ಬೆಂಗಳೂರು, ಜೂ.11: ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಆರ್‌ಪಿ ವಿರೋಧಿ ಪ್ರತಿಭಟನೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿ ಜೈಲು ಪಾಲಾಗಿರುವ ಅಮೂಲ್ಯ ಲಿಯೋನಾ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ಜಾಮೀನು ಕೋರಿ ಅಮೂಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶ ವಿದ್ಯಾಧರ್ ಶಿರಹಟ್ಟಿ, ಆರೋಪಿಗೆ ಜಾಮೀನು ನೀಡಿದೆ ತಪ್ಪಿಸಿಕೊಳ್ಳಬಹುದು ಮತ್ತು ಬೇರೆ ರೀತಿಯ ಅಪರಾಧಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಸಮಾಜಕ್ಕೂ ಒಳಿತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣದ ತನಿಖೆಯೂ ಪೂರ್ಣಗೊಂಡಿಲ್ಲ ಮತ್ತು ತನಿಖಾಧಿಕಾರಿಗಳು ಇನ್ನೂ ಚಾರ್ಜ್ ಶೀಟ್ ಸಲ್ಲಿಸಿಲ್ಲ ಎಂದು ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ, ಎನ್‌ಆರ್‌ಸಿ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಭಾಗಿಯಾಗಿದ್ದರು. ಈ ವೇಳೆ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ಧ ಪೊಲೀಸರು ದೇಶ ದ್ರೋಹದ ಪ್ರಕರಣ ದಾಖಲಿಸಿದ್ದಾರೆ.