ಉಪ್ಪಿನಂಗಡಿ: ಪಿಎಫ್ಐ ವಲಯ ಸಮಿತಿ ವತಿಯಿಂದ ಯುಪಿ ಸರಕಾರದ ನಿರಾಧಾರ ಆರೋಪಗಳು ಹಾಗೂ ಯೋಗಿ ಸರಕಾರದ ವಿರುದ್ದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 09. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯ ಸಮಿತಿ ವತಿಯಿಂದ ಯುಪಿ ಸರಕಾರವು ಪಿಎಫ್ಐ ಸಂಘಟನೆಯ ಮೇಲಿನ ನಿರಾಧಾರ ಆರೋಪಗಳು ಮತ್ತು ಹತ್ರಾಸ್ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ನೀಡಲು ಹೊರಟ ಸಿಎಫ್‌ಪಿ ವಿಧ್ಯಾರ್ಥಿ ಸಂಘಟನೆಯ ನಾಯಕರನ್ನು ದೇಶದ್ರೋಹ ಪ್ರಕರಣದಲ್ಲಿ ಸಿಲುಕಿಸಿದ ಹುನ್ನಾರದ ವಿರುದ್ಧ ಉಪ್ಪಿನಂಗಡಿ ಹೊಸ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ಮುಖ್ಯ ಭಾಷಣಗೈದ ಪಿಎಫ್ಐ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್ ಮಾತನಾಡಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು ಹೆಣ್ಣು ಮಕ್ಕಳಿಗೆ ಭದ್ರತೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹತ್ರಾಸ್ ಅತ್ಯಾಚಾರ ಮತ್ತು ಯುಪಿ ಸರಕಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳ ಕಾವು ಹೆಚ್ಚುತ್ತಿದೆ. ತಮ್ಮ ದುರಾಡಳಿತವನ್ನು ಮರೆ ಮಾಡುವ ಸಲುವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಎಳೆದು ತಂದು ಪ್ರಕರಣದ ದಿಕ್ಕು ತಪ್ಪಿಸುವ ಕೃತ್ಯ ನಡೆಯುತ್ತಿದೆ, ಇದೊಂದು ಕೇಂದ್ರ ಸರಕಾರದ ಪೋಷಿತ ಆರೋಪಗಳಾಗಿದೆ. ಈ ಹಿಂದೆಯೂ ಇಂತಹ ಆರೋಪಗಳನ್ನು ಮಾಡಿ ಕೊನೆಗೆ ಕೋರ್ಟಿನಲ್ಲಿ ಆರೋಪ ಸಾಬೀತು ಪಡಿಸಲು ಸಾಧ್ಯವಾಗದೇ ಮುಜುಗರಕ್ಕೀಡಾಗಿದ್ದಾರೆ ಎಂದರು.

Also Read  *ಮಂಗಳೂರು-ಬೆಂಗಳೂರು ರೈಲು ಹಳಿ ಮೇಲೆ ಗುಡ್ಡ ಕುಸಿತ*               ಮಣ್ಣು ತೆರವು ಕಾರ್ಯ ಸಿದ್ಧತೆ          

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದ ಪಿಎಫ್ಐ ಉಪ್ಪಿನಂಗಡಿ ಜಿಲ್ಲಾ ಸಮಿತಿ ಸದಸ್ಯರಾದ ಮುಸ್ತಫಾ ಪೆರ್ನೆ ಮಾತನಾಡಿ ಹತ್ರಾಸ್ ಅತ್ಯಾಚಾರ ಪ್ರಕರಣದ ಸಾಕ್ಷ್ಯ ನಾಶಗೈಯುವ ಸಲುವಾಗಿ ಸ್ಥಳೀಯ ಪೋಲೀಸರ ಸಹಕಾರದಿಂದ ಸಂತ್ರಸ್ತೆಯ ಶವವನ್ನು ಕುಟುಂಬಕ್ಕೂ ತೋರಿಸದೇ ರಾತ್ರೋರಾತ್ರಿ ಸುಟ್ಟು ಹಾಕಲಾಯಿತು. ಮಾತ್ರವಲ್ಲದೇ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ನೀಡಲು ಹೊರಟ ಸಿಎಫ್‌ಐ ವಿದ್ಯಾರ್ಥಿ ಸಂಘಟನೆಯ ನಾಯಕರನ್ನು ಮತ್ತು ಕೇರಳದ ಪತ್ರಕರ್ತರ ಮೇಲೆ ಯುಪಿಎ ಕರಾಳ ಕಾನೂನು ಜರುಗಿಸುವ ಮೂಲಕ ಕಾನೂನು ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಮಾತ್ರವಲ್ಲದೇ ಯೋಗಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಗೋಮಾಂಸದ ಹೆಸರಿನಲ್ಲಿ, ಜೈ ಶ್ರೀರಾಮ್ ಘೋಷಣೆ ಕೂಗಲು ಒತ್ತಾಯಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ಹತ್ಯೆಗಳನ್ನು ಮಾಡುತ್ತಾ ಬಂದಿದೆ, ಇದರ ಸತ್ಯಾ ಸತ್ಯತೆಯನ್ನು ಯುಪಿ ಸರಕಾರದ ಕೊಲೆ ಮತ್ತು ಅತ್ಯಾಚಾರದ ಅಂಕಿ ಅಂಶಗಳೇ ಹೇಳುತ್ತಿದೆ. ಯುಪಿಯಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತರೆಂದು ಭಾವಿಸಿದ್ದೆವು. ಆದರೆ, ದಲಿತರು, ನಿರ್ಗತಿಕರು ಹಾಗೂ ಮಹಿಳೆಯರು ಕೂಡಾ ಇಲ್ಲಿ ಅಸುರಕ್ಷಿತರಾಗಿದ್ದಾರೆ ಎಂದು ಹೇಳಿದರು.

Also Read  ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ - ಪೊಲೀಸ್ ರ ನಿಯೋಜನೆ

ಪ್ರತಿಭಟನಾ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದು, ಯುಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಈ ಸಂದರ್ಭದಲ್ಲಿ ಎಸ್ಡಿಪಿಐ ಉಪ್ಪಿನಂಗಡಿ ವಲಯಾಧ್ಯಕ್ಷರಾದ ಮುಸ್ತಫಾ ಲತೀಫಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಪದಾಧಿಕಾರಿಗಳು, ಕಾರ್ಯಕರ್ತರು, ಹಿತೈಷಿಗಳು ಹೀಗೆ ಹಲವರು ಉಪಸ್ಥಿತರಿದ್ದರು. ಸಮಿತಿ ಸದಸ್ಯ ಇಕ್ಬಾಲ್ ಕೆಂಪಿ ಸ್ವಾಗತಿಸಿ, ಅಬ್ದುಲ್ ಗಫ್ಪಾರ್ ಕೆಮ್ಮಾರ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದಗೈದರು.

error: Content is protected !!
Scroll to Top