(ನ್ಯೂಸ್ ಕಡಬ) newskadaba.com ಕಡಬ, ಜೂ.04. ಪುತ್ತೂರು ತಾಲೂಕು ಕೊೖಲ ಗ್ರಾಮದ ಏಣಿತಡ್ಕ ಸಮಾಜ ಮಂದಿರದ ಬಳಿ ಹರಿಯುವ ತೋಡೊಂದಕ್ಕೆ ಅಡ್ಡಲಾಗಿ ನಿರ್ಮಾಣಗೊಳ್ಳಲಿರುವ ಕಿಂಡಿ ಅಣೆಕಟ್ಟುವಿಗೆ ಶಂಕುಸ್ಥಾಪನೆ ಬುಧವಾರ ಸಾಯಂಕಾಲ ನಡೆಸಲಾಯಿತು.
ಸುಳ್ಯ ಶಾಸಕ ಎಸ್ ಅಂಗಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಅಣೆಕಟ್ಟುವಿನಿಂದ ನೀರಿನ ಸಂಗ್ರಹ ಜೊತೆಗೆ ಮೇಲ್ಬಾಗದಲ್ಲಿ ವಾಹನ ಸಂಚಾರಕ್ಕೂ ಅನುವು ಮಾಡಿಕೊಡಲಾಗುವುದು. ಅಲ್ಲದೆ ಗೋಳಿತ್ತಡಿ- ಏಣಿತಡ್ಕ ಕಾಲೋನಿ ಸಂಪರ್ಕ ರಸ್ತೆಯ ಏಣಿತಡ್ಕದಲ್ಲಿ ಒಂದು ಕಿ.ಮೀ ಉದ್ದ ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಅಭಿವೃದ್ದಿಪಡಿಸಲಾಗುವುದು. ಮುಂದಿನ ಬೇಸಿಗೆ ಆರಂಭದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು. ಈ ಸಂದರ್ಭ ಕೊೖಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬುಡಲೂರು, ಸದಸ್ಯ ಸುಂದರ ನಾಯ್ಕ, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್ ಕೆ, ತಾಲೂಕು ಪಂಚಾಯಿತಿ ಸದಸ್ಯರಾದ ಜಯಂತಿ ಆರ್ ಗೌಡ, ತೇಜಶ್ವಿನಿ ಕಟ್ಟಪುಣಿ, ಬಿಜೆಪಿ ಮುಖಂಡ ಧರ್ಮಪಾಲ ರಾವ್ ಕಜೆ, ಸ್ಥಳಿಯರಾದ ಕೇಶವ ಸಬಳೂರು, ಸೇಸಪ್ಪ ಸಬಳೂರು, ಶ್ವೇತ ಸಬಳೂರು ಮೊದಲಾದವರು ಇದ್ದರು. ಎಪಿಎಂಸಿ ಮಾಜಿ ಸದಸ್ಯ ಶೀನಪ್ಪ ಗೌಡ ವಳಕಡಮ ಸ್ವಾಗತಿಸಿ ವಂದಿಸಿದರು.