(ನ್ಯೂಸ್ ಕಡಬ) newskadaba.com ಕಡಬ, ಸೆ.22. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸರಕಾರಿ ಸ್ಥಳದ ಅನಧಿಕೃತ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಮದ್ಯದಂಗಡಿಗೆ ಇದೀಗ ಮೂರನೇ ಬಾರಿಗೆ ಅಬಕಾರಿ ಇಲಾಖಾ ಅಧಿಕಾರಿಗಳು ಬೀಗ ಜಡಿದಿದ್ದಾರೆ. ತೀವ್ರ ಆಕ್ಷೇಪಗಳ ನಡುವೆ ಇತ್ತೀಚೆಗೆ ಆರಂಭವಾಗಿದ್ದ ಮದ್ಯದಂಗಡಿಯನ್ನು ಹಲವು ಜಂಜಾಟಗಳ ನಡುವೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಬಕಾರಿ ಅಧಿಕಾರಿಗಳು ಶುಕ್ರವಾರ ಬೀಗ ಜಡಿದಿದ್ದಾರೆ.
ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಸೆ.11 ರಂದು ಮದ್ಯದಂಗಡಿ ಆರಂಭವಾಗಿರುವುದನ್ನು ವಿರೋಧಿಸಿ ಕಳೆದ ಭಾನುವಾರದಿಂದ ಈ ಭಾಗದ ಬಾರ್ ವಿರೋಧಿ ಹೋರಾಟ ಸಮಿತಿಯವರು ನಿರಂತರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ಮದ್ಯೆ ಪ್ರತಿಭಟನೆಕಾರರ ಒತ್ತಡಕ್ಕೆ ಮಣಿದು ಎರಡು ಬಾರಿ ಅಬಕಾರಿ ಅಧಿಕಾರಿಗಳು ಮುಚ್ಚಿಸಿದ್ದರೂ ಮುಚ್ಚಿದ ಮರುದಿನ ತೆರೆದುಕೊಂಡಿತ್ತು. ಮದ್ಯದಂಗಡಿ ಸರಕಾರಿ ಜಾಗದಲ್ಲಿನ ಅಕ್ರಮ ಕಟ್ಟಡದಲ್ಲಿದೆ ಎಂದು ಆರೋಪಿಸಿ ಹಾಗೂ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆಂಜಿಲಾಡಿ ಗ್ರಾ.ಪಂ. ವ್ಯಾಪ್ತಿಯಿಂದಲೂ ತೆರವುಗೊಳ್ಳುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೋರಾಟಗಾರರು ಉಗ್ರ ಪ್ರತಿಭಟನೆ ನಡೆಸಿದ್ದರು.
ಹೋರಾಟ ನಡೆಸಿದ ಫಲವಾಗಿ ಜಿಲ್ಲಾಧಿಕಾರಿಗಳು ಭೂಮಾಪನ ಇಲಾಖೆಯಿಂದ ಸರ್ವೇ ನಡೆಸಿ ಸರಕಾರಿ ಸ್ಥಳವೆಂದು ವರದಿ ತರಿಸಿಕೊಂಡು ಸೆ.22 ರಂದು ಅಬಕಾರಿ ಅಧಿಕಾರಿಗಳಿಗೆ ನೀಡಿದ ಆದೇಶದಂತೆ ಅಬಕಾರಿ ಸುಪರಿಡೆಂಟ್ ಮುರಳೀಧರ ನೇತೃತ್ವದಲ್ಲಿ ಅಬಕಾರಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತಾತ್ಕಾಲಿಕವಾಗಿ ಮದ್ಯದಂಗಡಿಯನ್ನು ಬಂದ್ ಮಾಡಿಸಿದರು. ಆದರೆ ಅಧಿಕೃತ ಆದೇಶ ಪ್ರತಿ ಕೈಗೆ ಸಿಗದ ಕಾರಣ ಶನಿವಾರದಂದು ಸ್ಥಳಕ್ಕಾಗಮಿಸಿ ಬೀಗಮುದ್ರೆ ಹಾಕುವ ಸಂಭವವಿದೆ. ಆ ಮೂಲಕ ನಿರಂತರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದಂತಾಗಿದೆ.