ಬಂಟ್ವಾಳ, ಡಿ.22: ಬೈಕ್ ಹಾಗೂ ಟಿಪ್ಪರ್ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಾಯಗೊಂಡ ಘಟನೆ ಕರೋಪಾಡಿ ಗ್ರಾಮದ ಕೇರಳ- ಕರ್ನಾಟಕ ಗಡಿಭಾಗದ ಪಾದೆಕಲ್ಲುವಿನಲ್ಲಿ ರವಿವಾರ ನಡೆದಿದೆ.
ಮೃತಪಟ್ಟವರನ್ನು ಮುಗುಳಿ ನಿವಾಸಿ ಅನ್ವರ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಸಹ ಸವಾರನನ್ನು ನವಾಫ್ ಎಂಬವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಕೇರಳಕ್ಕೆ ಮರಳು ಸಾಗಾಟ ಮಾಡುವ ಲಾರಿ ಪಾದೆಕಲ್ಲು ತಿರುವಿನಲ್ಲಿ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಉರುಳಿ ಬಿದ್ದಿದ್ದು, ಲಾರಿಯ ಚಕ್ರ ಅನ್ವರ್ ಹೊಟ್ಟೆ ಮೇಲೆ ಚಲಿಸಿ ಆತನ ಶರೀರ ಛಿದ್ರಗೊಂಡಿದೆ.
ಘಟನೆ ನಡೆದ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು ಮರಳು ಲಾರಿಗಳ ಸಂಚಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಧಾವಿಸಿದ್ದು, ಪ್ರತಿಭಟನೆ ನಡೆಸಿದ ಜನರನ್ನು ಚದುರಿಸಿ, ಘಟನೆಯ ಬಗ್ಗೆ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ