ಕಡಬ, ಜೂ.27. ಇಲ್ಲಿನ ಕೋಡಿಂಬಾಳ ಗ್ರಾಮದ ಕುಕ್ಕರೆಬೆಟ್ಟು ಪ್ರದೇಶದ ಎಲ್ಲಾ ಮನೆಗಳಿಗೆ ತೆರಳಿ ಪರಿಸರದಲ್ಲಿ ಸ್ವಚ್ಚತೆ ಜಾಗೃತಿ ಮೂಡಿಸಲಾಗುತ್ತಿದೆ. ಫಾಗಿಂಗ್ ಕಾರ್ಯ ಆರಂಭಿಸಲಾಗಿದೆ. ಜ್ವರ ನಿಯಂತ್ರಣವಾಗುವ ವರೆಗೆ ಫಾಗಿಂಗ್ ಮುಂದುವರಿಸಲಾಗುವುದು ಎಂದು ಆರೋಗ್ಯ ಇಲಾಖಾ ಸರ್ವೇಕ್ಷಣಾ ಪ್ರಭಾರ ಅಧಿಕಾರಿ ಡಾ. ನವೀನ್ ಚಂದ್ರ ಹೇಳಿದರು.
ಅವರು ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ನಿವಾಸಿ ಆನಂದ ನಾೈಕ್ ಎಂಬವರ ಪತ್ನಿ ವೀಣಾ ಅವರ ಮನೆಗೆ ಆರೋಗ್ಯ ಇಲಾಖಾ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮದ ಕಕ್ಕೆತ್ತಿಮಾರ್ ಪ್ರದೇಶದಲ್ಲಿರುವ ಕಡಬ ಗ್ರಾಮ ಪಂಚಾಯಿತಿ ವತಿಯಿಂದ ನಿರ್ವಹಿಸಲ್ಪಡುವ ಘನತಾಜ್ಯ ವಿಲೇವಾರಿ ಘಟಕಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮಡ್ಯಡ್ಕ ಸರಕಾರಿ ಶಾಲೆಯಲ್ಲಿ ತಾತ್ಕಾಲಿಕ ಜ್ವರ ಸರ್ವೇಕ್ಷಣಾ ಕೇಂದ್ರವನ್ನು ತೆರೆಯಲಾಗಿದ್ದು, ಇಲ್ಲಿಗೆ ಪುತ್ತೂರಿನಿಂದ ಓರ್ವ ವೈದ್ಯೆ ಹಾಗೂ ಸುಶ್ರೂಷಕಿಯನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಆರೋಗ್ಯ ಇಲಾಖೆಯ ಎಪಿಡೋಮೋಲೋಜಿಸ್ಟ್ ಡಾ.ಶಿಲ್ಪಾ, ಜಿಲ್ಲಾ ರೋಗಗಳ ವಾಹಕ ನಿಯಂತ್ರಾಧಿಕಾರಿ ಡಾ.ಅರುಣ್ ಕುಮಾರ್, ತಾಲೂಕು ಆರೋಗ್ಯಧಿಕಾರಿ ಡಾ.ಆಶೋಕ್, ಪುತ್ತೂರು ತಾಲೂಕು ಆರೋಗ್ಯ ನಿರೀಕ್ಷಕ ರವಿಚಂದ್ರ, ತಾಲೂಕು ಪಂಚಾಯತ್ ಸದಸ್ಯ ಫಝಲ್ ಕೋಡಿಂಬಾಳ, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ಸದಸ್ಯ ನಾರಾಯಣ ಪೂಜಾರಿ, ಸಾಮಾಜಿಕ ಕಾರ್ಯಕರ್ತ ರಘುನಾಥ ಕೊಠಾರಿ ಮೊದಲಾದವರು ಉಪಸ್ಥಿತರಿದ್ದರು.