ರಾಷ್ಟ್ರೀಯ ದಂತ ವೈದ್ಯರ ದಿನ ✍ಡಾ|| ಮುರಲೀ ಮೋಹನ ಚೂಂತಾರು

ಭಾರತ ದೇಶ ಕಂಡ ಮಹಾನ್ ಅಪ್ರತಿಮ ದಂತ ವೈದ್ಯರಲ್ಲಿ ಒಬ್ಬರಾದ ಡಾ|| ರಫಿಯುದ್ದೀನ್ ಅಹ್ಮದ್ (1890-1965) ಡಿಸೆಂಬರ್ 24ರಂದು ಪಶ್ಚಿಮ ಬಂಗಾಲದ ಬರ್ದಾನ್‍ಪುರ ಎಂಬಲ್ಲಿ ಜನ್ಮ ತಾಳಿದರು. 1908ರಲ್ಲಿ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದ ಬಳಿಕ 1909ರಲ್ಲಿ ಅಮೇರಿಕಾದ ಲೋವಾ ಯುನಿವರ್ಸಿಟಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು 1915ರಲ್ಲಿ ದಂತ ವೈದ್ಯಕೀಯ ಪದವಿ ಪಡೆದರು. 1918ರವರೆಗೆ ಬೊಸ್ಟನ್ ಮತ್ತು ಮೆಸ್ಸಾಚುಸೆಟ್ಸ್‍ನಲ್ಲಿ ಕೆಲಸ ಮಾಡಿದರು. ಅಮೇರಿಕಾದಲ್ಲಿ ನೆಲೆಸಿ ಸಾಕಷ್ಟು ಸಂಪಾದನೆ ಮಾಡುವ ಅವಕಾಶ ಇದ್ದರೂ, ತಾಯ್ನಾಡಿನ ಮೋಹದಿಂದ 1919ರಲ್ಲಿ ಭಾರತಕ್ಕೆ ಹಿಂದುರುಗಿ ಕೋಲ್ಕತ್ತಾದಲ್ಲಿ ದಂತ ಚಿಕಿತ್ಸಾಲಯ ತೆರೆದರು. ಡಾ|| ಆರ್. ಅಹ್ಮದ್ ಅವರ ಪ್ರಯತ್ನದ ಫಲವಾಗಿಯೇ 1920ರಲ್ಲಿ ಭಾರತದ ಪ್ರಥಮ ದಂತ ವೈದ್ಯಕೀಯ ಕಾಲೇಜು ಕೇವಲ 11 ವಿದ್ಯಾರ್ಥಿಗಳೊಂದಿಗೆ ಅಮೇರಿಕಾ ನ್ಯೂಯಾರ್ಕ್ ಸೋಡಾಫೌಂಟೇನ್ ಇದರ ಸಹಾಯದೊಂದಿಗೆ ಆರಂಭವಾಯಿತು. ಆರಂಭದಲ್ಲಿ ಕೊಲ್ಕತ್ತಾ ದಂತ ವೈದ್ಯಕೀಯ ಕಾಲೇಜು ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. 1950ರಲ್ಲಿ ಡಾ|| ಆರ್. ಅಹ್ಮದ್ ಅವರ ಸಾಧನೆಯನ್ನು ನೆನೆಯುವ ಸಲುವಾಗಿ ಭಾರತದ ಪ್ರಥಮ ದಂತ ಕಾಲೇಜನ್ನು ಆರ್. ಅಹ್ಮದ್ ದಂತ ವೈದ್ಯಕೀಯ ಕಾಲೇಜು ಎಂದು ಮರು ನಾಮಕರಣ ಮಾಡಲಾಯಿತು.

1949ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಬಳಿಕ ಡಾ|| ಆರ್. ಅಹ್ಮದ್ ಅವರು, ದಂತ ಕಾಲೇಜನ್ನು ಪಶ್ಚಿಮ ಬಂಗಾಲ ಸರಕಾರಕ್ಕೆ ದಾನವಾಗಿ ನೀಡಿದರು. 1920ರಿಂದ 1950ರವರೆಗೆ ಆರ್ ಅಹ್ಮದ್ ದಂತ ಕಾಲೇಜಿನ ಪ್ರಾಂಶುಪಾಲರಾಗಿಯೂ ಶ್ರೀಯುತರು ಅಮೋಘ ಸೇವೆ ಸಲ್ಲಿಸಿದರು. 1925ರಲ್ಲಿ ಬಂಗಾಲ ದಂತ ವೈದ್ಯರ ಸಂಘವನ್ನು ರಚನೆ ಮಾಡಿದರು. ಮತ್ತು ದಂತ ವೈದ್ಯಕೀಯ ಜರ್ನಲ್‍ನ್ನು 1925ರಲ್ಲಿ ಆರಂಭಿಸಿ 1946ರವರೆಗೆ ಸಂಪಾದಕರಾಗಿಯೂ ಕೆಲಸ ಮಾಡಿದರು. 1928ರಲ್ಲಿ ದಂತ ವೈದ್ಯಕೀಯ ಶಾಸ್ತ್ರದ ಭಾರತೀಯ ಲೇಖಕರ ಪ್ರಥಮ ಪುಸ್ತಕವನ್ನು ಪ್ರಕಟಿಸಿದರು. 1939ರಲ್ಲಿ ಬಂಗಾಲ ದಂತ ವೈದ್ಯರ ಕಾನೂನನ್ನು ಜಾರಿಗೆ ತಂದರು. ಇದರ ಆಧಾರದ ಮೇಲೆಯೇ 1948ರಲ್ಲಿ ಭಾರತೀಯ ದಂತ ವೈದ್ಯರ ದಂತ ವಿದೇಯಕ ಕಾಯಿದೆಯನ್ನು ಜಾರಿಗೆ ತರಲಾಯಿತು. 1954ರಲ್ಲಿ ರಚನೆಯಾದ ಭಾರತೀಯ ದಂತ ವೈದ್ಯ ಪರಿಷತ್ತಿನ ಚುಕ್ಕಾಣಿ ಹಿಡಿದು 1958ರವರೆಗೆ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.

Also Read  ವಶೀಕರಣ ಪದ್ಧತಿಯ ಮಹತ್ವ ಮತ್ತು ದಿನ ಭವಿಷ್ಯ

ಡಾ|| ಆರ್. ಅಹ್ಮದ್ ಅವರ ದಂತ ವೈದ್ಯಕೀಯ ಕ್ಷೇತ್ರದಲ್ಲಿನ ಅಮೋಘ ಸೇವೆಗಾಗಿ 1947ರಲ್ಲಿ ಅಂತರಾಷ್ಟ್ರೀಯ ದಂತ ಕಾಲೇಜಿನಿಂದ ಪೆಲೊಷಿಪ್ ನೀಡಲಾಯಿತು. ಮತ್ತು ರಾಯಲ್ ಕಾಲೇಜ್ ಆಫ್ ಸರ್ಜನ್ ಇಂಗ್ಲೆಂಡ್ ಇದರ ಪೆಲೊಷಿಪ್ ಕೂಡಾ ನೀಡಲಾಯಿತು. 1949ರಲ್ಲಿ ಫಿಯರಿ ಪೌಚಾರ್ಡ್ ಅಕಾಡೆಮಿ ಇದರ ಪೆಲೋಷಿಪ್ ನೀಡಿ ಗೌರವಿಸಲಾಯಿತು. 1964ರಲ್ಲಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಶ್ರೀಯುತರ ದಂತ ವೈದ್ಯಕೀಯ ಕ್ಷೇತ್ರದ ಸಾಧನೆ ಮತ್ತು ಸೇವೆಯನ್ನು ಗುರುತಿಸುವ ಸಲುವಾಗಿ ಡಾ|| ಆರ್. ಅಹ್ಮದ್ ಅವರನ್ನು ಭಾರತೀಯ ದಂತ ವೈದ್ಯಕೀಯ ಕ್ಷೇತ್ರದ ಪಿತಾಮಹ ಎಂದೂ ಕರೆಯಲಾಗುತ್ತಿದೆ.

1950ರಲ್ಲಿ ಪಶ್ಚಿಮ ಬಂಗಾಲದ ಸರಕಾರದಲ್ಲಿ ಮಂತ್ರಿಯಾಗಿಯೂ ಕೆಲ ಕಾಲ ಕೆಲಸ ಮಾಡಿದರು. ತಮ್ಮ ಜೀವನದುದ್ದಕ್ಕೂ ದೀನ ದಲಿತರ, ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಇವರು, ಸಮಾಜದ ಕೆಳಸ್ತರದ ಜನರಿಗೆ ದಂತ ಆರೋಗ್ಯದ ಕಾಳಜಿ ಮತ್ತು ದಂತ ಚಿಕಿತ್ಸೆಯ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಶ್ರೀಗಂಧದ ಕೊರಡಿನಂತೆ ತಮ್ಮ ಜೀವನವನ್ನೇ ಧಾರೆ ಎರೆದರು. ಇವರ ಸಾಧನೆಗಾಗಿ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ಇವರನ್ನು ಅರಸಿ ಬಂದರೂ. ಯಾವತ್ತೂ ಯಶಸ್ಸನ್ನು ತಲೆಗೇರಿಸಿಕೊಳ್ಳದೆ ಸದಾಕಾಲ ಬಡವರ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಭಾರತೀಯ ದಂತ ವೈದ್ಯರ ಸಂಘ ಪ್ರತಿ ವರ್ಷ ನಡೆಯುವ ದಂತ ವೈದ್ಯರ ಸಮೇಳನದಲ್ಲಿ ಡಾ|| ಆರ್. ಅಹ್ಮದ್ ಅವರ ನೆನಪಿಗಾಗಿ “ಡಾ|| ಆರ್ ಅಹ್ಮದ್ ಸ್ಮಾರಕ ಧತ್ತಿ ಉಪನ್ಯಾಸ” 1977ರಲ್ಲಿ ಆರಂಬಿಸಿತು. ಪ್ರತಿ ವರ್ಷವೂ ದಂತ ವೈದ್ಯರ ಸಮ್ಮೇಳನದಲ್ಲಿ ಶ್ರೀಯುತರ ಸೇವೆಯನ್ನು ನೆನೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅವರ ದಂತ ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಭಾರತೀಯ ದಂತ ವೈದ್ಯರ ಸಂಘ ಶ್ರೀಯುತರ ಜನ್ಮದಿನವಾದ ಡಿಸೆಂಬರ್ 24ರಂದು ದೇಶದೆಲ್ಲೆಡೆ “ರಾಷ್ಟ್ರೀಯ ದಂತ ವೈದ್ಯರ ದಿನ” ಎಂದು ಆಚರಿಸಿ ಅವರ ಸಾಧನೆ ಮತ್ತು ಸೇವೆಯನ್ನು ಕೊಂಡಾಡುವ ಪುಣ್ಯ ಕಾರ್ಯ ನಡೆಸುತ್ತಿದೆ.

Also Read  ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ, ವೈದ್ಯನಾಗಿ ಸಮಾಜ ಸೇವಕನಾಗಿ, ಒಬ್ಬ ಮಂತ್ರಿಯಾಗಿ, ಒಬ್ಬ ರಾಜಕಾರಣಿಯಾಗಿ, ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಉತ್ತಮ ಹೃದಯವಂತ ಮನುಷ್ಯನಾಗಿ ತಾನು ನಂಬಿದ ತತ್ವ ಆದರ್ಶಗಳನ್ನು ಬಲಿಗೊಡದೆ ನುಡಿದಂತೆ ನಡೆದು ಜೀವನದುದ್ದಕ್ಕೂ ಬಡವರ ಹಿಂದುಳಿದವರ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಸಿ, 75 ವರ್ಷಗಳ ಸಾರ್ಥಕ ಜೀವನ ನಡೆಸಿ 1965ರ ಜನವರಿ 18ರಂದು ದೈವಾದೀನರಾದರು. ಅವರು ತೋರಿಸಿ ಕೊಟ್ಟ ಆದರ್ಶ ತತ್ವಗಳನ್ನು ಪಾಲಿಸಿ, ಸಮಾಜದ ಎಲ್ಲ ಸ್ತರದ ಜನರಿಗೆ ಸಮಾನವಾದ ಗೌರವ ನೀಡಿ ಎಲ್ಲ ರೋಗಿಗಳನ್ನು ಒಂದೇ ರೀತಿಯಲ್ಲಿ ಕಂಡರೆ ಅದುವೇ ಆ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ತಪ್ಪಲ್ಲ. ಇಂದಿನ ಬದಲಾದ ರಾಜಕೀಯ ಸಾಮಾಜಿಕ ಮತ್ತು ಸಾಂಸ್ಕøತಿಕ ವಾತಾವರಣದಲ್ಲಿ ದಂತ ವೈದ್ಯಕೀಯ ಚಿಕಿತ್ಸೆ ಕೂಡಾ ಬಹಳಷ್ಟು ಪ್ರಗತಿ ಸಾಧಿಸಿದೆ. ವೈದ್ಯ ರೋಗಿಗಳ ನಡುವಿನ ಸಂಬಂಧವೂ ಮೊದಲಿನಂತೆ ಇಲ್ಲ, ವೈದ್ಯ ಮತ್ತು ರೋಗಿಗಳ ನಡುವಿನ ಸಂಘರ್ಷ ಅಲ್ಲಲ್ಲಿ ನಡೆಯುತ್ತಲೇ ಇದೆ. ಸಾಕಷ್ಟು ವೈದ್ಯಕೀಯ ಅವಿಷ್ಕಾರಗಳು ನಡೆದಿವೆ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ. ಆದರೆ ವಿಪರ್ಯಾಸವೆಂದರೆ ಮನುಷ್ಯ ಮನುಷ್ಯರ ನಡುವಿನ ಸಂಬಂಧ ಹಳಸುತ್ತಲೇ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ದಂತ ವೈದ್ಯರು ತಮ್ಮ ವೃತ್ತಿ ಜೀವನದ ತಪ್ಪು ಒಪ್ಪುಗಳನ್ನು ಪರಾಮರ್ಶಿಸಿ ಬದಲಾದ ಸಾಮಾಜಿಕ ಮತ್ತು ಸಾಂಸ್ಕøತಿಕ ಸನ್ನಿವೇಶಗಳಲ್ಲಿ ರೋಗಿಯ ಅವಶ್ಯಕತೆಗಳಿಗನುಗುಣವಾಗಿ ವೈದ್ಯಕೀಯ ವೃತ್ತಿಯ ರಾಜಧರ್ಮವನ್ನು ಬಲಿಕೊಡದೇ ಪ್ರಾಮಾಣಿಕವಾಗಿ ಚಿಕಿತ್ಸೆ ನೀಡುವುದರ ಜೊತೆಗೆ ಮಾನವೀಯತೆಯ ಸ್ಪರ್ಶ ನೀಡಿದಲ್ಲಿ ವೈದ್ಯ ರೋಗಿಯ ನಡುವಿನ ಸಂಬಂಧ ಮೊದಲಿನಂತಾಗಿ ಸದೃಢ ಮತ್ತು ಸುಬೀಕ್ಷ ಸಮಾಜ ನಿರ್ಮಾಣವಾಗಬಹುದು. ಹಾಗಾದಲ್ಲಿ ಮಾತ್ರ ಭಾರತೀಯ ದಂತ ವೈದ್ಯಕೀಯ ಕ್ಷೇತ್ರದ ಪಿತಾಮಹ ಡಾ|| ಆರ್. ಅಹ್ಮದ್ ಅವರು ಕಂಡ ರಾಮರಾಜ್ಯದ ಕನಸು ನನಸಾಗಿ ಸಮಾಜದ ಕಟ್ಟ ಕಡೆಯ ಜನರಿಗೂ ಪರಿಪೂರ್ಣ ದಂತ ಚಿಕಿತ್ಸೆ ಸಿಗಬಹುದು. ಅದುವೇ ಡಾ| ಆರ್. ಅಹ್ಮದ್ ಅವರ ಆತ್ಮಕ್ಕೆ ನಾವು ನೀಡುವ ಗೌರವ ಎಂದರೂ ತಪ್ಪಲ್ಲ.
ಡಾ|| ಮುರಲೀ ಮೋಹನ ಚೂಂತಾರು

error: Content is protected !!
Scroll to Top