(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಡಿ.11: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು, ರೆಂಜಿಲಾಡಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಕೃಷಿ ಹಾನಿ ಉಂಟಾಗಿದೆ.
ರೆಂಜಿಲಾಡಿ ಗ್ರಾಮದ ಕೃಷಿಕ ಕೆರೆತೋಟ ಮೃತ್ಯುಂಜಯ ಬೀಡೆ ಅವರ ಅಲಾಟ ಎಂಬಲ್ಲಿಯ ಕೃಷಿ ತೋಟಕ್ಕೆ ಡಿ.9ರ ರಾತ್ರಿ ಕಾಡಾನೆ ನುಗ್ಗಿ 250ಕ್ಕೂ ಅಧಿಕ ಅಡಿಕೆ ಮರ, 25ಕ್ಕೂ ಅಧಿಕ ಬಾಳೆ ಕೃಷಿಯನ್ನು ಪುಡಿಗೈದಿದೆ. ತಡೆ ಬೇಲಿ ಹಾಗೂ ನೀರಿನ ಪೈಪ್ ಕಾಡಾನೆ ದಾಳಿಗೆ ಹಾನಿಗೊಳಗಾಗಿದೆ. ಪರಿಣಾಮ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ರೆಂಜಿಲಾಡಿ ಅರಣ್ಯ ರಕ್ಷಕ ಶೀನಪ್ಪ ಗೌಡ, ಸಿಬ್ಬಂದಿಗಳೊಂದಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲ ದಿನಗಳಿಂದ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ಬಳಕ್ಕ ಭಾಗದಲ್ಲಿ ಕಾಡಾನೆಗಳು ನಿರಂತರ ಸಂಚರಿಸುತ್ತಿದ್ದವು. ಕಾಡಾನೆ ಹಾವಳಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.