(ನ್ಯೂಸ್ ಕಡಬ) newskadaba.com ಉಡುಪಿ, ಸೆ20: ಉಡುಪಿ ಜೆಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಹಲವಾರು ತಗ್ಗು ಪ್ರದೇಶಗಳಲ್ಲಿ ಮನೆಗಳು ಆಸ್ತಿ-ಪಾಸ್ತಿ ಮುಳುಗಡೆಯಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗಿದೆ.ತುರ್ತು ಪರಿಹಾರ ಕಾರ್ಯಕ್ಕೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ತಂಡವನ್ನು ಕಳಿಸಿಕೊಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದು ಮಂಗಳೂರಿನಿಂದ ಎನ್‌ಡಿಆರ್‌ಎಫ್ ತಂಡ ಕಳುಹಿಸಿದ್ದಾರೆ.
20 ಸಿಬ್ಬಂದಿಯನ್ನೊಳಗೊಂಡ ಮತ್ತೊಂದು ಎನ್‌ಡಿಆರ್‌ಎಫ್ ತಂಡ ಮೈಸೂರಿನಿಂದ ಉಡುಪಿಯತ್ತ ತೆರಳಿದೆ. ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಕಳಿಸಿಕೊಡುವಂತೆ ಮಾಡಿದ ಮನವಿಗೂ ಸ್ಪಂದಿಸಿದ್ದು, ಬೆಂಗಳೂರಿನಿಂದ ಎರಡು ಹಾಗೂ ಕಾರವಾರ ನೌಕಾನೆಲೆಯಿಂದ ಎರಡು ಹೆಲಿಕಾಪ್ಟರ್‌ಗಳು ನಡುಗಡ್ಡೆಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗೆ ತೆರಳಲಿವೆ. ಸದ್ಯ ಮೋಡದ ವಾತಾವರಣ ಇರುವ ಕಾರಣ ಹೆಲಿಕಾಪ್ಟರ್‌ಗಳು ಇಳಿಯಲು ಸಾಧ್ಯವಾಗುತ್ತಿಲ್ಲ. ವಾತಾವರಣ ತಿಳಿಯಾದ ಕೂಡಲೇ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಗೆ ತೆರಳಲಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.