(ನ್ಯೂಸ್ ಕಡಬ) newskadaba.com ಪುತ್ತೂರು,ಜೂ.05: ಇಂದು ಜೂನ್ 5, ವಿಶ್ವ ಪರಿಸರ ದಿನ. ಈ ದಿನದಂದೇ ಮರಗಳಿಗೆ ಕೊಡಲಿ ಏಟು ಹಾಕಿ ಧರೆಗುರುಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕು ಪಂಚಾಯತ್ ನೇತೃತ್ವದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಗಿಡ ನೆಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮವೂ ನಿಗದಿಯಾಗಿತ್ತು. ಆದರೆ ಕಾರ್ಯಕ್ರಮ ಆರಂಭವಾಗುವ ಮೊದಲೇ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿದ್ದ ಬಿದಿರಿನ ಹಿಂಡನ್ನೇ ಕಡಿದು ಹಾಕಲಾಗಿದೆ. ಸುಮಾರು ಹತ್ತಕ್ಕೂ ಮಿಕ್ಕಿ ಬಿದಿರನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲೇ ಕಡಿಯಲಾಗಿದೆ. ಇಂದಿನ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನೆಡಲಾಗುವ ಗಿಡಕ್ಕೆ ಸ್ಥಳಾವಕಾಶ ಕಲ್ಪಿಸುವುದಕ್ಕೋಸ್ಕರ,
ಈ ಬಿದಿರು ಕಡಿಯಲಾಗಿದೆ ಎನ್ನುವ ಸಮಜಾಯಿಷಿಯನ್ನೂ ಕಾರ್ಯಕ್ರಮದ ಆಯೋಜಕರು ನೀಡಿದ್ದಾರೆ. ಒಂದು ಕಡೆಯಲ್ಲಿ ಪರಿಸರ ದಿನಾಚರಣೆ ಆಚರಿಸಿ, ಅಲ್ಲೇ ಪಕ್ಕದಲ್ಲಿ ಪರಿಸರ ನಾಶ ಮಾಡುವುದಾದರೆ ಕಾರ್ಯಕ್ರಮದ ಆಯೋಜನೆಯ ಔಚಿತ್ಯವಾದರೂ ಏನು ಎನ್ನುವ ಪ್ರಶ್ನೆಗಳು ಸದ್ಯ ಮೂಡುವಂತಾಗಿದೆ.