ಕಡಬ: ಶಾಲೆಗೆಂದು ತೆರಳಿದ ಹೈಸ್ಕೂಲ್ ವಿದ್ಯಾರ್ಥಿನಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಡಿ.25. ಶಾಲೆಗೆಂದು ತೆರಳಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯೋರ್ವಳು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಮರ್ಧಾಳದಿಂದ ವರದಿಯಾಗಿದೆ.

ನಾಪತ್ತೆಯಾದ ವಿದ್ಯಾರ್ಥಿನಿಯನ್ನು ಐತ್ತೂರು ಗ್ರಾಮದ ಬೆತ್ತೋಡಿ ಸಿ.ಆರ್.ಸಿ ಕಾಲನಿಯ ನಿವಾಸಿ ಜಗದೀಶ ಎಂಬವರ ಪುತ್ರಿ ನರ್ಮದಾ ಬಿ.ಜೆ (16) ಎಂದು ಗುರುತಿಸಲಾಗಿದೆ. ಮರ್ದಾಳದ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಈಕೆ ಬುಧವಾರದಂದು ಶಾಲೆಗೆಂದು ತೆರಳಿದ್ದು, ಮನೆಗೆ ಬಾರದ ಹಿನ್ನೆಲೆಯಲ್ಲಿ ಅಧ್ಯಾಪಕರಲ್ಲಿ ವಿಚಾರಿಸಿದಾಗ ಶಾಲೆಗೆ ರಜೆ ಇರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿರುವ ಜಗದೀಶ್ ಅವರು ನಾಪತ್ತೆಯಾಗಿರುವ ಮಗಳನ್ನು ಪತ್ತೆ ಹಚ್ಚಿಕೊಡುವಂತೆ ವಿನಂತಿಸಿಕೊಂಡಿದ್ದಾರೆ. ಹಳದಿ ಬಣ್ಣದ ಟಾಪ್, ಬಿಳಿಬಣ್ಣದ ಚೂಡಿದಾರ ಧರಿಸಿರುವ ಈಕೆ ಕನ್ನಡ, ತುಳು, ತಮಿಳು ಭಾಷೆ ಮಾತನಾಡುತ್ತಾಳೆ. ಮಾಹಿತಿ ಕಂಡು ಬಂದಲ್ಲಿ ಕಡಬ ಪೊಲೀಸ್ ಠಾಣೆ 08251-260044 ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

Scroll to Top