➤➤ ವಿಶೇಷ ಲೇಖನ – ಶಿರಾಡಿ ಘಾಟ್ ಮತ್ತು ದೆವ್ವ ಕಥೆಯ ರಮೇಶ್ ಶೆಟ್ಟಿಗಾರ್ ರವರಿಂದ ➤ “ಪ್ಲೀಸ್ ಹೆಲ್ಪ್ ಮಿ” (ಕಿರುಗತೆ)

ರಾತ್ರಿ ಮೂರು ಗಂಟೆಗೆ ಬಂದ “ಟ್ರಿನ್… ಟ್ರಿನ್… ಟ್ರಿನ್” ಎಂಬ ಒಂದು ಫೋನ್ ಕರೆ ಡೆನ್ಮಾರ್ಕ್ ದೇಶದ ಒಂದು ನಗರವನ್ನೇ ಬಡಿದೆಚ್ಚರಿಸಿತ್ತು. ಹೌದು…!

ಅದೊಂದು ದಿನ: ಎರಿಕ್ ಎಂಬ ಇಪ್ಪತೆಂಟರ ಹರೆಯದ ಯುವಕ ಡೆನ್ಮಾರ್ಕ್ ದೇಶದ ಆ ನಗರದಲ್ಲಿ ‘ಅಗ್ನಿಶಾಮಕ ಹಾಗೂ ತುರ್ತುಸೇವೆ’ಯ ಇಲಾಖೆಯಲ್ಲಿ ಸಿಬ್ಬಂದಿಯಾಗಿ ರಾತ್ರಿ ಪಾಳಿಯ ಸೇವೆ ಮಾಡುತ್ತಿದ್ದ. ಅವನಿಗೆ ರಾತ್ರಿ ಮೂರು ಗಂಟೆಗೆ ಒಂದು ಫೋನ್ ಕರೆ ಬಂತು. “ಹಲೋ, ಎಮರ್ಜೆನ್ಸಿ ಸರ್ವಿಸ್” ಎಂದ ಎರಿಕ್ ವಿಧೇಯನಾಗಿ. “ನ..ನ..ಗೆ… ತಲೆ ತಿ..ರು..ಗು..ತ್ತಿದೆ. ಬೇಗ ಬಂದು… ಪ್ಲೀಸ್ ಹೆಲ್ಪ್ ಮಿ…!” ಎಂದು ಯಾರೋ ವಯಸ್ಸಾದ ಮಹಿಳೆಯೊಬ್ಬಳು ಭಯಾತಂಕದಿಂದ ಕೀರಲು ಧ್ವನಿಯಲ್ಲಿ ಕಿರುಚುತ್ತಿದ್ದಳು.
“ನೀವು ಏನೂ ಆತಂಕಕ್ಕೊಳಗಾಗಬೇಡಿ. ನಾವು ತಕ್ಷಣ ಬರುತ್ತೇವೆ. ಹೇಳಿ, ನೀವು ಎಲ್ಲಿದ್ದೀರಿ?” ಎಂದ ಎರಿಕ್ ಅಷ್ಟೇ ಸಂಯಮದಿಂದ. “ನನಗೆ ನೆನಪಾಗುತ್ತಿಲ್ಲ… ಒಂದು ಕೋಣೆಯಲ್ಲಿದ್ದೇನೆ” ಎಂಬ ಉತ್ತರ ಬಂತು ಆಕೆಯಿಂದ. “ನಿಮ್ಮ ಎಡ್ರೆಸ್ ಹೇಳಿ” ಶಾಂತವಾಗಿ ಕೇಳಿದ ಎರಿಕ್. “ನನಗೆ ನೆನಪಾಗುತ್ತಿಲ್ಲ. ನನಗೆ ತಲೆಯೆಲ್ಲಾ ಸುತ್ತುತ್ತಿದೆ” “ನಿಮ್ಮ ಹೆಸರೇನು?” “ಅಯ್ಯೋ, ನನಗೇನಾಗುತ್ತಿದೆ… ನನ್ನ ಹೆಸರೇ ನೆನಪಾಗುತ್ತಿಲ್ಲ. ಓ.. ಮೈ ಗಾಡ್… ನನ್ನ ತಲೆಗೆ ಪೆಟ್ಟಾಗಿರಬೇಕು..!” ಎಂದಳು, ನಡುಗುವ ಧ್ವನಿಯಲ್ಲಿ.

ಎರಿಕ್ ಯೋಚಿಸಿ ತಕ್ಷಣ ಅ ಕರೆಯನ್ನು ಹಾಗೆಯೇ ಇಟ್ಟು ಫೋನ್ ಕಂಪೆನಿಗೆ ಫೋನ್ ಮಾಡಿ ತನಗೆ ಬಂದಿರುವ ಕರೆಯ ಸ್ಥಳದ ಎಡ್ರೆಸ್ ಕೇಳಿದ‌. ಆದರೆ ಕಾರಣಾಂತರಗಳಿಂದ ಅವರಿಗೆ ಅದನ್ನು ತಕ್ಷಣ ಹೇಳಲಾಗಲಿಲ್ಲ. ಎರಿಕ್ ಬೇರೆ ರೀತಿ ಸಹಾಯ ಮಾಡಲು ಚಿಂತಿಸಿ ಆಕೆಗೆ “ನೀವಿದ್ದ ಕೋಣೆಯಲ್ಲಿ ಲೈಟ್ ಇದೆಯೇ?” ಕೇಳಿದ. “ಹ್ಹುಂ”
“ಸರಿ, ನೀವು ಇರುವಲ್ಲಿ ಫೊನ್‌ ಡೈರಿ ಇದೆಯಾ?”
“ಆದ್ರೆ..‌ನನಗೆ…ಒಂದು ಹೆಜ್ಜೆಯಿಡಲು… ಆಗುತ್ತಿಲ್ಲ. ಓ ಗಾಡ್.. ನಾನು ಸತ್ತು ಹೋಗುತ್ತಿದ್ದೇನೆ… ನೀವು ಬೇಗ ಬಂದು ನನ್ನನ್ನು ಕಾಪಾಡಿ…” ಆಕೆಯ ಧ್ವನಿ ಉಡುಗಿ ಹೋಗುತ್ತಿತ್ತು. ತೀವ್ರವಾಗಿ ಯೋಚಿಸಿದ ಎರಿಕ್, ಆಕೆಯಲ್ಲಿ “ನಿಮಗೆ ಸುತ್ತುಮುತ್ತ ಏನು ಕಾಣುತ್ತಿದೆ?” “ಹೊರಗೆ… ಬೀದಿ..ದೀಪ ಕಾಣುತ್ತದೆ.. ಕಿಟಿಕಿ…” ಎಂದಳು ಕ್ಷೀಣ ಸ್ವರದಲ್ಲಿ “ಓ ಗ್ರೇಟ್. ಯಾವ ರೀತಿಯ ಕಿಟಿಕಿಗಳು?” “ಹಳೆಯ ಬಣ್ಣಬಣ್ಣದ ಗಾಜಿನ ಕಿಟಿಕಿಗಳು..ಬೇಗ.. ಬ..ನ್ನಿ. ಪ್ಲೀ..ಸ್…” ಅವಳ ಧ್ವನಿ ಇಂಗಿ ಹೋಯಿತು.

Also Read  ಪ್ರತ್ಯಂಗಿರ ದೇವಿ ಮಂತ್ರ ಪ್ರಯೋಜನ

ಹಳೆಯ ಬಣ್ಣದ ಕಿಟಿಕಿಗಳು ಅಂದ್ರೆ ಹಳೆಯ ನಗರ ಪ್ರದೇಶವಿರಬೇಕು, ಎಂದುಕೊಂಡ.
“ಸರಿ…ಸರಿ…ನೀವು ಲೈಟ್ ಆರಿಸಬೇಡಿ. ಫೋನ್ ಹಾಗೆಯೇ ಇಟ್ಟುಕೊಂಡಿರಿ. ನಿಮ್ಮನ್ನು ರಕ್ಷಿಸಲು ಬರುತ್ತಿದ್ದೇವೆ….” ಎಂದು ಆ ಹಿರಿಯ ಜೀವಕ್ಕೆ ಧೈರ್ಯ ತುಂಬಿದ. “ಹಲೋ… ಮೇಡಂ…ಹಲೋ” ಆದರೆ ಅವಳು ಉತ್ತರಿಸಲಿಲ್ಲ. ಬದಲು ಆಕೆಯು ಗೊರಗೊರ ಸದ್ದಿನ ಉಸಿರಾಟ ಮಾತ್ರ ಫೋನಿನಲ್ಲಿ ಕೇಳಿಸುತ್ತಿತ್ತು. ಅವಳನ್ನು ರಕ್ಷಿಸಲು ಕ್ಷಿಪ್ರವಾಗಿ ತಲೆಯೋಡಿಸಿ ಎರಿಕ್ ತನ್ನ ಮೇಲಧಿಕಾರಿಗೆ ಫೋನ್ ಮಾಡಿ ವಿಷಯ ತಿಳಿಸಿದ. “ಸರ್, ತಕ್ಷಣ ನಗರದಲ್ಲಿರುವ ಎಲ್ಲಾ ಫೈರ್ ಇಂಜಿನ್‌ಗಳು ಹಳೆನಗರದ ಕಡೆಗೆ ಹೋಗಬೇಕು” ಎಂದು ತನ್ನ ಯೋಜನೆಯನ್ನು ಹೇಳಿದ. “ಎರಿಕ್ ನಿನ್ನ ಪ್ಲಾನ್ ಸಮಯೋಚಿತವಾಗಿದೆ. ಆ ಹಿರಿಯ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ಸು ಸಿಕ್ಕರೂ ಸಿಗಬಹುದು. ನಿನ್ನ ಪ್ರಯತ್ನವನ್ನು ನಿಲ್ಲಿಸಬೇಡ. ಯಾಕೆಂದರೆ ನಾವು ಇಲ್ಲಿರುವುದು ಅಮೂಲ್ಯ ಜೀವಗಳ ರಕ್ಷಣೆಗೆ. ಆಲ್ ದಿ ಬೆಸ್ಟ್ ಎರಿಕ್” ಎಂದರು ಕ್ಯಾಪ್ಟನ್.

ಕ್ಷಣಾರ್ಧದಲ್ಲಿ ನಗರದಲ್ಲಿರುವ ಹದಿನೈದು ಫೈರ್ ಇಂಜಿನ್ ಟ್ರಕ್ಕುಗಳು ಹಳೆನಗರದ ಏರಿಯಾಗಳಿಗೆ ಸೈರನ್ ಸದ್ದಿನೊಂದಿಗೆ ಧಾವಿಸಿದವು. ಎರಿಕ್ ಆಕೆಯ ಫೋನನ್ನು‌ ಕಿವಿಗಾಣಿಸಿಕೊಂಡು ಕಾತರದಿಂದ ಕಾಯುತ್ತಿದ್ದ. ಹೌದು, ಐದು ನಿಮಿಷದಲ್ಲಿ ಫೈರ್ ಇಂಜಿನ್ ಸೈರನ್ ಆಕೆಯ ಫೋನಿನಲ್ಲಿ ಕೇಳಲಾರಂಭಿಸಿತು. ಎರಿಕ್ ಅದನ್ನು ಕೇಳಿದಾಗ ಒಂದು ಹಂತದ ಗೆಲುವನ್ನು ಸಾಧಿಸಿದ ಸಮಾಧಾನವಾಯಿತು. ಆದರೆ ಈಗ ಹದಿನೈದು ಫೈರ್ ಟ್ರಕ್ಕುಗಳಲ್ಲಿ ಆಕೆಯ ಏರಿಯಾದಲ್ಲಿ ಇರುವುದು ಯಾವುದು?

ಅದಕ್ಕೆ ಯೋಚಿಸಿ ಒಂದೊಂದೇ ಫೈರ್ ಇಂಜಿನ್ ಸೈರನ್ ಆಫ್ ಮಾಡಲು ಹೇಳಿದ‌. ಕೊನೆಗೂ ಆ ಏರಿಯಾದಲ್ಲಿದ್ದ ಫೈರ್ ಇಂಜಿನ್ ಯಾವುದೆಂದು ಗೊತ್ತಾಯಿತು. ಟ್ರಕ್ ಸಂಖ್ಯೆ ಹನ್ನೆರಡು..! ಆ ಟ್ರಕ್ಕನ್ನು ಆ ಏರಿಯಾದ ಎಲ್ಲಾ ಬೀದಿಗಳಲ್ಲಿ ಚಲಿಸಲು ಹೇಳಿ ಆ ಸದ್ದು‌ ಸ್ಪಷ್ಟವಾಗಿ ಕೇಳಿಸಿದಾಗ ಅಲ್ಲೇ ನಿಲ್ಲಿಸಲು‌ ಹೇಳಿದ. ಈಗ ಆಕೆಯ ಉಸಿರಾಟ ಮತ್ತು ಸೈರನ್ ಸದ್ದು ಎರಡೂ‌ ಕೇಳಿಸುತ್ತಿತ್ತು. ಈಗ ಆ ಬೀದಿಯೂ ಗೊತ್ತಾಯಿತು. ಆದರೆ ಅಲ್ಲಿರುವ ನೂರಾರು ಮನೆಗಳಲ್ಲಿ‌ ಅವಳ ಮನೆ ಯಾವುದು? ಈಗಾಗಲೇ ಫೈರ್ ಇಂಜಿನ್ ಸದ್ದಿನಿಂದ ಎಚ್ಚರವಾಗಿ ಗಾಬರಿಯಾದ ಜನರು ತಮ್ಮ‌ಮನೆಗಳಲ್ಲಿ ಲೈಟ್ ಹಾಕಿ ಕಾತರದಿಂದ ಫೈರ್ ಇಂಜಿನ್ ಕಡೆಗೆ ನೋಡುತ್ತಿದ್ದರು.

Also Read  ನಿಮ್ಮ ಭಾಗ್ಯದಲ್ಲಿ ಸರ್ಕಾರಿ ನೌಕರಿ ಖಾಸಗಿ ಅಥವಾ ಸ್ವಂತ ಬಿಜಿನೆಸ್ ಏನಿದೆ ರೇಖೆ ಮೂಲಕ ತಿಳಿಯಿರಿ ಕಷ್ಟಗಳಿಗೆ ಪರಿಹಾರ ಪಡೆದುಕೊಳ್ಳಿ

ಅವನಿಗೆ ಹೊಳೆಯಿತು. ಅವನು ಆ ಫೈರ್ ಇಂಜಿನ್‌ನ ಪಬ್ಲಿಕ್ ಎನೌನ್ಸ್ಮೆಂಟ್ ಮೂಲಕ ಹೀಗೆ ಹೇಳಿಸಿದ “ಹಲೋ ಜನಗಳೇ, ಮಧ್ಯರಾತ್ರಿ ನಿಮಗೆ ತೊಂದರೆ‌ ಕೊಟ್ಟದ್ದಕ್ಕೆ ಕ್ಷಮಿಸಿ. ನಿಮ್ಮ ಬೀದಿಯಲ್ಲಿರುವ ಒಬ್ಬ ವಯಸ್ಸಾದ ಅನಾಮಿಕ ಮಹಿಳೆಗೆ ತುರ್ತು ಸಹಾಯ ಬೇಕಿದೆ. ಅದಕ್ಕೆ ನೀವೆಲ್ಲರೂ ಸಹಕರಿಸಬೇಕು. ಆಕೆ ಈ ಬೀದಿಯಲ್ಲೇ ಇದ್ದಾಳೆ. ಆದರೆ ಆಕೆಯ ಮನೆ ಯಾವುದೆಂದು ಗೊತ್ತಿಲ್ಲ. ಆದರೆ ಅವಳ ಮನೆಯ ಕೋಣೆಯಲ್ಲಿ‌ ಲೈಟ್ ಉರಿಯುತ್ತಿದೆ. ಅದಕ್ಕೆ ನೀವೆಲ್ಲಾ ನಿಮ್ಮ ಮನೆಯ ಎಲ್ಲಾ‌ ಲೈಟುಗಳನ್ನು ಆರಿಸಬೇಕಾಗಿ ವಿನಂತಿ”

ಕ್ಷಣದಲ್ಲಿ ಎಲ್ಲಾ ಮನೆಗಳಲ್ಲಿ ಲೈಟ್ ಆರಿ ಕತ್ತಲು‌ ಆವರಿಸಿತು. ಅದರೆ ಆ ಒಂದು ಮನೆಯ ಕೋಣೆಯೊಳಗೆ ಮಾತ್ರ ಲೈಟ್ ಉರಿಯುತ್ತಿತ್ತು. ಎರಿಕ್ ಮಾಡಿದ ಪ್ಲಾನ್ ನಿಜವಾಗಿಯೂ ಅದ್ಭುತವಾಗಿತ್ತು. ತಕ್ಷಣ ಕಾರ್ಯಪ್ರವರ್ತರಾದ ಅಗ್ನಿಶಾಮಕ ತಂಡದವರು ಆ ಮನೆಯ ಕಿಟಿಕಿ ಒಡೆದು ಒಳಹೊಕ್ಕು ಸಾವಿನಂಚಿನಲ್ಲಿದ್ದ ಅ ಹಿರಿಯ ಜೀವವನ್ನು ರಕ್ಷಿಸಿದರು. ಅಂತೂ ಪ್ರಾಣೋತ್ಕ್ರಮಣದ ಅಂತಿಮ ಕ್ಷಣದಲ್ಲಿ ಆಕೆಯು ತುರ್ತು ಚಿಕಿತ್ಸೆ ವಿಭಾಗದಲ್ಲಿ ದಾಖಲಾಗಿ ಬದುಕುಳಿದು ಕೆಲದಿನಗಳ ಚಿಕಿತ್ಸೆಯ ನಂತರ ಆರೋಗ್ಯಕರವಾಗಿ ಮತ್ತೆ ನೆನಪು ಶಕ್ತಿಯನ್ನು ಪಡೆದು ತನ್ನ ಮನೆಗೆ ಹಿಂತಿರುಗಿದರು.

ಚಿಂತನೆ: ಹೀಗೆ ಎರಿಕ್‌ ಮಾಡಿದ ಸಮಯೋಚಿತ ಕಾರ್ಯಪ್ರಜ್ಞೆ ಹಾಗೂ ಭಗೀರಥ ಪ್ರಯತ್ನದಿಂದ ಆ ವಯೋವೃದ್ಧೆಯ ಪ್ರಾಣವು ಉಳಿಯಿತು. ನಾವು ಮಾಡಬೇಕಾದ ಕಾರ್ಯವನ್ನು ಶ್ರದ್ಧೆಯಿಂದ ಹಾಗೂ ತಂಡ ನಿಷ್ಠೆಯಿಂದ ಮಾಡಿದರೆ ಅಚ್ಚರಿಯ ಫಲಿತಾಂಶಗಳನ್ನು ಪಡೆಯಬಹುದು ಎಂಬುವುದಕ್ಕೆ ಈ ಕಥೆಯೇ ನಿದರ್ಶನ.

Also Read  ಆರೋಗ್ಯ ಭಾದೆ ಸಮಸ್ಯೆಗೆ ಇದು ರಾಮ ಬಾಣ ಮತ್ತು ದಿನ ಭವಿಷ್ಯ.

(ಇದನ್ನೋದಿದ ನಿಮ್ಮ ಅನಿಸಿಕೆಯನ್ನು ಮುಕ್ತವಾಗಿ ತಿಳಿಸಬೇಕಾಗಿ ವಿನಂತಿ.

Based on a Inspired clipping by NTD)
ಬರಹ – ರಮೇಶ್ ಶೆಟ್ಟಿಗಾರ್ ಮಂಜೇಶ್ವರ

error: Content is protected !!
Scroll to Top