(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.09. ದೇಶದ ವಿವಿಧೆಡೆ ಕೇಳಿ ಬರುತ್ತಿದ್ದ ಹನಿ ಟ್ರ್ಯಾಪ್ ಘಟನೆಯು ಉಪ್ಪಿನಂಗಡಿಯಲ್ಲಿ ನಡೆದಿದ್ದು, ಶಂಕಿತ ಆರೋಪಿಗಳು ಪೊಲೀಸರ ಬಲೆಗೆ ಬಿದ್ದ ಘಟನೆ ಗುರುವಾರದಂದು ನಡೆದಿದೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ದಿಲೀಪ್ ಟಿ ಎಂಬವರು ತನ್ನ ಸ್ನೇಹಿತರಾದ ಜನಾರ್ಧನನ್, ಪ್ರಶಾಂತ್, ಪ್ರವೀಣ್ ಎಂಬವರೊಂದಿಗೆ ಇನ್ನೋವಾ ಕಾರಿನಲ್ಲಿ ಕಣ್ಣೂರಿನಿಂದ ಪುತ್ತೂರಿಗೆ ಆಗಮಿಸಿದ್ದು, ಪುತ್ತೂರಿನಲ್ಲಿ ಪರಿಚಯದ ಹುಡುಗಿಯೊಂದಿಗೆ ಒಂದು ಮನೆಗೆ ತೆರಳಿದ್ದರೆನ್ನಲಾಗಿದೆ. ಆ ಮನೆಯಲ್ಲಿ ಮತ್ತೊಬ್ಬಳು ಹುಡುಗಿಯಿದ್ದು ಅದೇ ಸಮಯದಲ್ಲಿ ಇಬ್ಬರು ಗಂಡಸರು ಬಂದು ಏಕಾಏಕಿಯಾಗಿ ದಿಲೀಪ್ ಹಾಗೂ ಇತರರಿಗೆ ಹಲ್ಲೆ ನಡೆಸಿದ್ದಲ್ಲದೆ ರೂಮಿನಲ್ಲಿ ಅಕ್ರಮ ಬಂಧನಲ್ಲಿ ಕೂಡಿಟ್ಟು ಇಬ್ಬರು ಹುಡುಗಿಯರ ಜೊತೆ ಫೋಟೋ ತೆಗೆಸಿ ಇದನ್ನು ಪೋಲಿಸರಿಗೆ ಹಾಗೂ ಚಾನಲ್ ನವರಿಗೆ ತಿಳಿಸುವುದಾಗಿ ಬೆದರಿಸಿ ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಎಂಬುವುದಾಗಿ ಹೇಳಿಕೊಂಡು ಬಂದ 3 ಜನರು ಇವರಿಗೆ ಹೊಡೆದು 10 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟಿದ್ದು, ಇಲ್ಲವಾದಲ್ಲಿ ಚಾನೆಲ್ ಗೆ ಕೊಡುವುದಾಗಿ ಬೆದರಿಸಿದ್ದಾರೆ. ಮೊಬೈಲ್ ಗಳನ್ನು, ಹಣ ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತು ಯಾವುದೋ ದಾಖಲಾತಿಗೆ ಸಹಿ ಮತ್ತು ಬೆರಳಚ್ಚು ತೆಗೆದು ಮನೆಯಲ್ಲಿ ಕೂಡಿ ಹಾಕಿ ಬುಧವಾರದಂದು ಪೊಲೀಸ್ ಠಾಣೆಗೆ ಕರೆದೊಯ್ಯುವ ನೆಪದಲ್ಲಿ ಉಪ್ಪಿನಂಗಡಿಯ ರೆಸಾರ್ಟ್ ನಲ್ಲಿ ಅಕ್ರಮ ಬಂಧನದಲ್ಲಿರಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ರೆಸಾರ್ಟ್ ಗೆ ದಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿದ್ದು, ಈ ಬಗ್ಗೆ ದಿಲೀಪ್ ಟಿರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.