(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.12. ವಿಶ್ವದಾದ್ಯಂತ ಹಬ್ಬಿದ್ದ ಕೊರೊನಾ ಸೋಂಕನ್ನು ಹೋಗಲಾಡಿಸಲು ದೇಶದಲ್ಲಿ ಜನವರಿ 16 ರಿಂದ ಬೃಹತ್ ಕೊರೋನಾ ಲಸಿಕಾ ಅಭಿಯಾನ ನಡೆಯಲಿದ್ದು, ಇದಕ್ಕಾಗಿ ದೇಶದ ಪ್ರಮುಖ ನಗರಗಳಿಗೆ ಕರೋನಾ ಲಸಿಕೆಯನ್ನು ವಿಮಾನದ ಮೂಲಕ ರವಾನಿಸಲಾಯಿತು.
ಪುಣೆಯ ಸೆರಂ ಇನ್ಸ್ಟಿಟ್ಯೂಟ್ ನಿಂದ ಹೊರಟ ಕೊರೋನಾ ಲಸಿಕೆಯು ಪುಣೆ ವಿಮಾನದ ನಿಲ್ದಾಣದ ಮೂಲಕ ದೇಶದ ವಿವಿಧ ನಗರಗಳಿಗೆ ಕಳುಹಿಸಲಾಯಿತು. ಏರ್ ಇಂಡಿಯಾ, ಸ್ಪೈಸ್ ಜೆಟ್, ಗೋ ಏರ್, ಇಂಡಿಗೋ ಸೇರಿದಂತೆ ಒಟ್ಟು 9 ವಿಮಾನಗಳು ದೇಶದ ಪ್ರಮುಖ ನಗರಗಳಿಗೆ ಲಸಿಕೆಯನ್ನು ಹೊತ್ತೊಯ್ದವು. ಮೊದಲ ಹಂತದಲ್ಲಿ 56 ಲಕ್ಷ ಲಸಿಕೆಗಳನ್ನು ರವಾನಿಸಲಾಗಿದ್ದು, ಇನ್ನುಳಿದಂತೆ ಹಂತ ಹಂತವಾಗಿ ಕೋವಿಶೀಲ್ಡ್ ಪೂರೈಸಲಾಗುತ್ತದೆ. ಬೆಂಗಳೂರಿಗೆ ಆಗಮಿಸಿದ ಲಸಿಕೆಗಳನ್ನು ಆನಂದರಾವ್ ವೃತ್ತದಲ್ಲಿರುವ ಶೀತಲೀಕರಣ ಘಟಕದಲ್ಲಿ ಸಂಗ್ರಹಿಸಿಡಲಾಗಿದ್ದು, ಅಲ್ಲಿಂದ ರಾಜ್ಯದ ವಿವಿಧ ಭಾಗಗಳಿಗೆ ರವಾನಿಸಲಾಗುತ್ತದೆ.