ಕೊಯಿಲ ತ್ರಿವೇಣಿ ಸರ್ಕಲ್ ಬಳಿ ಪಂಚಾಯಿತಿಯಿಂದ ಕುಡಿಯುವ ನೀರಿನ ತೊಟ್ಟಿ ➤ ದಾಹ ನೀಗಿಸಿಕೊಳ್ಳುತ್ತಿರುವ ಪ್ರಾಣಿ – ಪಕ್ಷಿಗಳು

(ನ್ಯೂಸ್ ಕಡಬ) newskadaba­­.com ಕಡಬ, ಮೇ.12. ಈ ಬಾರಿ ಬೇಸಿಗೆಯ ಕಾವು  ಏರುತ್ತಿದ್ದಂತೆ  ನೀರಿನ ಹಾಹಾಕಾರ  ಹೆಚ್ಚಾಗುತ್ತಿದ್ದು ಮನುಷ್ಯನು ವಿವಿಧ ರೀತಿಯಲ್ಲಿ ತನ್ನ ದಾಹ ನೀಗಿಸಿಕೊಳ್ಳುತ್ತಿದ್ದರೆ ಪ್ರಾಣಿ ಪಕ್ಷಿಗಳ ಪಾಡು ಯಾರಿಗೂ ಕೇಳದಂತಿದೆ. ಇಂತಹ ಪರಿಸ್ಥಿತಿಯಲ್ಲಿ  ಕೊಯಿಲ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ತ್ರಿವೇಣಿ ಸರ್ಕಲ್ ಬಳಿ  ರಸ್ತೆ ಪಕ್ಕದಲ್ಲಿ ಕುಡಿಯುವ ನೀರಿನ ತೊಟ್ಟಿಯೊಂದನ್ನು ನಿರ್ಮಿಸಿದ ಪರಿಣಾಮ ಪ್ರಾಣಿ ಪಕ್ಷಿಗಳ ದಾಹ ನೀಗುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಉಪ್ಪಿನಂಗಡಿ – ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಟಿಸಿಲೊಡೆದ ಏಣಿತ್ತಡ್ಕ – ಕುದುಲೂರು ರಸ್ತೆಯ ತ್ರಿವೇಣಿ ಸರ್ಕಲ್ ಬಳಿ   ಕಳೆದ ಎರಡು ವರ್ಷಗಳ ಹಿಂದೆ ನಿರ್ಮಿಸಿದ ಈ ತೊಟ್ಟಿ ಈ ಬಾರಿ ಹೆಚ್ಚು ಉಪಯೋಗವಾಗುತ್ತಿದೆ.  ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಕ್ಕೆ ದಾಹ ಹೆಚ್ಚಾಗುತಿರುವುದರಿಂದ ಗುಡ್ಡಕ್ಕೆ ಮೇಯಲು ಬಿಟ್ಟ ಗೋವುಗಳು, ಗೇರು ತೋಪಿನಲ್ಲಿ ವಾಸಿಸುತ್ತಿರುವ ನವಿಲು  ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು,  ಕಾಡು ಪ್ರಾಣಿಗಳು ತೊಟ್ಟಿಯ  ಉಪಯೋಗ ಪಡೆಯುತ್ತಿದೆ.

ಪೋಲಾಗುತ್ತಿದ್ದ ನೀರು ಸಂಗ್ರಹ: ಪಂಚಾಯಿತಿ ವ್ಯಾಪ್ತಿಯ ಕುದುಲೂರು ಎಂಬಲ್ಲಿ ಕುಡಿಯುವ ನೀರಿನ ಟ್ಯಾಂಕಿನಿಂದ ಸಬಳೂರು ಮೊದಲಾದ ಭಾಗಕ್ಕೆ ಸರಬರಾಜು ಆಗುತ್ತಿದ್ದ ನೀರಿನ ಪೈಪಿನಲ್ಲಿ ಗಾಳಿ ಹೊರ ಹೋಗಲು ನಿರ್ಮಿಸಿದ ಸ್ಥಳದಲ್ಲಿ ಗಾಳಿಯೊಂದಿಗೆ ಅಲ್ಪ  ಪ್ರಮಾಣದ ನೀರು ಹೊರಬಂದು ಪಕ್ಕದ ಹೊಂಡದಲ್ಲಿ ಸಂಗ್ರಹವಾಗುತ್ತಿತ್ತು. ಇದನ್ನು ಪ್ರಾಣಿ ಪಕ್ಷಿಗಳು ಕುಡಿಯುತ್ತಿರುವುದನ್ನು ಕಂಡ ಅಂದಿನ ಅಧ್ಯಕ್ಷೆ , ಪ್ರಸ್ತುತ ಸದಸ್ಯೆಯಾಗಿರುವ ಮೀನಾಕ್ಷಿ ಬುಡಲೂರು  ನೇತೃತ್ವದ ಆಡಳಿತ ಮಂಡಳಿ ಈ ಸ್ಥಳದಲ್ಲಿ  ನೀರಿನ ತೊಟ್ಟಿಯನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾಗಿ ಎಲ್ಲಾ ಸದಸ್ಯರ ಒಪ್ಪಿಗೆಯಂತೆ  ಯೋಜನೆ ಕಾರ್ಯಗತಗೊಳಿಸಲಾಯಿತು.

Also Read  ರೈಲ್ವೆ ಹಳಿ ಮೇಲೆ ಮೂವರ ಮೃತದೇಹ ಛಿದ್ರಗೊಂಡ ಪ್ರಕರಣ ➤ ಮೃತದೇಹಗಳ ಗುರುತು ಪತ್ತೆ..!!

ನೀರಿನ ತೊಟ್ಟಿಯ ಪಕ್ಕದಲ್ಲಿ ಇದೀಗ  ಪೈಪಿಗೆ ಅಳವಡಿಸಲಾದ ಸಾಧನದಿಂದ ಈ ಭಾಗದ ವಾಟರ್ ಮ್ಯಾನ್‍ಗಳು ತೊಟ್ಟಿಯಲ್ಲಿ ನೀರು ಖಾಲಿಯಾದಂತೆ ನೀರು ತುಂಬಿಸುವ ಕಾರ್ಯ ಮಾಡುತ್ತಾರೆ.  ಕಳೆದ ಬಾರಿ ಇಷ್ಟೊತ್ತಿಗಾಗಲೇ  ಮಳೆಯ ಪ್ರಮಾಣ ಹೆಚ್ಚಾಗಿ ನೀರಿನ ದಾಹ ಅಷ್ಟೇನೂ ಇರಲಿಲ್ಲ. ಆದರೆ ಈ ಬಾರಿ ವ್ಯತಿರಿಕ್ತವಾಗಿರುವುದರಿಂದ ಈ ತೊಟ್ಟಿ ಬಹು ಉಪಯೋಗವಾಗಿದೆ. ಈ ತೊಟ್ಟಿಯ ಸುತ್ತಮುತ್ತ ಪ್ರದೇಶದಲ್ಲಿ ಗೇರು ತೋಪಿದ್ದು, ಇಲ್ಲಿ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳು ವಾಸಿಸುತ್ತವೆ. ಅಲ್ಲದೆ  ಈ ಭಾಗದಲ್ಲಿ ಮೇಯಲು ಬಿಡುವ ಗೋವುಗಳು ಈ ತೊಟ್ಟಿಯಿಂದ ತನ್ನ ದಾಹ ನೀಗಿಸಿಕೊಳ್ಳುತ್ತಿದೆ. ಕುದುಲೂರು ಏಣಿತ್ತಡ್ಕ ಮೊದಲಾದ ಭಾಗಕ್ಕೆ ತೆರಳುವ ಮಂದಿಯೂ ಈ ತೊಟ್ಟಿಯ ನೀರಿನಲ್ಲಿ  ಮುಖ ಕೈಕಾಲು ತೊಳೆದು ದಣಿವಾರಿಸಿಕೊಳ್ಳುತ್ತಿದ್ದಾರೆ.

Also Read  ಧರ್ಮಸ್ಥಳದಲ್ಲಿ 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ ➤ 201 ಜೋಡಿ ವಧು-ವರರು ಹೊಸ ಜೀವನಕ್ಕೆ ಪಾದಾರ್ಪಣೆ

“ಕಳೆದ ಎರಡು ವರ್ಷದ ಹಿಂದೆ ತ್ರಿವೇಣಿ ಸರ್ಕಲ್ ಬಳಿ ಪಂಚಾಯಿತಿ ವತಿಯಿಂದ ನಿರ್ಮಿಸಿದ ತೊಟ್ಟಿ ಈ ಭಾರಿ ಹೆಚ್ಚಿಗೆ ಉಪಯೋಗವಾಗುತ್ತಿದೆ. ಪ್ರಾಣಿ ಪಕ್ಷಿಗಳು, ಮೇಯಲು ಬಿಟ್ಟ ಗೋವುಗಳು ತೊಟ್ಟಿಯಲ್ಲಿನ ನೀರನ್ನು ಉಪಯೋಗಿಸುತ್ತಿದೆ.  ತೊಟ್ಟಿ ನಿರ್ಮಿಸಿರುವುದು  ಸಾರ್ಥಕತೆಯಾಗಿದೆ.”

ಹೇಮಾ ಎಂ ಶೆಟ್ಟಿ, ಅಧ್ಯಕ್ಷೆ  ಕೊಯಿಲ ಗ್ರಾಮ ಪಂಚಾಯಿತಿ

error: Content is protected !!
Scroll to Top