(ನ್ಯೂಸ್ ಕಡಬ) newskadaba.com ಕಡಬ, ಎ.22. ಗೃಹರಕ್ಷಕ ದಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಗೃಹ ರಕ್ಷಕ ದಳದ ಜಿಲ್ಲಾ ಕಮಾಡೆಂಟ್ ಡಾ| ಮುರಳೀ ಮೋಹನ ಚೂಂತಾರು ಅವರು ದಾನಿಗಳ ನೆರವಿನಿಂದ ಅಕ್ಕಿ ವಿತರಿಸಿದರು.
ಮಂಗಳವಾರದಂದು ಕಡಬ ಘಟಕದ ಸದಸ್ಯರಿಗೆ ಅಕ್ಕಿ ವಿತರಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕಾರ್ಯ ನಿರ್ವಹಿಸುವ ಸುಮಾರು ಒಂದು ಸಾವಿರ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ದಾನಿಗಳ ಸಹಕಾರದಿಂದ ಅಕ್ಕಿಯನ್ನು ನೀಡಲಾಗುತ್ತಿದೆ. ಅದರಂತೆ ಕಡಬ ಗೃಹರಕ್ಷಕ ದಳದ ಸಿಬ್ಬಂದಿಗಳಿಗೂ ತಲಾ 5 ಕೆ.ಜಿ.ಯಂತೆ ಅಕ್ಕಿ ವಿತರಣೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ| ಕೇಶವ ಮಂಗಳೂರು, ಪುತ್ತೂರು ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಕಡಬ ಪೋಲೀಸ್ ಠಾಣಾ ಬರಹಗಾರ ಶ್ರೀಶೈಲ, ಕಡಬ ಗೃಹರಕ್ಷಕ ದಳದ ಪ್ಲಟೂನ್ ಸಾರ್ಜೆಂಟ್ ತೀರ್ಥೇಶ್ ಅಮೈ, ಹಿರಿಯ ಗೃಹರಕ್ಷಕ ಉದಯ ಶಂಕರ್, ಮಹಿಳಾ ಹಿರಿಯ ಗೃಹರಕ್ಷಕಿ ವಾಣಿ ಸೇರಿದಂತೆ 10 ಜನ ಗೃಹರಕ್ಷಕರು ಉಪಸ್ಥಿತರಿದ್ದರು.