ಕಡಬ, ಅ.11. ನೆಟ್ಟಣದ ಕಿದು ಅಂತರ್ರಾಷ್ಟ್ರೀಯ ಕೇಂದ್ರಿಯ ತೋಟಗಳ ಸಂಶೋಧನಾ ಕೇಂದ್ರದಲ್ಲಿ ಅಕ್ಟೋಬರ್ 12 ಮತ್ತು 13 ರಂದು ಎರಡು ದಿನಗಳ ಕೃಷಿ ಮೇಳ ಮತ್ತು ಕೃಷಿ ಬೆಳೆಗಳ ವಸ್ತು ಪ್ರದರ್ಶನ ಹಾಗೂ ರೈತರಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ.
ದೇಶದ ವಿವಿಧೆಡೆಯಿಂದ ಸಂಶೋಧಕರು, ಕೃಷಿ ತಂತ್ರಜ್ಞರು ಆಗಮಿಸಲಿದ್ದು ಸುಮಾರು 2 ರಿಂದ 3 ಸಾವಿರ ರೈತರು ಭಾಗವಹಿಸಲಿದ್ದಾರೆ. ಒಟ್ಟು ಎರಡು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, ವಸ್ತು ಪ್ರದರ್ಶನ, ವಿಚಾರ ಸಂಕಿರಣ, ತಜ್ಞರೊಂದಿಗೆ ವಿಚಾರ ವಿನಿಮಯ, ಕ್ಷೇತ್ರ ಪ್ರಾತ್ಯಕ್ಷಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 100ಕ್ಕೂ ಅಧಿಕ ಕೃಷಿ ಸಂಬಂಧಿತ ಮಳಿಗೆಗಳು ಇರಲಿವೆ ಎಂದು ಸಿಪಿಸಿಆರ್‍ಐನ ನಿರ್ದೇಶಕಿ ಡಾ.ಅನಿತಾ ಕರುಣ್ ತಿಳಿಸಿದ್ದಾರೆ.
ಅ.13 ರಂದು ತರಬೇತಿ ಕಾರ್ಯಾಗಾರ ನಡೆಯಲಿದ್ದು, ಕೃಷಿಗೆ ಸಂಬಂಧಿಸಿದ ನೂತನ ಆವಿಷ್ಕಾರಗಳು, ತಂತ್ರಜ್ಞಾನ ಮತ್ತು ವಿನೂತನ ಸಂಶೋಧನೆಗಳ ಜಾಗೃತಿ, ಮಳೆ ಕೊಯ್ಲು ತಂತ್ರಜ್ಞಾನ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಮಣ್ಣಿನ ಫಲವತ್ತತೆ ವೃದ್ಧಿ, ಬೆಳೆಗಳ ವೃದ್ಧಿ, ತಾಂತ್ರಿಕ ರೀತಿಯಲ್ಲಿ ಬೆಳೆಗಳ ಬೆಳೆಯುವಿಕೆ, ಜೇನು ಸಂರಕ್ಷಣೆ ಕುರಿತು ಕೃಷಿ ವಿಜ್ಞಾನಿಗಳಿಂದ ರೈತರಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.