(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.5. ಮೂಢ ನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಲು ರಾಜ್ಯ ಸರಕಾರವು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಅವರು ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಿಯಮ 69ರಡಿಯಲ್ಲಿ ಬರಗಾಲದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುವ ವೇಳೆ ಮಧ್ಯಪ್ರವೇಶಿಸಿ ಈ ಹೇಳಿಕೆ ನೀಡಿದರು.
ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿದ ಬಳಿಕ ನಂಬಿಕೆ ಹಾಗೂ ಮೂಢ ನಂಬಿಕೆಗಳ ಕುರಿತು ಚರ್ಚೆ ಮಾಡೋಣ. ವೈಯಕ್ತಿಕವಾಗಿ ನಾನು ವೌಢ್ಯಗಳನ್ನು ವಿರೋಧಿಸುತ್ತೇನೆ. ನಂಬಿಕೆ ಎಂಬುದು ವೈಯಕ್ತಿಕ. ಆದರೆ, ಅಂತಹ ನಂಬಿಕೆಗಳಿಂದ ಸಮಾಜದ ಶೋಷಣೆ ಹಾಗೂ ಹಾನಿಯಾದರೆ ಅವು ವೌಢ್ಯಗಳಾಗುತ್ತವೆ ಎಂದು ಮುಖ್ಯಮಂತ್ರಿ ಹೇಳಿದರು. ಮಳೆಗಾಗಿ ಪೂಜೆ, ಹೋಮ ಮಾಡಿರುವುದು ಸಚಿವ ಎಂ.ಬಿ.ಪಾಟೀಲರ ವೈಯಕ್ತಿಕ ನಂಬಿಕೆ. ಅವರು ಸಚಿವರಾಗಿ ಈ ಹೋಮ ಮಾಡಿಸಿಲ್ಲ. ಸ್ವಂತ ಖರ್ಚಿನಲ್ಲಿ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರಕಾರದಿಂದ ಯಾವುದೆ ರೀತಿಯ ಆರ್ಥಿಕ ನೆರವನ್ನು ಒದಗಿಸಿಲ್ಲ. ತಲಕಾವೇರಿಯಲ್ಲಿ ಪೂಜೆ ಮಾಡಿಸಿದ್ದನ್ನೆ ಅಪರಾಧವೆಂದು ಬಿಂಬಿಸಬೇಡಿ ಎಂದು ಸಿದ್ದರಾಮಯ್ಯ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ, ಸಚಿವರ ಆಗಮನಕ್ಕಿಂತ ಮುಂಚೆಯೆ ಇಲಾಖೆಯ ಮುಖ್ಯ ಎಂಜಿನಿಯರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ತಲಕಾವೇರಿಯಲ್ಲಿ ಉಪಸ್ಥಿತರಿದ್ದು, ಅನ್ನದಾನ ಎಲ್ಲ ಮಾಡಿದ್ದಾರೆ ಎಂದರು.
ಸಚಿವರು ಭೇಟಿ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಅಧಿಕಾರಿಗಳು ತಲಕಾವೇರಿಗೆ ಹೋಗಿದ್ದಾರೆ. ನೀವು ಸಚಿವರಾಗಿ ಕೆಲಸ ಮಾಡಿಲ್ಲ, ಆದುದರಿಂದ, ಅದರ ಬಗ್ಗೆ ನಿಮಗೆ ಗೊತ್ತಾಗುವುದಿಲ್ಲ. ನೀವು ಆ ಪೂಜೆಗೆ ಹೋಗದೆ ಇದ್ದರೆ, ಅಲ್ಲಿ ಯಾರು ಯಾರು ಉಪಸ್ಥಿತರಿದ್ದರು ಎಂಬ ಮಾಹಿತಿ ಹೇಗೆ ಗೊತ್ತಾಯಿತು ಎಂದು ಮುಖ್ಯಮಂತ್ರಿ ಕೆಣಕಿದರು. ಅದಕ್ಕೆ ಉತ್ತರಿಸಿದ ಕೆ.ಜಿ.ಬೋಪಯ್ಯ, ನಿಮ್ಮ ಮಾದರಿಯಲ್ಲೆ ನಮಗೂ ಮಾಹಿತಿಯ ಮೂಲಗಳು ಇರುತ್ತವೆ. ಆ ಮೂಲಕ ನಮಗೆ ಅಂದು ಪೂಜೆಯಲ್ಲಿ ಯಾರೂ ಯಾರೂ ಪಾಲ್ಗೊಂಡಿದ್ದರು. ಯಾರು ಯಾರು ಯಾರಿಗೆ ಅನ್ನದಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಿದೆ ಎಂದರು.
ಆನಂತರ ಮಾತನಾಡಿದ ಬಿಜೆಪಿ ಸದಸ್ಯ ಸಿ.ಟಿ.ರವಿ, ಎಂ.ಬಿ.ಪಾಟೀಲ್ ಪರ್ಜನ್ಯ ಹೋಮ ಮಾಡಿದ್ದಕ್ಕೆ ಖಂಡಿತ ನನ್ನ ಬೆಂಬಲವಿದೆ. ನಮ್ಮನ್ನು ಮೀರಿದ ಅಲೌಕಿಕವಾದ ಶಕ್ತಿ ಇದೆ ಅದನ್ನು ನಾನು ನಂಬುತ್ತೇನೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಯಾವ ಆಚರಣೆಗಳಿಂದ ಸಮಾಜಕ್ಕೆ ಹಾನಿ, ಶೋಷಣೆ ಆಗುತ್ತದೆಯೋ ಅದು ವೌಢ್ಯ. ಅದನ್ನು ವಿರೋಧಿಸಬೇಕು. ಪೂಜೆ ಮಾಡುವುದರಿಂದ ಸಮಾಜಕ್ಕೆ ಯಾವ ಹಾನಿ ಆಗುವುದಿಲ್ಲ. ತಿರುಪತಿಗೆ ಹೋಗಿ ಬರುವುದು ನಂಬಿಕೆ. ಪೂಜೆ ಮಾಡುವುದು, ದೇವರು ಇದ್ದಾನೆ ಎಂಬುದು ನಂಬಿಕೆ. ಅದರಿಂದ, ಸಮಾಜಕ್ಕೆ ಹಾನಿ ಇಲ್ಲ ಎಂದಾದರೆ ನಾವು ವಿರೊೀಧಿಸುವುದರಲ್ಲಿ ಅರ್ಥವಿಲ್ಲ ಎಂದರು. ಇದಕ್ಕೂ ಮುನ್ನ ಮಾತನಾಡಿದ ಜಗದೀಶ್ ಶೆಟ್ಟರ್, ಬರ ಪರಿಹಾರಕ್ಕೆ ಎಂ.ಬಿ.ಪಾಟೀಲ್ ಪರ್ಜನ್ಯ ಹೋಮದ ಪರಿಹಾರ ಕಂಡುಕೊಂಡಿದ್ದಾರೆ. ಬಸವಣ್ಣನ ಕರ್ಮಭೂಮಿಯಿಂದ ಬಂದ ಸಚಿವರು ಈ ರೀತಿ ಮಾಡುವುದು ಸರಿಯೇ, ಮುಖ್ಯಮಂತ್ರಿ ಇಷ್ಟಾದರೂ ಏಕೆ ಸುಮ್ಮನಿದ್ದಾರೆ. ಜಯಚಂದ್ರ ಅವರು ಎಂ.ಬಿ.ಪಾಟೀಲರ ಕಿವಿ ಹಿಂಡಬೇಕು. ಅವರು ವೈಯಕ್ತಿಕ ಎಂದು ಹೇಳುವುದಾದರೆ ಅವರನ್ನು ಸಚಿವ ಸ್ಥಾನದಿಂದ ತೆಗೆಯಿರಿ ಎಂದು ಆಗ್ರಹಿಸಿದರು.
ವೌಢ್ಯ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಮೂರು ವರ್ಷಗಳಿಂದ ಮುಖ್ಯಮಂತ್ರಿ ಹೇಳುತ್ತಲೆ ಇದ್ದಾರೆ. ವೈಯಕ್ತಿಕವಾಗಿ ನಾನು ಬಸವಣ್ಣನ ಅನುಯಾಯಿ. ವೌಢ್ಯವನ್ನು ವಿರೋಧಿಸುತ್ತೇನೆ. ತಾನು ಮುಖ್ಯಮಂತ್ರಿಯಾಗಿದ್ದ ವೇಳೆ 10 ತಿಂಗಳ ಅಧಿಕಾರವಧಿಯಲ್ಲಿ ಮೂರು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದೇನೆ ಎಂದು ಅವರು ಹೇಳಿದರು. ತಿರುಪತಿ, ಕೊಲ್ಲೂರಿಗೆ ಹೋಗಿ ದೇವರ ದರ್ಶನ ಮಾಡಿ ಬರುವುದು ನಂಬಿಕೆ. ಆದರೆ, ಅಲ್ಲಿಗೆ ಹೋದ್ರೆ ಮಾತ್ರ ಒಳ್ಳೆಯದಾಗುತ್ತದೆ ಎಂಬುದು ಮೂಢ ನಂಬಿಕೆ. ವೈಯಕ್ತಿಕವಾಗಿ ನೀವು ಏನೇ ಮಾಡಿದರೂ ಅದು ನಂಬಿಕೆ. ಆದರೆ, ಸಾರ್ವಜನಿಕ ಜೀವನದಲ್ಲಿ ಇರುವವರು ಮೂಢ ನಂಬಿಕೆಗಳನ್ನು ಪ್ರೋತ್ಸಾಹಿಸಬಾರದು ಎಂದು ಶೆಟ್ಟರ್ ಹೇಳಿದರು. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಸತತ ಬರಗಾಲವಿದೆ. 160 ತಾಲೂಕುಗಳನ್ನು ಸರಕಾರ ಬರಪೀಡಿತ ಎಂದು ಘೋಷಿಸಿದೆ. ಮಳೆಗಾಗಿ ಪರ್ಜನ್ಯ ಯಾಗ ಮಾಡುವ ಆಲೋಚನೆ ಜಲಸಂಪನ್ಮೂಲ ಸಚಿವರಿಗೆ ಕೊನೆಯ ವರ್ಷವೇ ಯಾಕೆ ಹೊಳೆದಿದೆ. ಆರಂಭಿಕ ವರ್ಷಗಳಲ್ಲಿ ಯಾಕೆ ಈ ಪ್ರಯತ್ನ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.