(ನ್ಯೂಸ್ ಕಡಬ) newskadaba.com, ಪುತ್ತೂರು , ನ.28. ಸಾಲ್ಮರ ಮೌಂಟನ್ ವ್ಯೂ ಮಹಿಳಾ ಶರೀಅತ್ ಮತ್ತು ಪಿ.ಯು.ಕಾಲೇಜ್ ನಲ್ಲಿ ಈದ್ ಮೀಲಾದ್ ಮತ್ತು ಕಾಲೇಜ್ ಡೆ ಪ್ರಯುಕ್ತ ‘ಗ್ಲೋ-2019’ ಕಾರ್ಯಕ್ರಮವು ಕಾಲೇಜ್ ಸಭಾಂಗಣದಲ್ಲಿ ಜರಗಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಅವರು ಮಹಿಳೆಯರು ಲೌಕಿಕ ಶಿಕ್ಷಣದ ಜೊತೆಗೆ ಉನ್ನತ ಧಾರ್ಮಿಕ ಶಿಕ್ಷಣವನ್ನೂ ಪಡೆದಾಗ ಅವರಿಂದ ಉತ್ತಮ ಸುಸಂಸ್ಕೃತ ಕುಟುಂಬ ಕಟ್ಟಲು ಸಾಧ್ಯವಾಗುವುದು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಮುಹಮ್ಮದ್ ಸಾಹೇಬ್ ಅವರು, ವಿದ್ಯಾರ್ಥಿನಿಯರು ಕಲಿಕೆಯ ಜೊತೆಗೆ ಸ್ಪರ್ಧಾತ್ಮಕ ಕಾರ್ಯಕ್ರಮಗಳ ಮೂಲಕ ಪ್ರತಿಭಾ ಕೌಶಲ್ಯಗಳನ್ನು ಪಡೆದುಕೊಂಡಾಗ ಮುಂದೆ ಸಮರ್ಥ ಮಹಿಳಾ ವಿದ್ವಾಂಸೆಯರಾಗಿ ರೂಪುಗೊಂಡು ಮಹಿಳೆಯರಿಗೆ ಮಾರ್ಗದರ್ಶನ ನೀಡಲು ಸಾಧ್ಯ ಎಂದರು.
ಮುಖ್ಯ ಭಾಷಣ ಮಾಡಿದ ಶರೀಅತ್ ಕಾಲೇಜ್ ಪ್ರಾಂಶುಪಾಲ ಕೆ.ಎಂ.ಎ.ಕೊಡುಂಗಾಯಿ ಪಾಝಿಲ್ ಹನೀಫಿ ಅವರು ಮಾತನಾಡಿ, ಇಹಪರ ಯಶಸ್ಸು ನಮ್ಮ ಬದುಕಿನ ಮುಖ್ಯ ಲಕ್ಷ್ಯ ವಾಗಿದ್ದು ಶರೀಅತ್ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರು ಅದನ್ನು ಬದುಕಲ್ಲಿ ಅಳವಡಿಸಿಕೊಂಡು ಶಿಸ್ತಿನಿಂದ ಧರ್ಮದ ಚೌಕಟ್ಟಿನಡಿ ಸುಸಂಸ್ಕೃತರಾಗಿ ಬಾಳಿ. ಜೊತೆಗೆ ಮನೆ, ಕುಟುಂಬವನ್ನು ಅದೇ ಹಾದಿಯಲ್ಲಿ ಬೆಳಗಿಸಿದಾಗ ಯಶಸ್ಸು ಖಂಡಿತಾ ಸಾಧ್ಯ ಎಂದರು. ಸಂಸ್ಥೆಯ ಕಾರ್ಯದರ್ಶಿ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಬಳಿಕ ಕಾಲೇಜ್ ನ ಒಳಾಂಗಣದಲ್ಲಿ ಶರೀಅತ್ ಮತ್ತು ಪಿಯು ವಿಭಾಗದ ಶಿಕ್ಷಕಿಯರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮ “ಗ್ಲೋ-2019” ನಡೆಯಿತು. ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಸಮಗ್ರ ಚಾಂಪಿಯನ್, ವಯಕ್ತಿಕ ಚಾಂಪಿಯನ್, ಟ್ಯಾಲೆಂಟ್-2019, ಐಡಿಯಲ್ ಸ್ಟೂಡೆಂಟ್, ಟಾಪ್ ಸ್ಕೋರರ್ ಮೊದಲಾದ ವಿವಿಧ ಬಹುಮಾನಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಗಳನ್ನು ಪಿ.ಯು.ವಿಭಾಗದ ಪ್ರಾಂಶುಪಾಲೆ ಸಾಜಿದಾ , ಪಿಯು ಮತ್ತು ಶರೀಅತ್ ಉಪನ್ಯಾಸಕಿಯರಾದ ಮುನೀರಾ,ಮಿಶ್ರಿಯಾ, ಬುಶ್ರಾ ಮತ್ತು ಮಶ್ಹೂದ ಮೊದಲಾದವರು ನಿರ್ವಹಿಸಿದರು.