ಲೂಟಿಕೋರ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ: ರಮೇಶ್‌ಕುಮಾರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.6. ಬಡ ಜನರನ್ನು ಲೂಟಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಎರಡು ವಾರಗಳಲ್ಲಿ ಕಡಿವಾಣ ಹಾಕಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ಅವರು ಮಂಗಳವಾರ ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆಗೆ ಚಾಲನೆ ಹಾಗೂ 25 ಹಾಸಿಗೆಗಳ ಡಯಾಲಿಸಿಸ್ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಖಾಸಗಿ ಆಸ್ಪತ್ರೆಗಳು ಜನರಿಂದ ಚಿಕಿತ್ಸೆಗಾಗಿ ದುಪ್ಪಟ್ಟು ಹಣವನ್ನು ಲೂಟಿಮಾಡುತ್ತಿದ್ದು, ಇದು ನಮ್ಮ ಗಮನಕ್ಕೂ ಬಂದಿದೆ. ಈ ಸಂಬಂಧ ಸದ್ಯದಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಚರ್ಚಿಸಿ ಅವರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಎರಡು ವಾರಗಳಲ್ಲಿ ರಾಜ್ಯಕ್ಕೆ ಒಳ್ಳೆಯ ಸುದ್ದಿಯನ್ನು ನೀಡಲಿದ್ದೇನೆ ಎಂದು ಭರವಸೆ ನೀಡಿದರು.

ಅನಗತ್ಯ ಅಪಪ್ರಚಾರ: ಜನರ ಮನಸ್ಸನ್ನೇ ಅರ್ಥ ಮಾಡಿಕೊಳ್ಳುವುದು ಕಷ್ಟ. ಚಿಕಿತ್ಸೆಯ ಮೊತ್ತ ಆಸ್ಪತ್ರೆಗಳಲ್ಲಿ ಹೆಚ್ಚಿದ್ದರೂ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳ ಸಂಖ್ಯೆ ಕಮ್ಮಿಯಾಗಿಲ್ಲ. ಆದರೆ, ಸರಕಾರಿ ಆಸ್ಪತ್ರೆಗೆ ಹೋಗುವುದೆಂದರೆ ಭಯ ಕಾಡುತ್ತದೆ. ಅಲ್ಲಿಗೆ ಹೋದರೆ ಮತ್ತೆ ಬರುವುದಿಲ್ಲ ಎಂಬ ಬಗ್ಗೆ ಅನಗತ್ಯವಾಗಿ ಪ್ರಚಾರ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸರಕಾರಿ ಆಸ್ಪತ್ರೆಗಳ ವಿರುದ್ಧ ಅಪಪ್ರಚಾರ ಮಾಡಲೆಂದೇ ಒಂದು ಗುಂಪು ಇದೆ. ಸರಕಾರಿ ಆಸ್ಪತ್ರೆಗಳಲ್ಲಿ ಒಂದು ಸಣ್ಣ ತೊಂದರೆಯಾದರೆ ಸಾಕು ಅದನ್ನೇ ದೊಡ್ಡದು ಮಾಡುತ್ತಾರೆ. ಏನಾದರು ಆದರೆ ಅದನ್ನೂ ನಮ್ಮ ಗಮನಕ್ಕೆ ತನ್ನಿ. ಸಮಸ್ಯೆಯನ್ನು ಪರಿಹರಿಸದಷ್ಟು ಅಹಂಕಾರಿಗಳು ನಾವಲ್ಲ ಎಂದು ಸರಕಾರಿ ಆಸ್ಪತ್ರೆಗಳ ವಿರುದ್ಧ ಟೀಕೆ ಮಾಡುತ್ತಿರುವವರಿಗೆ ಸೂಚಿಸಿದರು. ರಾಜ್ಯದ ಜನತೆಗೆ ಉತ್ತಮ ಆರೋಗ್ಯ ಸಿಗಬೇಕು ಎಂಬ ಕಾರಣಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದೇನೆ. ಬಡವರಿಗೆ ಸರಕಾರಿ ಆಸ್ಪತ್ರೆಗಳೇ ದೇವಾಲಯ. ಸರಕಾರಿ ಆಸ್ಪತ್ರೆಗಳ ಸಿಬ್ಬಂದಿಗಳು ಕೀಳರಿಮೆ ಬೀಡಬೇಕು. ಆಸ್ಪತ್ರೆ ನಮ್ಮದು ಎಂಬ ವಿಶ್ವಾಸವನ್ನು ಬೆಳೆಸಿಕೊಂಡು ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು ಎಂದು ಸಲಹೆ ನೀಡಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಶ್ರವಣದೋಷ ಇರುವ ಮಕ್ಕಳಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕಾಕ್ಲಿಯಾರ್ ಇಂಪ್ಲಾಂಟ್‌ನ್ನು ಅಳವಡಿಸುವುದು ಅಗತ್ಯ. ರಾಜ್ಯದಲ್ಲಿರುವ 1,939 ರೋಗಿಗಳಿಗೆ ಅತಿ ಶೀಘ್ರದಲ್ಲೇ ಕಾಕ್ಲಿಯಾರ್ ಇಂಪ್ಲಾಂಟ್‌ನ್ನು ಅಳವಡಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿಬಿಎಂಪಿ ಸದಸ್ಯ ಆರ್.ಎಸ್. ಸತ್ಯನಾರಾಯಣ ಸೇರಿದಂತೆ ಇತರರು ಇದ್ದರು.

error: Content is protected !!
Scroll to Top