ವಾಷಿಂಗ್ಟನ್, ಡಿ.19: ಅಧಿಕಾರ ದುರುಪಯೋಗದ ಆರೋಪದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ ಬುಧವಾರ ವಾಗ್ದಂಡನೆಗೆ ಗುರಿಪಡಿಸಿದೆ.
ಮುಂದಿನ ತಿಂಗಳು ಅಮೇರಿಕಾ ಸಂಸತ್ತಿನ ಮೇಲ್ಮನೆ ಸೆನೆಟ್ ನಲ್ಲಿ ವಾಗ್ದಂಡನೆ ಪ್ರಕ್ರಿಯೆ ನಡೆಯಲಿದ್ದು, ಸೆನೆಟ್ ನಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕ್ ಪಕ್ಷಕ್ಕೆ ಬಹುಮತ ಹೊಂದಿರುವ ಕಾರಣ ವಾಗ್ದಂಡನೆಗೆ ಹಿನ್ನಡೆಯಾಗಿ ಟ್ರಂಪ್ ಗೆ ಗೆಲುವಾಗುವ ಸಾಧ್ಯತೆಯಿದೆ.
ಬುಧವಾರ ಜನಪ್ರತಿನಿಧಿಗಳ ಸಭೆಯಲ್ಲಿ ವಾಗ್ದಂಡನೆ ಪ್ರಕ್ರಿಯೆ ನಡೆಯಿತು. ಸುಮಾರು 6 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಯಿತು. ನಂತರ ವಾಗ್ದಂಡನೆಯನ್ನು ಮತದಾನಕ್ಕೆ ಹಾಕಿದಾಗ 435 ಸದಸ್ಯರ ಸಭೆಯಲ್ಲಿ ಟ್ರಂಪ್ ವಿರುದ್ಧ 232 ಸದಸ್ಯರು ಮತಚಲಾಯಿಸಿದರು. ವಾಗ್ದಂಡನೆ ಪಾಸ್ ಆಗಲು 216 ಮತಗಳ ಅಗತ್ಯವಿತ್ತು. ಒಂದು ವೇಳೆ ಸೆನೆಟ್ ನಲ್ಲೂ ಟ್ರಂಪ್ ಗೆ ಸೋಲಾದರೆ ಅಧ್ಯಕ್ಷ ಪದವಿಯಿಂದ ಕೆಳಗಿಳಿಯಬೇಕಾಗುತ್ತದೆ.