ಉಪ್ಪಿನಂಗಡಿ: ಹೊಟೇಲ್ ಸಿಬ್ಬಂದಿಯ ಬೇಜವಾಬ್ದಾರಿಗೆ ಮುನ್ನುಗ್ಗಿ ಬಂದ ಜೀಪ್ ➤ ಜೀಪಿನ ಅಡಿಗೆ ಬಿದ್ದರೂ ಪವಾಡ ಸದೃಶ ಪಾರಾದ ತಾಯಿ – ಮಗು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.10. ನಿಲ್ಲಿಸಿದ್ದ ಜೀಪನ್ನು ಹೊಟೇಲ್ ಸಿಬ್ಬಂದಿಯೋರ್ವ ಚಲಾಯಿಸಲು ಮುಂದಾಗಿದ್ದರಿಂದ ಜೀಪು ಅವಘಡಕ್ಕೀಡಾದ ಘಟನೆ ಭಾನುವಾರ ಸಂಜೆ ಉಪ್ಪಿನಂಗಡಿಯ ಟಿಫಿನ್‍ಹಾಲ್ ಹೊಟೇಲ್ ಎದುರು ನಡೆದಿದ್ದು, ಘಟನೆಯಿಂದ ಜೀಪಿನಡಿಗೆ ಬಿದ್ದು ಕೂಡಾ ಮಹಿಳೆ ಹಾಗೂ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶ್ಯವಾಗಿ ಅಪಾಯದಿಂದ ಪಾರಾಗಿದ್ದಾರೆ.

ಹಿರೇಬಂಡಾಡಿ ನಿವಾಸಿ ಜಗದೀಶ್ ಎಂಬವರು ತನ್ನ ಜೀಪನ್ನು ಉಪ್ಪಿನಂಗಡಿಯ ಟಿಫಿನ್ ಹಾಲ್ ಹೊಟೇಲ್‍ ಬಳಿ ನಿಲ್ಲಿಸಿ ಕೀಯನ್ನು ಜೀಪಿನಲ್ಲಿಟ್ಟು ಚಾ ಕುಡಿಯಲೆಂದು ತೆರಳಿದ್ದರು. ಈ ಸಂದರ್ಭದಲ್ಲಿ ಹೊಟೇಲ್ ಸಿಬ್ಬಂದಿ ಶಂಕರ ಎಂಬಾತ ನಿಲ್ಲಿಸಿದ ಜೀಪಿಗೆ ಹತ್ತಿ ಜೀಪನ್ನು ಸ್ಟಾರ್ಟ್ ಮಾಡಿದ್ದು, ಈ ಸಂದರ್ಭ ಒಮ್ಮಿಂದೊಮ್ಮೆಲೆ ರಣವೇಗದಲ್ಲಿ ಜೀಪು ಮುನ್ನುಗ್ಗಿ ಹೊಟೇಲ್ ಎದುರು ನಿಲ್ಲಿಸಿದ್ದ ಬೈಕ್‍ಗೆ ಗುದ್ದಿತಲ್ಲದೆ ಅಲ್ಲೇ ಮೆಡಿಕಲ್‍ವೊಂದರ ಎದುರು ಮಗುವನ್ನು ಎತ್ತಿಕೊಂಡು ನಿಂತಿದ್ದ ಉರುವಾಲು ಗ್ರಾಮದ ಚಂದ್ರಲತಾ ಎಂಬವರಿಗೆ ಢಿಕ್ಕಿಯಾಗಿದೆ. ಗುದ್ದಿದ ರಭಸದಲ್ಲಿ ಮಗು ರಿತೇಶ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಚಂದ್ರಕಲಾ ಅವರ ಮೇಲೆ ಜೀಪು ಹಾದು ಹೋಗಿ ಮುಂದಕ್ಕೆ ನಿಲ್ಲಿಸಿದ್ದ ಸ್ಕೂಟಿಗೆ ಗುದ್ದಿ ಅದನ್ನು ಮುಂದಕ್ಕೆ ಎಳೆದುಕೊಂಡು ಹೋಗಿ ಗೇಟ್‍ನ ಕಂಬಕ್ಕೆ ಗುದ್ದಿ, ಜೀಪಿನ ಹಿಂಬದಿ ಚಕ್ರ ಅಂಗಡಿ ಮಳಿಗೆಗಳ ಜಗಲಿಯ ಮೇಲೆ ಹತ್ತಿ ನಿಂತಿತ್ತು.

Also Read  ಬಿಸಿರೋಡ್: ಚೂರಿಯಿಂದ ಇರಿದು ಯುವಕನ ಕೊಲೆ ಪ್ರಕರಣ ➤ ಇಬ್ಬರ ಬಂಧನ

ಯಾವತ್ತೂ ಶಾಲಾ ಮಕ್ಕಳು ಸೇರಿದಂತೆ ಹೆಚ್ಚಿನ ಜನಸಂದಣಿಯಿಂದ ಕೂಡಿರುತ್ತಿದ್ದ ಈ ಪ್ರದೇಶದಲ್ಲಿ ಭಾನುವಾರವಾದ್ದರಿಂದ ಜನಸಂದಣಿ ಕಡಿಮೆಯಿದ್ದುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

error: Content is protected !!
Scroll to Top