಡಿಕೊಂಡು ಭೂಸ್ವಾಧೀನ ಮಾಡಬಾರದು ಎಂದು ಈಗಾಗಲೇ ಹೈಕೋರ್ಟ್ ಆದೇಶ ನೀಡಿದೆ. ಯುಪಿಎ ಸರಕಾರ 2013 ರಲ್ಲಿ ಹೊಸ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ರಾಜ್ಯ ಸರಕಾರದ ಕೆಐಎಡಿಬಿ ಹಳೇ ಕಾನೂನಿನಂತೆಯೇ ಭೂಸ್ವಾಧೀನಕ್ಕೆ ನೋಟಿಸ್ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ರು.

ಎಂ ಆರ್ ಪಿಎಲ್ ವಿಸ್ತರಣೆಗಾಗಿ ಕೆಐಎಡಿಬಿ ಕುತ್ತೆತ್ತೂರು ಮತ್ತು ಪೆರ್ಮುದೆ ಗ್ರಾಮಗಳಲ್ಲಿ 850 ಎಕರೆ ಭೂಮಿ ಸ್ವಾಧೀನ ಮಾಡಲು ನಿರ್ಧರಿಸಿದೆ. ಆದರೆ ಎಂಆರ್ ಪಿಎಲ್ ಆವರಣಕ್ಕೆ ಹೊಂದಿಕೊಂಡಿರುವ ತೋಕೂರು ಗ್ರಾಮದಲ್ಲಿ ಜೆಸ್ಕೋಗಾಗಿ ವಶಪಡಿಸಿಕೊಂಡಿರುವ 900 ಎಕರೆ ಹಲವು ವರ್ಷಗಳಿಂದ ಖಾಲಿ ಬಿದ್ದಿದೆ. ಜೆಸ್ಕೋ ಅಥವಾ ಯಾವುದೇ ಕೈಗಾರಿಕೆಗಳು ಬಳಕೆ ಮಾಡದ ಈ ಭೂಮಿಯನ್ನು ಎಂ ಆರ್ ಪಿಎಲ್ ವಿಸ್ತರಣೆಗೆ ಬಳಸುವ ಅವಕಾಶವಿದ್ದರೂ ರೈತರಿಂದ ವಿನಾಕಾರಣ ಭೂಮಿ ಕಿತ್ತುಕೊಳ್ಳುವ ಯತ್ನ ನಡೆಸಲಾಗುತ್ತಿದೆ. ಮತ್ತೊಂದೆಡೆ ಮಂಗಳೂರು ವಿಶೇಷ ಆರ್ಥಿಕ ವಲಯ ರೈತರಿಂದ ವಶಪಡಿಸಿಕೊಂಡಿರುವ ಜಮೀನಿನಲ್ಲಿ ಸುಮಾರು 750 ಎಕರೆಯಷ್ಟುಜಾಗ ಇನ್ನೂ ಕೈಗಾರಿಕೆಗಳ ಸ್ಥಾಪನೆಯಾಗದೆ  ಖಾಲಿ ಬಿದ್ದಿದೆ. ಆದರೂ ಕೆಐಎಡಿಬಿ ರಿಯಲ್ ಎಸ್ಟೇಟ್ ಮಾದರಿಯಲ್ಲಿ ಭೂಮಿ ವಶಪಡಿಸಿಕೊಳ್ಳುವ ಉದ್ದೇಶವೇನು ? ಎಂದು ವಿದ್ಯಾ ದಿನಕರ್ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ವರದಿಯನ್ನೇ ನೀಡಿಲ್ಲ…!

Also Read  ➤ ರಾಜ್ಯಸ್ಥಾನ ವಿಷಾನಿಲದಿಂದ ಮೂವರು ಮೃತ್ಯು..

ಈ ಹಿಂದೆ ವಿದ್ಯಾದಿನಕರ್ ನೇತೃತ್ವದಲ್ಲಿ ರೈತರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಅನಗತ್ಯ ಭೂಸ್ವಾಧೀನದ ಬಗ್ಗೆ ದೂರು ನೀಡಿತ್ತು. ನಿನ್ನೆ ಅದನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೈಗಾರಿಕೆಗಾಗಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ಬಳಕೆ ಮಾಡಿದೆ ಉಳಿಸಿಕೊಂಡಿರುವ ಭೂಮಿ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗೆ ಜನವರಿಯಲ್ಲಿ ಸೂಚಿಸಿದ್ದೆ. ಆದರೆ ಈವರೆಗೂ ಜಿಲ್ಲಾಧಿಕಾರಿ ವರದಿ ನೀಡಿಲ್ಲ. ಮುಖ್ಯಕಾರ್ಯದರ್ಶಿ ಕಚೇರಿಯಿಂದ ಈ ಬಗ್ಗೆ ಸ್ಪಷ್ಟನೆ ಕೇಳಿ ತಕ್ಷಣ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಕೆಐಎಡಿಬಿ ಹಳೇ ಕಾಯ್ದೆಯನ್ನೇ ಭೂಸ್ವಾಧೀನಕ್ಕೆ ಬಳಸುತ್ತಿರುವುದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Also Read  ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆ ಕಡ್ಯ-ಕೊಣಾಜೆ ➤ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ

 ನಿಯೋಗದಲ್ಲಿ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಲಾರೆನ್ಸ್ ಡಿಕುನ್ಹ, ರಾಮಚಂದ್ರ ಭಟ್, ಧೀರಜ್ ಉಪಸ್ಥಿತರಿದ್ದರು.

error: Content is protected !!
Scroll to Top