(ನ್ಯೂಸ್ ಕಡಬ) newskadaba.com ಮಂಗಳೂರು, ಜ. 14. ಪ್ರಸ್ತುತ ಸಮಾಜದಲ್ಲಿ ಯುವಕ-ಯುವತಿಯರು ತಂಬಾಕು ಸೇವನೆಯ ದಾಸರಾಗುತ್ತಿರುವ ಬಗ್ಗೆ ಚಿಂತಿಸಬೇಕಾಗಿದೆ. ಯುವಕ ಯುವತಿಯರ ಬದುಕನ್ನು ಕಾರ್ಯೋನ್ಮುಖವಾಗಿ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್ ಸಿ ತಿಳಿಸಿದರು.
ಜನವರಿ 12 ರಂದು ದ.ಕ ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣದ ಅಂಗವಾಗಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮವು ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ರಾಜಶೇಖರ ಹೆಬ್ಬಾರ್ ರವರು ದಿನದಿಂದ ದಿನಕ್ಕೆ ಕ್ಯಾನ್ಸರ್ ಪೀಡಿತರು ಹೆಚ್ಚಾಗುತ್ತಿದ್ದು ಅದರಲ್ಲೂ ಬಾಯಿ ಕ್ಯಾನ್ಸರ್‍ನಿಂದ ಬಳಲುತ್ತಿರುವುದು ಕಂಡುಬರುತ್ತಿದ್ದು ಇದಕ್ಕೆ ಮುಖ್ಯ ಕಾರಣ ತಂಬಾಕು, ಮಾದಕ ವಸ್ತುಗಳ ಸೇವನೆ ಎಂದರು. ಸಮಾಜದ ಸ್ವಸ್ಥ ಜೀವನಕ್ಕಾಗಿ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಯುವಜನರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಲಹೆಗಾರ ಡಾ. ಹನುಮಂತರಾಯಪ್ಪ ಮಾತನಾಡಿ, ತಂಬಾಕು ಸೇವನೆಯಿಂದ ವ್ಯಕ್ತಿಗಳ ಆರೋಗ್ಯದ ಮೇಲೆ ಉಂಟಾಗುವ ರೋಗಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ತಂಬಾಕು ಮತ್ತಿತ್ತರ ಮಾದಕ ವಸ್ತುಗಳ ಬಗ್ಗೆ ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟರು. ಈಗಾಗಲೇ 3 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ತಂಬಾಕು ನಿಯಂತ್ರಣ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಶೇಷಪ್ಪ ಅಮೀನ್, ಪ್ರೊ. ತ್ರಿಶಾಂತ್ ಕುಮಾರ್, ಪ್ರೊ. ಅರುಣಕುಮಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಶ್ವಿನ್ ನಿರೂಪಿಸಿ, ಅಜೇಯ ವಂದನಾರ್ಪಣೆ ಮಾಡಿದರು.