(ನ್ಯೂಸ್ ಕಡಬ) newskadaba.com ಕರಾವಳಿ, ಸೆ.11. ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಕಡಿಮೆಯಾಗಿದ್ದ ಮಳೆಯು, ಬುಧವಾರ ಸಂಜೆ ಆರಂಭಗೊಂಡಿದ್ದು, ಇಂದು (ಶುಕ್ರವಾರ) ಮಳೆ ಮುಂದುವರೆದಿದೆ. ನಗರದ ಕುಂಟಿಕಾನದ ವಸತಿ ಸಮುಚ್ಛಯವೊಂದರ ತಡೆಗೋಡೆ ಕುಸಿದು ಬಿದಿದ್ದು ಮಣ್ಣಿನಡಿ ಸುಮಾರು 10 ಕ್ಕೂ ಅಧಿಕ ಕಾರುಗಳು ಹೂತು ಹೋಗಿರುವ ಶಂಕೆ ಉಂಟಾಗಿದೆ.
ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಮೂಡುಬಿದ್ರೆ, ಕಡಬ ಮುಂತಾದ ಸ್ಥಳಗಳಲ್ಲಿ ಗುರುವಾರ ಮಳೆಯ ತೀವ್ರತೆ ಕಡಿಮೆಯಾಗಿತ್ತು.ನಗರದಲ್ಲಿ ಬುಧವಾರ ರಾತ್ರಿಯಿಂದ ಆರಂಭವಾದ ಮಳೆಯಿಂದ ಕೃತಕ ಪ್ರವಾಹ ಉಂಟಾಗಿದ್ದು, ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಕೊಟ್ಟಾರ, ಅಕೆ, ಕೊಟ್ಟಾರ ಚೌಕಿ, ನಂತೂರು, ಪಂಪ್‌ವೆಲ್, ಪಡೀಲ್, ಬರ್ಕೆ ಹಾಗೂ ಇತರ ಪ್ರದೇಶಗಳಲ್ಲಿ ಹಲವಾರು ಮನೆಗಳಿಗೆ ಹಾಗೂ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಅಲ್ಲದೇ, ವಾಹನ, ಜನರ ಸಂಚಾರಕ್ಕೂ ತೊಂದರೆಯಾಗಿದೆ.ರಾಜ್ಯಾದ್ಯಂತ ಮುಂದಿನ 48 ಗಂಟೆಗಳ ಅವಧಿಯಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ, ಕರಾವಳಿಯಲ್ಲಿ ಸೆಪ್ಟೆಂಬರ್ 11 ಹಾಗೂ 12ರಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸೆಪ್ಟೆಂಬರ್ 13ರವರೆಗೆ ಎಚ್ಚರಿಕೆ ನೀಡಲಾಗಿದೆ.