(ನ್ಯೂಸ್ ಕಡಬ) newskadaba.com ಕಡಬ, ಮಾ.09. ತನ್ನ ಒಡನಾಡಿಗಳಲ್ಲಿ ಸಂಗೀತದ ಹಿನ್ನೆಲೆ ಇಲ್ಲದಿದ್ದರೂ ತಾನು ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿ ಹಲವು ಏಳುಬೀಳುಗಳನ್ನು ಎದುರಿಸಿ ಇಂದು ಡಿಜೆ ಕ್ಷೇತ್ರದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದ ಕಡಬದ ಸಾಧಕರೋರ್ವರ ಸಾಧನೆಯ ಬಗ್ಗೆ ಒಂದು ವರದಿ.
ಕಡಬ ತಾಲೂಕಿನ ಬಂಟ್ರ ಗ್ರಾಮದ ಬೆಥೇಲ್, ಪೀಡಿಯಾಕಲ್ ನಿವಾಸಿ ಕಡಬ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಚೆರಿಯನ್ ಬೇಬಿ ಹಾಗೂ ಉಪ್ಪಿನಂಗಡಿ ಸರಕಾರಿ ಕಾಲೇಜಿನ ಪ್ರಾಚಾರ್ಯೆ ತೆರೇಸಾ ಡಿಸೋಜಾರವರ ಏಕೈಕ ಪುತ್ರ ಜೋನ್ಸ್ ಬ್ರಿಜೇಶ್ ಇಂದು ಡಿಜೆ ಜೋ ಹೆಸರಿನಲ್ಲಿ ರಾಷ್ಟ್ರೀಯ – ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
ತನ್ನ ಸುಪುತ್ರನ ಇಚ್ಛೆಯಂತೆ ಸಂಗೀತ ಕ್ಷೇತ್ರದಲ್ಲೇ ಮುಂದುವರಿಯುವಂತೆ ಪ್ರೋತ್ಸಾಹಿಸಿದ ಪೋಷಕರು ಇದೀಗ ತಮ್ಮ ಪುತ್ರನ ಸಾಧನೆಯನ್ನು ಕಂಡು ಆನಂದಭಾಷ್ಪ ಸುರಿಸುತ್ತಿದ್ದಾರೆ. ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯ ವರೆಗೆ ವ್ಯಾಸಂಗ ಮಾಡಿದ ಡಿಜೆ ಜೋ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಎಂ.ಟೆಕ್ ಪೂರೈಸಿರುತ್ತಾರೆ. ಪಾಮ್ ಎಕ್ಸ್ಪೋ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಫೈನಲಿಸ್ಟ್ ಆಗಿರುವ ಡಿಜೆ ಜೋ, ವಾರ್ ಆಫ್ ಡಿಜೆ ಯಲ್ಲಿ 5 ಬಾರಿ ಗೆಲ್ಲುವುದರ ಮೂಲಕ ವಿಜಯದ ಪತಾಕೆಯನ್ನು ಹಾರಿಸಿದ್ದಾರೆ. ಇವರು ಡಿಜೆ ಕ್ಷೇತ್ರದಲ್ಲಿ ಮಿಂಚುವುದಕ್ಕೆ ರಾಜ್ಯದ ಬಹು ಖ್ಯಾತಿಯ ಗಾಯಕಿ, ಭರತನಾಟ್ಯಗಾರ್ತಿ ಡಾ. ಶ್ವೇತಾ ಮಡಪ್ಪಾಡಿ ಪ್ರೋತ್ಸಾಹಿಸುತ್ತಿದ್ದಾರೆ.
ಈಗಾಗಲೇ ದೇಶಾದ್ಯಂತ ಹಲವಾರು ಅಭಿಮಾನಿಗಳನ್ನು ಹೊಂದಿರುವ ಡಿಜೆ ಜೋ, ಹಳ್ಳಿಯಿಂದ ಬಂದವ ಏನು ತಾನೇ ಮಾಡಿಯಾನು ಎಂಬ ಹಿರಿಯ ಕಲಾವಿದರೋರ್ವರ ಅಹಂಭಾವದ ಮಾತನ್ನು ಸವಾಲಾಗಿ ಸ್ವೀಕರಿಸಿದ್ದರಿಂದ ಇಂದು ಈ ಮಟ್ಟಕ್ಕೆ ತಲುಪಿದ್ದೇನೆ ಎಂದು ತಾನು ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ದಿನದ ನೆನಪನ್ನು ಮೆಲುಕು ಹಾಕಿದರು.