ಸುಳ್ಯ: ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ವನ ಮಹೋತ್ಸವ ಮತ್ತು ಸ್ಯಾನಿಟೈಸರ್ ವಿತರಣೆ

(ನ್ಯೂಸ್ ಕಡಬ)newskadaba.com ದ.ಕ. ಜಿಲ್ಲಾ ಗೃಹರಕ್ಷಕ ದಳದ ಸುಳ್ಯ ಘಟಕದ ವತಿಯಿಂದ ವನಮಹೋತ್ಸವ ಮತ್ತು ಸ್ಯಾನಿಟೈಸರ್ ವಿತರಣಾ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀ ರಂಗನಾಥ ಕೆಎಫ್‍ಡಿಸಿ ಅಧ್ಯಕ್ಷರು, ಶ್ರೀ ನಟರಾಜ್ ದೈಹಿಕ ಶಿಕ್ಷಕರು ಸರ್ಕಾರಿ ಜೂನಿಯರ್ ಕಾಲೇಜು ಸುಳ್ಯ, ಶ್ರೀ ರಾಮಚಂದ್ರ ಲಯನ್ಸ್ ಅಧ್ಯಕ್ಷರು ಮತ್ತು ಸುದ್ದಿ ಬಿಡುಗಡೆಯ ವರದಿಗಾರ ಶ್ರೀ ಹರೀಶ್ ಬಂಟ್ವಾಳ ಇವರುಗಳು ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಕೆಎಫ್‍ಡಿಸಿ ಅಧ್ಯಕ್ಷರಾದ ಶ್ರೀ ರಂಗನಾಥ ಇವರು ಮಾತನಾಡಿ ಗೃಹರಕ್ಷಕರು ಸುಳ್ಯ ತಾಲೂಕಿನಲ್ಲಿ ಅತ್ಯುತ್ತಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಪರಿಸರದ ಬಗ್ಗೆ ಅತ್ಯುತ್ತಮ ಕಾಳಜಿ ಹೊಂದಿದ್ದು, ಹಲವು ಸಮಾಜಮುಖಿ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿರುತ್ತಾರೆ ಎಂದು ಶ್ಲಾಘಿಸಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಸರ್ಕಾರಿ ಜೂನಿಯರ್ ಕಾಲೇಜಿನ ದೈಹಿಕ ಶಿಕ್ಷಕರಾದ ಶ್ರೀ ನಟರಾಜ್ ಇವರು ಮಾತನಾಡಿ ಸುಮಾರು 25 ವರ್ಷಗಳ ಹಿಂದೆ ಈ ಕಾಲೇಜಿಗೆ ಬಂದು, ಇಲ್ಲಿಯ ಮೈದಾನದಲ್ಲಿ ನೆಟ್ಟ ಸಸಿಗಳು ಬೆಳೆದು, ಹೆಮ್ಮರವಾಗಿ ಹಲವು ಮಂದಿಗೆ ನೆರಳು, ಪಕ್ಷಿಗಳಿಗೆ ವಾಸಸ್ಥಾನವಾಗಿರುವುದು ನನಗೆ ತುಂಬಾ ಸಂತೋಷ ನೀಡುತ್ತಿದೆ. ಹಾಗೆಯೇ ನೀವು ಕೂಡಾ ಗಿಡಗಳನ್ನು ನೆಟ್ಟು, ಬೆಳೆಸಿ, ಹತ್ತು ವರ್ಷ ಬಿಟ್ಟು ನೀವು ನಿಮ್ಮ ಮಕ್ಕಳಿಗೆ ತಾನು ಬೆಳೆಸಿದ ಮರ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು. ಮತ್ತೋರ್ವ ಅತಿಥಿಯಾದ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಶ್ರೀ ಬಂಟ್ವಾಳ ಇವರು ಪತ್ರಕರ್ತರು, ಗೃಹರಕ್ಷಕರು, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯವರು ಕೋವಿಡ್-19 ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇದು ಸಮಾಜಕ್ಕೆ ನಾವು ನೀಡುವ ಕೊಡುಗೆಯಾಗಿದೆ. ಪಂಜ ಸರ್ಕಾರಿ ಕಾಲೇಜಿನ ಆವರಣದಲ್ಲಿ ಸಾಕಷ್ಟು ಗಿಡಗಳನ್ನು ನೆಟ್ಟು, ಬೆಳೆಸಿದ್ದು, ಅವುಗಳು ಇಂದು ಹೆಮ್ಮರವಾಗಿ ಬೆಳೆದಿದೆ. ಇನ್ನಷ್ಟು ಗಿಡಗಳನ್ನು ಹಲವು ಕಡೆಗಳಲ್ಲಿ ನೆಡುವಂತಹ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುಳ್ಯ ಘಟಕದ ಎಲ್ಲಾ ಗೃಹರಕ್ಷಕರಿಗೆ ಒಂದೊಂದು ಗಿಡ ಮತ್ತು ಸ್ಯಾನಿಟೈಸರ್‍ನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ರವರು ಮಾತನಾಡಿ ಪ್ರತಿಯೊಬ್ಬ ಗೃಹರಕ್ಷಕರು ಸ್ಯಾನಿಟೈಸರ್ ಮತ್ತು ಮುಖಕ್ಕೆ ಮಾಸ್ಕ್ ಅನ್ನು ಬಳಸಬೇಕು. ಖಾಕಿ ಯೂನಿಫಾರಂ ಹಾಕುವ ಪ್ರತಿಯೊಬ್ಬ ಗೃಹರಕ್ಷಕರು ಕೂಡಾ ಮೊದಲು ನೀವು ಸ್ಯಾನಿಟೈಸರ್ ಮತ್ತು ಮುಖಕ್ಕೆ ಮಾಸ್ಕ್ ಅನ್ನು ಬಳಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಸಮಾಜ ನಿಮ್ಮನ್ನು ಗುರುತಿಸುತ್ತದೆ ಎಂದರು. ಒಂದೊಂದು ಗಿಡವನ್ನು ನೆಟ್ಟು, ಹಾರೈಕೆ ಮಾಡಿ ಪರಿಸರವನ್ನು ಸಂರಕ್ಷಿಸಿ ಬೆಳೆಸಬೇಕು, ಮಹಾತ್ಮ ಗಾಂಧೀಜಿಯವರು “ಈ ಭೂಮಿಯನ್ನು ನಮ್ಮ ಹಿರಿಯರಿಂದ ಬಳುವಳಿ ಪಡೆದದ್ದಲ್ಲ, ನಮ್ಮ ಮಕ್ಕಳಿಗಾಗಿ ಎರವಲು ಪಡೆದದ್ದು” ಎಂದಿದ್ದರು. ಪರಿಸರ ನಾಶದಿಂದಾಗಿ ಕೋವಿಡ್-19 ವೈರಸ್‍ನಂತಹ ರೋಗ ಹುಟ್ಟಿ, ಇಡೀ ಜಗತ್ತೇ ಹೆದರಿ ನಡುಗುವಂತಾಗಿದೆ. ಇದರಿಂದಾಗಿ ಎಲ್ಲಾ ಗೃಹರಕ್ಷಕರು ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ಘಟಕದ ಘಟಕಾಧಿಕಾರಿ ಶ್ರೀ ಜಯಂತ್ ಶೆಟ್ಟಿ ಇವರು ಸ್ವಾಗತಿಸಿದರು. ಗೃಹರಕ್ಷಕರಾದ ಶ್ರೀ ಲೋಕನಾಥ ಇವರು ವಂದನಾರ್ಪಣೆಗೈದರು. ಸುಳ್ಯ ಘಟಕದ ಎಲ್ಲಾ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.

Also Read  ಮಹಿಳೆಯರು ಶಿಕ್ಷಣ ಸ್ವ-ಉದ್ಯೋಗ ಕೈಗೊಂಡು ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಬೇಕು-ಶಿಲ್ಪ ಎ.ಜಿ

error: Content is protected !!
Scroll to Top