ವಿಶ್ವದಾದ್ಯಂತ ಪ್ರತಿ ವರ್ಷ ಅಕ್ಟೋಬರ್ 20ರಂದು ವಿಶ್ವ ಅಸ್ಥಿರಂದ್ರತೆ ಜಾಗೃತಿ ದಿನ ಎಂದು ಆಚರಿಸಿ ಜನರಲ್ಲಿ ಅಸ್ಥಿರಂದ್ರತೆಯ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಯಾಕಾಗಿ ಅಸ್ಥಿರಂದ್ರತೆ ಬರುತ್ತದೆ, ಹೇಗೆ ತಡೆಯಬಹುದು, ಯಾವ ರೀತಿಯ ಆಹಾರ ಸೇವನೆ ಅವಶ್ಯಕ, ಅಸ್ಥಿರಂದ್ರತೆಯ ಅಪಾಯಗಳು ಏನು ಮತ್ತು ಹೇಗೆ ಜೀವನ ಶೈಲಿ ಬದಲಾಯಿಸಬೇಕು ಮುಂತಾದವುಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳುವಳಿಕೆ ನೀಡಲಾಗುತ್ತದೆ. ಇದರ ಜೊತೆಗೆ ರೋಗದ ಚಿಕಿತ್ಸೆಯ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಿ ರೋಗಿಗೆ ಮಾನಸಿಕ ದೈರ್ಯ ಮತ್ತು ಸಾಂತ್ವಾನ ಹೇಳುವ ಕೆಲಸವನ್ನು ಮಾಡಲಾಗುತ್ತಿದೆ. 2016, 2017 ಮತ್ತು 2018ನೇ ಇಸವಿಯಲ್ಲಿ “ನಿಮ್ಮ ಎಲುಬನ್ನು ಪ್ರೀತಿಸಿ ನಿಮ್ಮ ಭವಿಷ್ಯವನ್ನು ರಕ್ಷಿಸಿ” ಎಂಬ ತಿರುಳನ್ನು ಇಟ್ಟು ಈ ದಿನವನ್ನು ಆಚರಿಸಲಾಗಿತ್ತು. 2019ರಲ್ಲಿ “ಅದುವೇ ಅಸ್ಥಿರಂದ್ರತೆ” ಎಂಬ ಘೋಷ ವಾಕ್ಯದೊಂದಿಗೆ ಈ ಅಸ್ಥಿರಂದ್ರತೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅಸ್ಥಿರಂದ್ರತೆಯಿಂದ ಬರುವ ನೋವು, ಉಂಟಾಗುವ ದೈಹಿಕ ಅಂಗವಿಕಲತೆ, ಇತರರ ಮೇಲೆ ಅವಲಂಭಿತವಾಗುವುದು ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಿ ರೋಗ ಬರದಂತೆ ಸಾಕಷ್ಟು ಮುಂಜಾಗರುಕತೆ ಕ್ರಮವನ್ನು ತೆಗೆದುಕೊಳ್ಳುವಂತೆ ಜನರ ಮನ ಪರಿವರ್ತನೆ ಮಾಡುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಅಂತರಾಷ್ಟ್ರೀಯ ಅಸ್ಥಿರಂದ್ರತೆ ಸಂಸ್ಥೆ ಈ ಕಾರ್ಯಚರಣೆಯನ್ನು 1996ರಲ್ಲಿ ಇಂಗ್ಲೇಡಿನಲ್ಲಿ ಆರಂಭಿಸಿದ್ದು ಈಗ ಸುಮಾರು 90 ರಾಷ್ಟ್ರಗಳಲ್ಲಿ ಈ ಆಂದೋಲನ ನಡೆಸಲಾಗುತ್ತಿದೆ. ಅಮೇರಿಕಾ ದೇಶವೊಂದರಲ್ಲಿಯೇ 50ವರ್ಷ ದಾಟಿದ ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರಿಗೆ ಮತ್ತು ಪ್ರತಿ ಎಂಟು ಗಂಡಸರಲ್ಲಿ ಒಬ್ಬರಿಗೆ ಅಸ್ಥಿರಂದ್ರತೆ ಕಾಡುತ್ತದೆ. ಇದಲ್ಲದೆ ಪ್ರತಿ 4ರಲ್ಲಿ ಒಬ್ಬರಿಗೆ ಬೆನ್ನುಹುರಿಯ ಮೂಳೆ ಮುರಿತ ಉಂಟಾಗುವ ಎಲ್ಲಾ ಸಾಧ್ಯತೆ ಇರುತ್ತದೆ. ಎಂದು ಅಂಕಿಅಂಶಗಳಿಂದ ಸಾಬೀತಾಗಿದೆ.
ಅಸ್ಥಿರಂದ್ರತೆ ವೃದ್ದಾಪ್ಯದ ಶಾಪವಲ್ಲ
“ಅಸ್ಥಿರಂದ್ರತೆ” ಎಂದರೆ ಟೊಳ್ಳು ಮೂಳೆ ರೋಗ ಅಥವಾ “ಆಸ್ಮಿಯೋ ಪೊರೋಸೊಸ್” ಎಂಬ ರೋಗವಾಗಿದ್ದು ಸಾಮಾನ್ಯವಾಗಿ ವೃದ್ಯಾಪ್ಯದಲ್ಲಿ ಮತ್ತು ನಡುವಯಸ್ಕರಲ್ಲಿ ಕಂಡು ಬರುತ್ತದೆ. ಸಾಮಾನ್ಯ ಆಡು ಭಾಷೆಯಲ್ಲಿ ಇದನ್ನು ಮೂಳೆ ಟೊಳ್ಳಾಗುವುದು ಅಥವಾ ಮೂಳೆಗಳು ದುರ್ಬಲಗೊಳ್ಳುವುದು ಎನ್ನುತ್ತಾರೆ. ಎಲುಬು ನಮ್ಮ ದೇಹದ ಅತ್ಯಂತ ಶಕ್ತಿಯುತವಾದ ಅಂಗವಾಗಿದ್ದು ದೇಹಕ್ಕೆ ಸ್ಥಿರತೆ ಮತ್ತು ಶಕ್ತಿಯನ್ನು ನೀಡುತ್ತದೆ. ಈ ಎಲುಬಿನ ಹೊರಭಾಗ ಅತ್ಯಂತ ಗಡುಸಾಗಿದ್ದು ಒಳಭಾಗದಲ್ಲಿ ಅಸ್ಥಿಮಜ್ಜೆ (ಃಚಿಡಿe ಒಚಿಡಿಡಿoತಿ) ಇರುತ್ತದೆ. ವಯಸ್ಸಾದಂತೆ ಮೂಳೆಯ ಒಳಗಿರುವ ಅಸ್ಥಿ ಪಂಜರದಲ್ಲಿರುವ ಕೊಲಾಜನ್ ಎಂಬ ಪ್ರೋಟಿನ್‍ನ ಸಾಂದ್ರತೆ ಕಡಮೆಯಾಗುತ್ತದೆ ಮತ್ತು ಖನಿಜಾಂಶಗಳ ಸಾಂದ್ರತೆಯೂ ಕಡಿಮೆಯಾಗುತ್ತದೆ ಇದರಿಂದ ಮೂಳೆ ತನ್ನ ಗಡಸುತನ ಮತ್ತು ಶಕ್ತಿಯನ್ನು ಕಳೆದುಕೊಂಡು ಟೊಳ್ಳಾಗುತ್ತದೆ. ಈ ಹಂತದಲ್ಲಿ ಸ್ವಲ್ಪ ಗಾಯವಾದರೂ ಮೂಳೆ ಮುರಿತವಾಗುವ ಸಂಭವವಿರುತ್ತದೆ. ಮೂಳೆಯ ಒಳಗಿನ ಖನಿಜದ ಸಾಂದ್ರತೆ ಕಡಮೆಯಾದಾಗ ಮೂಳೆಗಳು ತನ್ನಿಂತಾನೇ ಮುರಿತವಾಗುವ ಸಾಧ್ಯತೆ ಇರುತ್ತದೆ. ಈ ಹಂತದಲ್ಲಿ ವಯಸ್ಸಾದವರು ಅತಿಯಾದ ಭಾರ ಎತ್ತಿದರೆ ಅಥವಾ ಎಲ್ಲಾದರೂ ಮನೆಯೊಳಗೆ ಬಿದ್ದಲ್ಲಿ ಬೇಗನೆ ಮೂಳೆ ಮುರಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಮೂಳೆಯು ಮುರಿಯುವ ಸಾಧ್ಯತೆಯೂ ಇರುತ್ತದೆ. ಈ ಕಾರಣದಿಂದಲೇ ಈ ರೋಗವನ್ನು “ಮೌನ ಮಾರಿ” ಅಥವಾ “ಮೌನ ರೋಗ” ಎಂದು ಕರೆಯುತ್ತಾರೆ. ಏಕೆಂದರೆ ಮೂಳೆ ಮುರಿಯುವ ತನಕ, ಇತರ ಯಾವುದೇ ರೋಗದ ಲಕ್ಷಣಗಳು ಮತ್ತು ಚಿಹ್ನೆಗಳು ಗೋಚರಿಸುವುದಿಲ್ಲ. ವಯೋವೃದ್ದರಲ್ಲಿ ಸಾಮಾನ್ಯವಾಗಿ ಕಾಣುವ ಈ ರೋಗ, ಸೊಂಟ, ಹಿಂಭಾಗ, ಮುಂಗೈ ಮತ್ತು ಬೆನ್ನುಹುರಿ ಮೂಳೆಗಳಲ್ಲಿ ಹೆಚ್ಚಾಗಿ ಮುರಿತ ಕಂಡುಬರುತ್ತದೆ. ಸದ್ದಿಲ್ಲದೇ ಯಾವುದೇ ಮುನ್ಸೂಚನೆ ಇಲ್ಲದೆ ಕಾಣಿಸಿಕೊಳ್ಳುವ ಈ ಅಸ್ಥಿರಂದ್ರತೆ, ಪುರುಷರಿಗಿಂತಲೂ ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಖುತುಚಕ್ರ ಕೊನೆಗೊಳ್ಳುವ ಪ್ರಕ್ರಿಯೆಯ ನಂತರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ರೋಗಕ್ಕೆ ಕಾರಣಗಳು ಏನು? :-
1. ಅತಿಯಾದ ಸ್ಥಿರಾಯ್ಡುಗಳ ಸೇವನೆ.
2. ಅತಿಯಾದ ಗರ್ಭನಿರೋಧಕ ಔಷಧಿಗಳ ಬಳಕೆ.
3. ಧೂಮಪಾನ, ತಂಬಾಕು ಮತ್ತು ಅತಿಯಾದ ಅಲ್ಕೋಹಾಲ್ ಬಳಕೆಗಳಿಂದ ಕೂಡಿದ ಐಷಾರಾಮಿ ಜೀವನ ಶೈಲಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡದಿರುವುದು.
4. ಥೈರಾಯ್ಡು ಸಮಸ್ಯೆ.
5. ರಸದೂತಗಳ ವೈಪರೀತ್ಯ (ಆಂಡ್ರೋಜೆನ್ ಮತ್ತು ಇಸ್ಟ್ರೋಜೆನ್)
6. ಕಡಮೆ ಲವಣಯುಕ್ತ ಆಹಾರ, ಆಹಾರ ಸೇವನೆಯ ದೋಷಗಳು, ಕಾಲ್ಸಿಯಂಯುಕ್ತ ಆಹಾರ ಸೇವನೆ ಮಾಡದಿರುವುದು.
7. ಬಿಸಿಲಿನಲ್ಲಿ ಹೋದರೆ ಚರ್ಮದ ಕಾಂತಿ ಹಾಳಾಗುತ್ತದೆಂದು ಹೆದರಿ ಮನೆಯಲ್ಲಿಯೇ ಉಳಿದು, ಹೊರ ಹೋಗದಿರುವುದು. ಹೊರಗಡೆ ಹೋದರೂ ಸನ್ ಕ್ರೀಮ್ ಹಚ್ಚಿ, ಸೂರ್ಯನ ಶಾಖ ಮತ್ತು ಕಿರಣಗಳು ಕೊಂಚವೂ ತ್ವಚ್ಛೆಗೆ ತಾಗದಂತೆ ಎಚ್ಚರ ವಹಿಸುವುದು, ಪೂರ್ತಿ ಮೈ ಮುಚ್ಚುವ ಬಟ್ಟೆ ಧರಿಸಿ, ಚರ್ಮಕ್ಕೆ ಬಿಸಿಲು ತಾಗದಂತೆ ಮಾಡುವುದು, ಸೂರ್ಯನ ಕಿರಣ, ವಿಟಮಿನ್ ‘ಡಿ’ ಉತ್ಪಾದನೆ ದೇಹಕ್ಕೆ ಅತೀ ಅವಶ್ಯಕ, ಈ ವಿಟಮಿನ್ ‘ಡಿ’ ದೇಹದಲ್ಲಿ ಕ್ಯಾಲ್ಸಿಯಂಯನ್ನು ಸೆಳೆದುಕೊಳ್ಳಲು ಅತೀ ಅಗತ್ಯ.
ರೋಗದ ಲಕ್ಷಣಗಳು ಏನು? :-
1. ಮೂಳೆಗಳಲ್ಲಿ ನೋವು ಮತ್ತು ಊತ.
2. ಮಾಂಸ ಖಂಡದ ದುರ್ಬಲತೆ ಮತ್ತು ವಿಪರೀತ ಸ್ನಾಯು ನೋವು.
3. ಹಠಾತ್ ಬೆನ್ನು ನೋವು ಮತ್ತು ಬೆನ್ನು ಹುರಿಯ ಮೇಲೆ ವಿಪರೀತ ಒತ್ತಡ ಮತ್ತು ಉರಿತ ಬಂದಲ್ಲಿ ಬೆನ್ನು ಹುರಿಯ ಎಲುಬು ಮುರಿದಿದೆ ಎಂದರ್ಥ.
4. ಉದ್ದದ ಮೂಳೆ (ಐoಟಿg ಃoಟಿe) ಮುರಿತದಿಂದ ರೋಗಿನ ಚಲನವಲನಕ್ಕೆ ತೊಂದರೆಯಾಗಬಹುದು.
5. ಯಾವುದೇ ಕಾರಣವಿಲ್ಲದೆ ವ್ಯಕ್ತಿ ಚಲನೆ ಮಾಡಲು ಹಿಂಜರಿದಲ್ಲಿ ಮೂಳೆ ಮುರಿತವನ್ನು ಸಂಶಯಿಸಬಹುದು. ಸಾಮಾನ್ಯವಾಗಿ ಈ ಹಠಾತ್ ಮೂಳೆ ಮುರಿತ ಮತ್ತು ಸೊಂಟದ ಸುತ್ತ ನೋವು ವಯಸ್ಸಾದವರಲ್ಲಿ ಕಂಡು ಬರುತ್ತದೆ. ತಕ್ಷಣವೇ ವೈದ್ಯರ ಬಳಿ ತೋರಿಸಿ ಕ್ಷ ಕಿರಣ ಮಾಡಿಸಿದಲ್ಲಿ ಮುರಿತವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ನೀಡಬೇಕು.
ತಡೆಗಟ್ಟುವುದು ಹೇಗೆ? :-
1. ನಿಯಮಿತವಾಗಿ ದಿನನಿತ್ಯ ಒಂದು ಗಂಟೆಗಳ ಕಾಲ ವ್ಯಾಯಾಮ ಮಾಡುವುದು, ನಲವತ್ತು ವರ್ಷದ ವರೆಗೆ ದಿನನಿತ್ಯ ವ್ಯಾಯಾಮ ಮಾಡಿ, ಕ್ಯಾಲ್ಸಿಯಂಭರಿತ ಪೌಷ್ಠಿಕ ಆಹಾರ ಸೇವಿಸಿದ್ದಲ್ಲಿ ವ್ಯಕ್ತಿಯ ಎಲುಬಿನ ಸಾಂದ್ರತೆ (ಬೋನ್ ಮಾಸ್) ಹೆಚ್ಚಿರುತ್ತದೆ. ಇಂತಹಾ ವ್ಯಕ್ತಿಯ ಮೂಳೆಗಳು ವಯಸ್ಸಾದ ಬಳಿಕವೂ ಆರೋಗ್ಯದಾಯಕವಾಗಿರುತ್ತದೆ. ಈ ಕಾರಣದಿಂದಲೇ ಅಸ್ಥಿರಂದ್ರತೆಯನ್ನು ತಡೆಯಲು ನಿಯಮಿತವಾದ ಮತ್ತು ನಿರಂತರವಾದ ದೈಹಿಕ ವ್ಯಾಯಾಮ ಅತೀ ಅಗತ್ಯ.
2. ವೈದ್ಯರ ಸಲಹೆ ಇಲ್ಲದೆ ಅತಿಯಾಗಿ ಗರ್ಭನಿರೋಧಕ ಔಷಧಿಗಳನ್ನು ಮಹಿಳೆಯರು ಬಳಸಲೇಬಾರದು.
3. ಅತಿಯಾದ ಸ್ಥಿರಾಯ್ಡು ಸೇವನೆಯನ್ನು ನಿಯಂತ್ರಿಸಬೇಕು.
4. ಧೂಮಪಾನ, ತಂಬಾಕು ಉತ್ಪನ್ನಗಳ ಬಳಕೆ ಮತ್ತು ಅಲ್ಕೋಹಾಲ್ ಸೇವನೆಯನ್ನು ಸಂಪೂರ್ಣವಾಗಿ ವರ್ಜಿಸಬೇಕು, ಇದು ಬರೀ ಎಲುಬಿನ ಸಾಂದ್ರತೆಯನ್ನು ಹೆಚ್ಚಿಸಲು ಮಾತ್ರವಲ್ಲದೆ ವ್ಯಕ್ತಿಯ ಸಂಪೂರ್ಣ ಆರೋಗ್ಯಕ್ಕೆ ಅತೀ ಅಗತ್ಯ.
5. ರಸದೂತಗಳ ವೈಪರೀತ್ಯ ಮತ್ತು ಥೈರಾಯ್ಡು ಸಂಬಂಧಿ ರೋಗವಿದ್ದಲ್ಲಿ ಸೂಕ್ತ ಚಿಕಿತ್ಸೆಯಲ್ಲಿ ನಿರಂತರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಎಲುಬಿನ ಸಾಂದ್ರತೆಯನ್ನು ಕಾಯ್ದುಕೊಳ್ಳುವ ರಸದೂತಗಳ ಸ್ರವಿಸುವಿಕೆ ಮತ್ತು ನಿಯಂತ್ರಣ ಅತೀ ಅಗತ್ಯ.
6. ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ, ನಿರಂತರ ವ್ಯಾಯಾಮ ಮಾಡಬೇಕು. ಸಮತೋಲಿತ ಆಹಾರ ಸೇವಿಸಬೇಕು. ಕ್ಯಾಲ್ಸಿಯಂ ಯುಕ್ತ ಆಹಾರಗಳನ್ನು ನಿಯಮಿತವಾಗಿ ಸೇವಿಸತಕ್ಕದ್ದು. ರಾಗಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸಬೇಕು.
7. ದಿನದ 24 ಗಂಟೆಯೂ ಮನೆಯೊಳಗೆ ಇರಬಾರದು. ವಾತಾವರಣದ ಬದಲಾವಣೆಗಳನ್ನು ಗಮನಿಸುತ್ತಾ ಪ್ರತಿದಿನ ಕನಿಷ್ಠ ಪಕ್ಷ ಅರ್ಧ ಗಂಟೆಗಳ ಕಾಲ ತಿಳಿಬಿಸಿಲಿಗೆ ಮೈಯೊಟ್ಟುವುದು ಸೂಕ್ತ. ಬೆಳೆಯುವ ಮಕ್ಕಳಲ್ಲಿ ಇದರ ಅಗತ್ಯ ತುಂಬಾ ಇರುತ್ತದೆ. ಈ ರೀತಿ ಮಾಡುವುದರಿಂದ ನೈಸರ್ಗಿಕವಾಗಿ ಸೂರ್ಯನ ಬಿಸಿಲಿನಿಂದ ವಿಟಮಿನ್ ‘ಡಿ’ ದೇಹದಲ್ಲಿ ಉತ್ಪತ್ತಿಯಾಗಿ, ಪರೋಕ್ಷವಾಗಿ ಕ್ಯಾಲ್ಸಿಯಂ ಉತ್ಪಾದನೆ ಮತ್ತು ಹೀರÀುವಿಕೆಗೆ ಸಹಾಯ ಮಾಡಿ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾಗದಂತೆ ಮಾಡಿ ಎಲುಬಿನ ಸಾಂದ್ರತೆಯನ್ನು ಹತೋಟಿಯಲ್ಲಿಡುತ್ತದೆ.
ಪತ್ತೆ ಹಚ್ಚುವುದು ಹೇಗೆ? :-
“ಬೋನ್ ಡೆನ್ಸಿಟೋಮೆಟ್ರಿ” ಅಥವಾ “ಎಲುಬಿನ ಖನಿಜ ಸಾಂದ್ರತೆ ಪರೀಕ್ಷೆ” ಎಂಬ ಪರೀಕ್ಷೆಯ ಮುಖಾಂತರ ಎಲುಬಿನ ಖನಿಜದ ಸಾಂದ್ರತೆಯನ್ನು ತಿಳಿಯಲಾಗುತ್ತದೆ. ಇದು ಕ್ಷ ಕಿರಣದ ಹಾಗೆಯೇ ಇರುವ ಇನ್ನೊಂದು ಪರೀಕ್ಷೆಯಾಗಿದ್ದು ಎಲುಬಿನ ಖನಿಜದ ಸಾಂದ್ರತೆಯನ್ನು ನಿಖರವಾಗಿ ತಿಳಿಯಬಹುದು. ಕೇವಲ 24 ಗಂಟೆಗಳಲ್ಲಿ ಈ ಪರೀಕ್ಷೆಯನ್ನು ಮಾಡಿ ವ್ಯಕ್ತಿಯ ಅಸ್ಥಿರಂದ್ರತೆಯ ರೋಗದಿಂದ ಬಳಲುತ್ತಿದ್ದಾನೆಯೇ ಎಂದು ತಿಳಿಯಲಾಗುತ್ತದೆ ಮತ್ತು ಯಾವ ವ್ಯಕ್ತಿಗೆ ಮೂಳೆ ಮುರಿತವಾಗುವ ಸಾಧ್ಯತೆ ಹೆಚ್ಚು ಇದೆ ಎಂಬುದನ್ನು ತಿಳಿಯಲಾಗುತ್ತದೆ. ಸಾಮಾನ್ಯವಾಗಿ ಈ ಮಾಪನವನ್ನು ಟಿ – ಸ್ಕೋರ್ ಎನ್ನುತ್ತಾರೆ (ಖಿ – Sಛಿoಡಿe). ನಿಮ್ಮ ಟಿ – ಸ್ಕೋರ್ -2.5 ಅಥವಾ ಇನ್ನೂ ಕಡಮೆ ಇದ್ದಲ್ಲಿ ನೀವು ಅಸ್ಥಿರಂದ್ರತೆಯಿಂದ ಬಳಲುತ್ತಿದ್ದೀರಿ ಎಂದರ್ಥ. ಋಣತ್ಮಾಕ ಸಂಖ್ಯೆ ಜಾಸ್ತಿಯಾದಷ್ಟು ನಿಮ್ಮ ಅಸ್ಥಿರಂದ್ರತೆ ಜಾಸ್ತಿ ಎಂದರ್ಥ. ನಿಮ್ಮ ಟಿ – ಸ್ಕೋರ್ -1 ರಿಂದ ಮೇಲಿದ್ದಲ್ಲಿ ನೀವು ಅಸ್ಥಿರಂದ್ರತೆಯಿಂದ ಬಳಲುತ್ತಿಲ್ಲ ಎಂದರ್ಥ. ನಿಮ್ಮ ಟಿ – ಸ್ಕೋರ್ 1ರಿಂದ -2.5ರ ಒಳಗೆ ಇದ್ದಲ್ಲಿ ನೀವು ಪ್ರಾರಂಭಿಕ ಹಂತದ ಅಸ್ಥಿರಂದ್ರತೆ ರೋಗದಲ್ಲಿದ್ದೀರಿ ಎಂದರ್ಥ. ಸಾಮಾನ್ಯವಾಗಿ 50 ವಯಸ್ಸು ಕಳೆದ ಬಳಿಕ ಈ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಂಡು (ವರ್ಷದಲ್ಲಿ ಒಮ್ಮೆಯಾದರೂ) ಎಲುಬಿನ ಸಾಂದ್ರತೆಯನ್ನು ತಿಳಿದುಕೊಂಡು ಸೂಕ್ತ ಮುಂಜಾಗರೂಕತೆ ವಹಿಸಿದ್ದಲ್ಲಿ ಮೂಳೆ ಮುರಿತವನ್ನು ತಪ್ಪಿಸಿ ಅದರಿಂದ ಉಂಟಾಗುವ ನೋವು, ಯಾತನೆ ಮತ್ತು ವೆಚ್ಚವನ್ನು ಕಡಿಮೆ ಮಾಡಬಹುದು. ಈ ಪರೀಕ್ಷೆ ಮಾಡುವ 24 ಗಂಟೆಗಳ ಮೊದಲು ಯಾವುದೇ ಕ್ಯಾಲ್ಸಿಯಂ ಇರುವ ಮಾತ್ರೆಗಳನ್ನು ಮತ್ತು ಕ್ಯಾಲ್ಸಿಯಂ ಗುಳಿಗೆಗಳನ್ನು ತೆಗೆದುಕೊಳ್ಳಬಾರದು. ಅದೇ ರೀತಿ ಗರ್ಭಿಣಿ ಹೆಂಗಸರಲ್ಲಿ ಸಾಮಾನ್ಯವಾಗಿ ಈ ಪರೀಕ್ಷೆಯನ್ನು ಮಾಡುವುದಿಲ್ಲ. ಈ ಪರೀಕ್ಷೆ ಮಾಡುವ ಮೊದಲು ನಿಮ್ಮ ಯಾವುದೇ ದೈನಂದಿನ ಚಟುವಟಿಕೆಗಳನ್ನು ಬದಲಾಯಿಸಬೇಕಿಲ್ಲ. ಅದೇ ರೀತಿ ಪರೀಕ್ಷೆಯ ಬಳಿಕ ನಿಮ್ಮ ದಿನನಿತ್ಯದ ಚಟುಚಟಿಕೆಗಳನ್ನು ಮಾಡಬಹುದು. 24 ಗಂಟೆಗಳ ಒಳಗೆ ನಿಮ್ಮ ಎಲುಬಿನ ಸಾಂದ್ರತೆಯನ್ನು ವೈದ್ಯರು ತಿಳಿಸುತ್ತಾರೆ ಮತ್ತು ಸೂಕ್ತ ಔಷಧಿಯನ್ನು ಅವರೇ ನೀಡುತ್ತಾರೆ.
ಏನಿದು ಡೆಕ್ಸಾ ಸ್ಕ್ಯಾನಿಂಗ್?
ಎಲುಬಿನ ಸಾಂದ್ರತೆಯನ್ನು ಪತ್ತೆ ಹಚ್ಚುವ ಪ್ರಕ್ರಿಯೆಗೆ ಡೆಕ್ಸಾ ಸ್ಕ್ಯಾನಿಂಗ್ ಎನ್ನುತ್ತಾರೆ. ಆಂಗ್ಲಭಾಷೆಯಲ್ಲಿ ಆಇಘಿಂ (ಆuಚಿಟ ಇಟಿeಡಿgಥಿ ಘಿ-ಡಿಚಿಥಿ ಂbsoಡಿಠಿಣimeಣಡಿಥಿ) ಸ್ಕ್ಯಾನಿಂಗ್ ಎಮದು ಕರೆಯುತ್ತಾರೆ. ಇದೊಂದು ಬಹಳ ಸುಲಭವಾದ ಮತ್ತು ನಿಖರವಾದ ಪರೀಕ್ಷೆಯಾಗಿದ್ದು, ಇದರ ಮುಖಾಂತರ ಎಲುಬಿನ ಸಾಂದ್ರತೆಯನ್ನು ಪತ್ತೆ ಹಚ್ಚುತ್ತಾರೆ. ಕೇವಲ 10ರಿಂದ 15 ನಿಮಿಷಗಳಲ್ಲಿ ಈ ಪರೀಕ್ಷೆ ಮುಗಿದು ಹೋಗುತ್ತದೆ. ನೋವಿಲ್ಲದ ಪರೀಕ್ಷೆ ಇದಾಗಿದ್ದು ಕ್ಷ-ಕಿರಣಕ್ಕೆ ಬಳಸುವ ರೇಡಿಯೇಷನ್ ಡೋಸ್ ಕೂಡಾ ಬಹಳ ಕನಿಷ್ಠ ಪ್ರಮಾಣದಲ್ಲಿರುತ್ತದೆ. ಯಾವ ವ್ಯಕ್ತಿ ಮೂಳೆ ಮುರಿತಕ್ಕೆ ತುತ್ತಾಗುವ ಸಾಧ್ಯತೆ ಇದೆ, ಎಂಬುದನ್ನು ಬಹಳ ನಿಖರವಾಗಿ ಪತ್ತೆ ಹಚ್ಚಲಾಗುತ್ತದೆ.
ಯಾರು ಈ ಪರೀಕ್ಷೆ ಮಾಡಿಸಬೇಕು?
1. ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ 35ರ ವಯಸ್ಸಿನಲ್ಲಿ ಒಮ್ಮೆ ಡೆಕ್ಸಾ ಸ್ಕ್ಯಾನಿಂಗ್ ಮಾಡಿಸಬೇಕು. ಆ ಮೂಲಕ ಎಲುಬಿನ ಸಾಂದ್ರತೆ ತಿಳಿದಲ್ಲಿ, ಮುಂದೆ ಉಂಟಾಗುವ ಮೂಳೆ ಸವೆತದ ಪ್ರಮಾಣವನ್ನು ಈ ಸ್ಕ್ಯಾನ್‍ಗೆ ಹೋಲಿಸಿ ತಾಳೆ ಹಾಕಲು ಅನುಕೂಲವಾಗುತ್ತದೆ.
2. ಮಹಿಳೆಯರು ಋುತುಬಂಧದ ಬಳಿಕ, 50 ವರ್ಷದ ಬಳಿಕ ಪ್ರತಿ 2 ವರ್ಷದಲ್ಲಿ ಒಮ್ಮೆ ಈ ಸ್ಕ್ಯಾನ್ ಮಾಡಿಸುವುದು ಉತ್ತಮ.
3. ಅತಿಯಾದ ಮದ್ಯಪಾನಿಗಳು ಮತ್ತು ಧೂಮಪಾನಿಗಳು 50 ವರ್ಷವಾದ ಬಳಿಕ ಕಡ್ಡಾಯವಾಗಿ ಮಾಡಿಸಬೇಕು.
4. ಕುಟುಂಬದಲ್ಲಿ ತಂದೆ ತಾಯಂದಿರು ಟೊಳ್ಳು ಮೂಳೆ ರೋಗದಿಂದ ಬಳಲಿದ್ದಲ್ಲಿ, ಮಕ್ಕಳಿಗೂ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ 50 ವಯಸ್ಸಿನ ಬಳಿಕ ಎಲ್ಲರೂ ಮಾಡಿಸಬಹುದು.
5. ಅತಿಯಾದ ಸ್ಥಿರಾಯ್ಡು ಸೇವನೆ, ದೀರ್ಘಾಕಾಲಿಕ ನೋವು ನಿವಾರಕ ಔಷಧಿ ಸೇವನೆ ಸ್ಥಿರಾಯ್ಡು ಸೇವನೆ ಮತ್ತು ಗರ್ಭ ನಿರೋಧಕ ಔಷಧಿ ಬಳಸುವವರು ಕಡ್ಡಾಯವಾಗಿ ಈ ಡೆಕ್ಸಾ ಸ್ಕ್ಯಾನ್ ಮಾಡಿಸಬೇಕು.
6. ಮಹಿಳೆಯರಲ್ಲಿ 45ರ ಮೊದಲು ಋುತುಬಂಧವಾಗಿದ್ದಲ್ಲಿ ಮತ್ತು 45 ವರ್ಷದ ಮೊದಲು ಗರ್ಭಕೋಶ ತೆಗೆಸಿಕೊಂಡಿದ್ದಲ್ಲಿ ಡೆಕ್ಸಾ ಸ್ಕ್ಯಾನ್ ಮಾಡಿಸಬೇಕು. ಇಂತಹಾ ಮಹಿಳೆಯರಲ್ಲಿ ರಸದೂತಗಳ ವೈಫರೀತ್ಯ ಅತಿಯಾಗಿರುತ್ತದೆ.
ಹೇಗೆ ಮಾಡುತ್ತಾರೆ :
ರೋಗಿಯ ಎತ್ತರ, ತೂಕ ಮತ್ತು ವಯಸ್ಸನ್ನು ಗುರುತಿಸಿಗೊಂಡು ವ್ಯಕ್ತಿಯ ಸ್ಕಾನ್ ಮಾಡಲಾಗುತ್ತದೆ. ಈ ಇತರ ಅಖಿ ಸ್ಕ್ಯಾನ್‍ಗಳಂತೆ ಈ ಸ್ಕ್ಯಾನ್ ಮಾಡುವಾಗ ದೇಹದ ಬಟ್ಟೆ ತೆಗೆಯುದಿಲ್ಲ. ಕುತ್ತಿಗೆ ಮತ್ತು ಬೆನ್ನಿನ ಭಾಗದ ಎಲುಬು ಹಾಗೂ ಸೊಂಟದ ಎಲುಬಿನ ಸಾಂದ್ರತೆಯನ್ನು ನಿಖರವಾಗಿ ಅಳೆಯುತ್ತದೆ. ಗರ್ಭಿಣಿಯರಲ್ಲಿ ಈ ಡೆಕ್ಸಾ ಸ್ಕ್ಯಾನ್ ಮಾಡುವುದಿಲ್ಲ. ಅದೇ ರೀತಿ ಹಿಂದೆ ಎಲುಬಿನ ಮುರಿತವಾಗಿ ಎಲುಬಿನಲ್ಲಿ ಲೋಹದ ಸ್ಕ್ರೂ ಮತ್ತು ಪ್ಲೇಟ್ ಇದ್ದಲ್ಲಿ ಈ ಸ್ಕ್ಯಾನ್ ಫಲಿತಾಂಶ ಸರಿಯಾಗಿ ಬರುವುದಿಲ್ಲ. ಎಲುಬಿನ ಸಾಂದ್ರತೆಯನ್ನು ಖಿ-ಸ್ಟೋರ್‍ನಲ್ಲಿ ಮಾಪನ ಮಾಡುತ್ತಾರೆ. ಮೈನಸ್ ಒಂದಕ್ಕಿಂತ ಜಾಸ್ತಿ ಇದ್ದಲ್ಲಿ ಉತ್ತಮ. ಎಲುಬಿನ ಸಾಂದ್ರತೆ ಮೈನಸ್ ಒಂದರಿಂದ ಮೈನಸ್ 2.5 ಇದ್ದಲ್ಲಿ ಎಲುಬಿನ ಸಾಂದ್ರತೆ ಕಡಮೆ ಎಂದು ತೀರ್ಮಾನಿಸುತ್ತಾರೆ. ಮೈನಸ್ 2.5ಕ್ಕಿಂತಲೂ ಕಡಮೆ ನಿಮ್ಮ ಖಿ ಸ್ಟೋರ್ ಇದ್ದಲ್ಲಿ ನೀವು ಮೂಳೆರಂದ್ರತೆ ರೋಗದಿಂದ ಬಳುತ್ತಿದ್ದೀರಿ ಎಂದು ತಿರ್ಮಾನಿಸಲಾಗುತ್ತದೆ.
ಕೊನೆ ಮಾತು :-
ಅಸ್ಥಿರಂದ್ರತೆ ಎಂಬುದು ಒಂದು ದೇಹದ ಸ್ಥಿತಿಯಾಗಿದ್ದು, ಹಲವಾರು ಕಾರಣಗಳಿಂದ ಉಂಟಾಗಬಹುದು. ಸಾಮಾನ್ಯವಾಗಿ ವೃದ್ಯಾಪ್ಯರಲ್ಲಿ ಕಾಣಿಸಿಕೊಳ್ಳುವ ಈ ದೇಹಸ್ಥಿತಿ, ದೇಹದ ಎಲುಬಿನ ಕ್ಯಾಲ್ಸಿಯಂ ವ್ಯತ್ಯಾಸದಿಂದಾಗಿ ಉಂಟಾಗುತ್ತದೆ. ಮೌನರೋಗ, ಟೊಳ್ಳು ಮೂಳೆ ರೋಗ, ಅಸ್ಥಿಕ್ಷಯ, ಮೂಳೆಕ್ಷಯ, ಅಸ್ಥಿರಂದ್ರತೆ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ದೇಹ ಸ್ಥಿತಿಯನ್ನು ಖಂಡಿತವಾಗಿವೂ ತಡೆಗಟ್ಟಬಹುದು. ನಿರಂತರವಾದ ನಿಯಮಿತವಾದ ವ್ಯಾಯಾಮ, ಸಮತೋಲಿತ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ, ಅರೋಗ್ಯ ಪೂರ್ಣ ಜೀವನಶೈಲಿ, ಧೂಮಪಾನ ಮತ್ತು ಆಲ್ಕೋಹಾಲ್ ವರ್ಜನೆ ಮುಂತಾದವುಗಳ ಮೂಲಕ ದೇಹದ ಎಲುಬಿನ ಕ್ಯಾಲ್ಸಿಯಂ ಪ್ರಮಾಣ ಮತ್ತು ಎಲುಬಿನ ಸಾಂದ್ರತೆಯನ್ನು ಖಂಡಿತವಾಗಿಯೂ ಹತೋಟಿಯಲ್ಲಿಟ್ಟುಕೊಂಡು ಈ ಅಸ್ಥಿರಂದ್ರತೆಯನ್ನು ತಡೆಯಲು ಸಾಧ್ಯವಿದೆ. ವೃದ್ಯಾಪ್ಯದಲ್ಲಿ 50 – 60ರ ಹರೆಯದಲ್ಲಿ ಮಹಿಳೆಯರಲ್ಲಿ ಇಸ್ಟ್ರೋಜೆನ್ ಮತ್ತು ಪುರುಷರಲ್ಲಿ ಆಂಡ್ರೋಜೆನ್ ರಸದೂತಗಳ ಸ್ರವಿಸುವಿಕೆ ಕಡಿಮೆಯಾಗಿ, ಮೂಳೆಯಲ್ಲಿನ ಕ್ಯಾಲ್ಸಿಯಂ ಮತ್ತು ಇತರ ಖನಿಜಂಶಾಗಳ ಸಾಂದ್ರತೆಯಲ್ಲಿ ಏರುಪೇರು ಉಂಟಾಗಿ ಅಸ್ಥಿರಂದ್ರತೆಗೆ ಪರೋಕ್ಷವಾಗಿ ಕಾರಣವಾಗುತ್ತದೆ. ಅದೇನೇ ಇರಲಿ “ಅಸ್ಥಿರಂದ್ರತೆ” ಎನ್ನುವುದು ಖಂಡಿತವಾಗಿಯೂ ವೃದ್ಯಾಪ್ಯದ ಶಾಪವಂತೂ ಅಲ್ಲ. ಆರೋಗ್ಯ ಪೂರ್ಣ ಆಹಾರ ಪದ್ಧತಿ, ಜೀವನಶೈಲಿ ಹಾಗೂ ನಿರಂತರವಾದ ವೈದ್ಯಕೀಯ ಮಾರ್ಗದರ್ಶನದಿಂದ ನಿಸ್ಸಂದೇಹವಾಗಿಯೂ ಈ ಅಸ್ಥಿರಂದ್ರತೆಯನ್ನು ತಡೆಗಟ್ಟಬಹುದು ಮತ್ತು ಅದರಲ್ಲಿಯೇ ನಮ್ಮೆಲ್ಲರ ಮತ್ತು ಸಮಾಜದ ಹಿತ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787