ಕಡಬ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ನೇತೃತ್ವದಲ್ಲಿ ಪದವಿ ಪೂರ್ವ ಕಾಲೇಜು, ಕನ್ನಡ ಮಾಧ್ಯಮ ವಿಭಾಗ ಸಹಕಾರದೊಂದಿಗೆ ಸುಳ್ಯ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ , ಕೆ.ವಿ.ಜಿ. ದಂತ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಭಾನುವಾರ ವೈದ್ಯಕೀಯ ಉಚಿತ ಶಿಬಿರ ಕಾಲೇಜಿನಲ್ಲಿ ನಡೆಯಿತು.
ಆಲಂಕಾರು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಈಶ್ವರ ಗೌಡ ಪಜ್ಜಡ್ಕ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಆಹಾರ, ಜೀವನ ಪದ್ದತಿಯ ಬದಲಾವಣೆಯಿಂದ ಹಲವು ರೋಗಗಳನ್ನು ನಾವಾಗಿಯೇ ಭರಿಸಿಕೊಳ್ಳುತ್ತೇವೆ. ನಮ್ಮ ಪೂರ್ವಜರ ಆಹಾರ ಪದ್ದತಿಯನ್ನು ನಾವೆಲ್ಲ ಅನುಕರಿಸುವ ಅನಿವಾರ್ಯತೆಯಿದೆ. ಹಲವು ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ವ್ಯವಸ್ಥೆ ಇದ್ದರೂ ಬಿಡುವಿಲ್ಲದ ಜೀವನ ಪದ್ದತಿಯಲ್ಲಿರುವ ಮನುಷ್ಯನಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೆ ಕಷ್ಟವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಅಯೋಜಿಸಿರುವ ಶಿಬಿರದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನ ಮನಸ್ಸು, ಆರೋಗ್ಯ ಸಮತೋಲದಲ್ಲಿದ್ದರೆ ಪರಿಪೂರ್ಣ ಜೀವನವಾಗುತ್ತದೆ. ವೈದ್ಯಕೀಯ ಶಿಬಿರವೆಂದು ಅಲ್ಲಗಲೆಯುವ ಬದಲು ಉಪಯೋಗಿಸಿಕೊಂಡಾಗ ಮಾತ್ರ ಅದರ ಪ್ರಯೋಜನ ಪಡೆಯಬಹುದು ಎಂದರು.
ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮುಖ್ಯಸ್ಥೆ ಡಾ.ಗೀತಾ ಡೊಪ್ಪ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಉಪನ್ಯಾಸಕಿ ಡಾ.ಜೆಸಿಲ್ಲಾ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕಟ್ಟಪುಣಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಕೇಶವ ರಾಮಕುಂಜ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ರಘುರಾಮ್ ಭಟ್ ವಂದಿಸಿದರು. ಕಾರ್ಯದರ್ಶಿ ಸತೀಶ್ ಜಿ ಆರ್ ನಿರೂಪಿಸಿದರು. ಶಿಬಿರದಲ್ಲಿ ಜನರಲ್ ಮೆಡಿಸಿನ್, ಮಕ್ಕಳ ರೋಗ , ಕಿವಿ, ಮೂಗು, ಗಂಟಲು , ನೇತ್ರಚಿಕಿತ್ಸೆ , ಚರ್ಮ ಮತ್ತು ಲೈಂಗಿಕ ರೋಗ , ಸ್ತ್ರೀ ರೋಗ , ಮೂಳೆ , ದಂತ , ಆಪ್ತ ಸಮಲೋಚನೆ ಮೊದಲಾದ ವಿಭಾಗದ ತಜ್ಞ ವೈದ್ಯರಿಂದ ವೈದ್ಯಕೀಯ ಉಚಿತ ತಪಾಸಣೆ ಮತ್ತು ಸಲಹೆ ನೀಡಲಾಯಿತು. ಹೆಚ್ಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿದ್ದವರಿಗೆ ಚಿಕಿತ್ಸೆಗೆ ಕೆ.ವಿ.ಜಿ.ಆಸ್ಪತ್ರೆಯ ಮುಂದುವರಿಕಾ ಕಾರ್ಡುಗಳನ್ನು ನೀಡಲಾಯಿತು.