(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ .03: ಕೇಂದ್ರ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ ರಾಜ್ಯ ಸರಕಾರ ಶಾಲೆಗಳ ಪುನಾರಂಭಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಶಾಲೆಗಳನ್ನು ಹಂತ ಹಂತವಾಗಿ ಪುನಾರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ಶಾಲೆಗಳನ್ನು ಆರಂಭಿಸುವ ಸಂಬಂಧ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಸಿ ಶಾಲೆಗಳ ಪುನಾರಂಭ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ಶಾಲೆ ಪುನಾರಂಭ ಮಾಡುವ ದಿನಾಂಕಗಳನ್ನು ಪ್ರಸ್ತಾಪಿಸಿದೆ.
ಶಾಲೆಗಳ ಪುನಾರಂಭಕ್ಕೆ ಪ್ರಸ್ತಾವಿತ ದಿನಾಂಕ:
4- 7ನೇ ತರಗತಿ: ಜುಲೈ 1
1-3ನೇ ತರಗತಿ: ಜುಲೈ 15
8-10 ನೇ ತರಗತಿ: ಜುಲೈ 15
ಪೂರ್ವ ಪ್ರಾಥಮಿಕ: ಜುಲೈ 20
ಜೂನ್ 25ರಿಂದ ಜುಲೈ 4ರವೆರಗೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಮತ್ತು ನಂತರ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ನಡೆಯುವ ಕಾರಣ 8-10ನೇ ತರಗತಿಗಳನ್ನು ಜುಲೈ 15ರಿಂದ ತೆರೆಯಲು ಪ್ರಸ್ತಾಪಿಸಲಾಗಿದೆ. ಶಾಲೆ ಪುನಾರಂಭ ಮಾಡುವ ಸಂಬಂಧ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು, ಪೋಷಕರು, ಎಸ್‌ಡಿಎಂಸಿ ಸದಸ್ಯರನ್ನು ಸಭೆಗೆ ಆಹ್ವಾನಿಸಿ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.ಶಾಲೆಗಳನ್ನು ಪುನರಾರಂಭ ಮಾಡಬಹುದಾದ ದಿನಾಂಕ, ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನ ಹಾಗೂ ಶಾಲೆಗಳಲ್ಲಿ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳ ಬಗ್ಗೆ ಎಲ್ಲ ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಸಭೆಗಳಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸುವಂತೆ ಸಚಿವ ಎಸ್ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.