ಕಡಬ: ಅಕ್ರಮ ಮರಳುಗಾರಿಕೆಯ ವರದಿಗೆ ತೆರಳಿದ್ದ ಟಿವಿ ವರದಿಗಾರನಿಗೆ ಹಲ್ಲೆ ➤ ಕಡಬ ತಾಲೂಕು ಪತ್ರಕರ್ತರ ಸಂಘ ಖಂಡನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.04. ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕೋರಿಯಾರ್ ಎಂಬಲ್ಲಿ ಅಕ್ರಮ ಮರಳುಗಾರಿಕೆಯ ವರದಿಗೆ ತೆರಳಿದ್ದ ಖಾಸಗಿ ಸುದ್ದಿವಾಹಿನಿಯ ವರದಿಗಾರರೊಬ್ಬರಿಗೆ ಮರಳು ದಂಧೆಯಲ್ಲಿ ತೊಡಸಿಕೊಂಡಿದ್ದ ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದ್ದು ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಹಳೆ ನ್ಯೂಸ್ ಚಾನೆಲ್ ಕಡಬ ವರದಿಗಾರ ಗಣೇಶ್ ಇಡಾಳ(24) ಎಂಬವರಿಗೆ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಐತ್ತೂರು ಗ್ರಾಮದ ಕೇನ್ಯ ನಿವಾಸಿ ಗಣೇಶ್ ಮತ್ತು 102 ನೇ ನೆಕ್ಕಿಲಾಡಿ ಗ್ರಾಮದ ಮಾಯಿಪಾಜೆ ನಿವಾಸಿ ಅಜಯ್ ಹಾಗೂ ಎಂಟು ಜನರ ತಂಡ ಹಲ್ಲೆ ನಡೆಸಿದೆ. ಬಳ್ಪ ಗ್ರಾಮದ ಕೇನ್ಯ ಎಂಬಲ್ಲಿ ಸುಬ್ರಹ್ಮಣ್ಯದ ರಸ್ತೆ ಕಾಮಗಾರಿಗಾಗಿ ಮರಳುಗಾರಿಕೆಗೆ ಅನುಮತಿ ಪಡೆದು ಕುಮಾರಧಾರ ನದಿಯಿಂದ ಮರಳು ತೆಗೆದು ಬೇರೆಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎನ್ನುವ ಮಾಹಿತಿ ಆಧಾರದಲ್ಲಿ ಗಣೇಶ್ ಇಡಾಳ ತಮ್ಮ ಸಂಸ್ಥೆಯ ಒಮ್ನಿ ಕಾರಿನಲ್ಲಿ ಚಾಲಕ ಶರತ್ ರೊಂದಿಗೆ ವರದಿಗೆ ತೆರಳಿದ್ದರು. ನದಿಯ ಈ ಭಾಗದ ಕೋರಿಯಾರ್ ಮೂಲಕ ಅಕ್ರವಾಗಿ ಮರಳು ಸಾಗಾಟ ಮಾಡುವಾಗ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಗಣೇಶ್, ಅಜಯ್ ಹಾಗೂ ಅವರ ತಂಡ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಹಲ್ಲೆ ಸಂದರ್ಭದಲ್ಲಿ ಕಾರು ಚಾಲಕ ಶರತ್ ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದು, ಗಣೇಶ್‍ಗೆ ಹಲ್ಲೆ ನಡೆಸಿ ಅವರ ಕೈಯಲ್ಲಿದ್ದ ಸಂಸ್ಥೆಗೆ ಸೇರಿದ ಕ್ಯಾಮರವನ್ನು ಹಾಗೂ ಮೊಬೈಲ್‍ನ್ನು ಪುಡಿಗೈದಿದ್ದಾರೆ. ಮಾತ್ರವಲ್ಲ ಅವರಲ್ಲಿದ್ದ ಬೆಲೆಬಾಳುವ ಚಿನ್ನದ ಚೈನ್‍ನ್ನು ಕಿತ್ತುಕೊಂಡು ಹೋಗಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಣೇಶ್ ಆರೋಪಿಸಿದ್ದಾರೆ. ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ತಂಬಾಕು ಉತ್ಪನ್ನ ಮಾರಾಟ: ಪರವಾನಿಗೆ ಕಡ್ಡಾಯ

ಖಂಡನೆ: ಹಲ್ಲೆಯ ಘಟನೆಯನ್ನು ಕಡಬ ತಾಲೂಕು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ. ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊೈಲ ಹಾಗೂ ಕಾರ್ಯದರ್ಶಿ ನಾಗರಾಜ್ ಎನ್.ಕೆ. ಪ್ರಕಟಣೆ ನೀಡಿ ಇದೊಂದು ಹೇಯ ಕೃತ್ಯ, ಇದರಿಂದ ಪತ್ರಕರ್ತರಿಗೆ ಇಲ್ಲಿ ನಿರ್ಭೀತಿಯಿಂದ ವರದಿ ಮಾಡಲು ಸಾಧ್ಯವಿಲ್ಲದಂತಾಗಿದೆ. ಅಕ್ರಮವಾಗಿ ಮರಳು ದಂಧೆ ನಡೆಸುವುದಲ್ಲದೆ, ವರದಿ ಮಾಡಲು ತೆರಳಿರುವ ಪರ್ತಕರ್ತರ ಮೇಲೆ ದ್ವೇಷ ಸಾಧಿಸುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ, ಹೀಗೆ ಮುಂದುವರಿದರೆ ಪತ್ರಕರ್ತರಿಗೆ ಈ ಜಿಲ್ಲೆಯಲ್ಲಿ ರಕ್ಷಣೆಯೇ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಕೋರಿಯಾರ್ ಘಟನೆಯಲ್ಲಿ ನಮ್ಮ ಸಂಘದ ಸದಸ್ಯ ಗಣೇಶ್ ಅವರಿಗೆ ಹಲ್ಲೆ ನಡೆಸಿರುವುದನ್ನು ಸಂಘ ಸಹಿಸಲು ಸಾಧ್ಯವಿಲ್ಲ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಲ್ಲೆಕೋರರನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಅಗ್ರಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಘಟನೆಯ ಬಗ್ಗೆ ಸೂಕ್ತ ಕ್ರಮಕ್ಕೆ ಪೋಲೀಸ್ ಇಲಾಖೆಗೆ ಸೂಚಿಸಿರುವುದು ಸ್ವಾಗತಾರ್ಹ, ಆದರೆ ಜಿಲ್ಲೆಯಲ್ಲಿ ಸರಿಯಾದ ಮರುಳು ನೀತಿ ಜಾರಿಯಾಗದೆ ಅಕ್ರಮ ಮರಳುಗಾರಿಕೆಯಿಂದಾಗಿ ಇಷ್ಟೆಲ್ಲಾ ರಾದ್ದಾಂತಗಳು ನಡೆಯುತ್ತಿವೆ. ಸಚಿವರು ಈ ಬಗ್ಗೆ ಗಮನ ಹರಿಸಬೇಕೆಂದು ಕಡಬ ತಾಲೂಕು ಪತ್ರಕರ್ತರ ಸಂಘ ಆಗ್ರಹಿಸಿದೆ.

Also Read  ಕುಕ್ಕರ್ ಪ್ರಕರಣ ➤ನಾಲ್ವರ ಗುರುತು ಪತ್ತೆ

error: Content is protected !!
Scroll to Top