(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 21: ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಸೇರಿದಂತೆ 9 ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಕೊಡಗು, ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ ಗಡಿಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಅಲ್ಲದೆ, ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ ಮಳೆ 66.75 ಮಿ.ಮೀ. ಮಳೆ ಸುರಿದಿದೆ.ದಕ್ಷಿಣ ಕನ್ನಡದಲ್ಲಿ ಮಳೆರಾಯನ ರೌದ್ರನರ್ತನ ಮುಂದುವರೆದಿದ್ದು, ದಕ್ಷಿಣ ಕನ್ನಡ, ಉಡುಪಿ ಗಡಿ ಭಾಗದಲ್ಲಿಯೇ ತುಸು ಹೆಚ್ಚು ಮಳೆ ಸುರಿಯುತ್ತಿದೆ. ಮುಲ್ಕಿ ಹೋಬಳಿಯಲ್ಲಿ ಕೃತಕ ಪ್ರವಾಹ ಉಂಟಾಗಿದೆ. ಹಲವೆಡೆ ನೀರು ಮನೆಗೆ ನುಗ್ಗಿ ಜನರು ಪರಿತಪಿಸುವಂತಾಗಿದೆ. ಗ್ರಾಮೀಣ ಭಾಗದ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು, ಕಿನ್ನಿಗೋಳಿಯಲ್ಲಿ ಗ್ರಾಮ ಸಂಪರ್ಕಿಸುವ ಸೇತುವೆ ಸಂಪರ್ಕ ಕಡಿತಗೊಂಡಿದೆ.