ತಾಯಿಯ ಜೊತೆ ಮಲಗಿದ್ದ 11 ತಿಂಗಳ ಕಂದಮ್ಮ ನಾಪತ್ತೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ. 28. ಶ್ವೇತಾ ಮತ್ತು ಶ್ರೀನಿವಾಸ್ ಎಂಬ ದಂಪತಿಗಳ 11 ತಿಂಗಳ ಹೆಣ್ಣು ಮಗು ಅನಿಶಾಳನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ.

ಮನೆಗೆ ನುಗ್ಗಿದ ಕಳ್ಳರು ತಂದೆ-ತಾಯಿಯ ಜೊತೆ ಮಲಗಿದ್ದ ಕಂದಮ್ಮನನ್ನು ಕದ್ದು ಪರಾರಿಯಾಗಿದ್ದಾರೆ. 2 ವರ್ಷದ ಹಿಂದೆ ಶ್ವೇತಾ ಮತ್ತು ಶ್ರೀನಿವಾಸ್ ವಿವಾಹವಾಗಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಗಳಿಗೆ ಒಬ್ಬಳೇ ಮಗಳಿದ್ದು, ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಅಲ್ಲದೇ ಶ್ವೇತಾ ಮತ್ತು ಶ್ರೀನಿವಾಸ್ ದಂಪತಿ ಇತ್ತೀಚೆಗೆ ಹೊಸಮನೆಯೊಂದನ್ನು ಕಟ್ಟಿಸಿದ್ದು, ಆ ಮನೆಯ ಬಾಗಿಲು ಸರಿಯಾಗಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ರಾತ್ರಿ ವೇಳೆ ಮನೆಗೆ ನುಗ್ಗಿ ಮಗುವನ್ನು ಕಳ್ಳತನ ಮಾಡಿದ್ದಾರೆ. ಈ ಬಡಾವಣೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ನಾಲ್ವರು ಹೆಂಗಸರು ಬರುತ್ತಿದ್ದು, ಮಗು ಕಾಣೆಯಾದ ಬಳಿಕ ಮಹಿಳೆಯರು ಸಹ ನಾಪತ್ತೆಯಾಗಿದ್ದಾರೆ. ಆದ್ದರಿಂದ ಅವರೇ ಕದ್ದಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Scroll to Top