(ನ್ಯೂಸ್ ಕಡಬ) newskadaba.comಕಡಬ,ಫೆ.09. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಳವಡಿಸಲಾಗಿರುವ ದಾರಿದೀಪಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಲೋಪ ಎಸೆಗಲಾಗಿದೆ ಎಂದು ಆರೋಪ ವ್ಯಕ್ತವಾದ ಘಟನೆ ಕೊೈಲ ಗ್ರಾಮ ಸಭೆಯಲ್ಲಿ ನಡೆದಿದೆ. ಸಭೆ ಗ್ರಾ.ಪಂ.ಅಧ್ಯಕ್ಷೆ ಹೇಮಾ ಎಂ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ತಾ.ಪಂ.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್‍ಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾ.ಪಂ.ವತಿಯಿಂದ ಸೋಲಾರ್ ದಾರಿದೀಪ ನಿಯಮಾನುಸಾರ ಅಳವಡಿಕೆಯಾಗಿಲ್ಲ. ಅಳವಡಿಸಿರುವ ಸೋಲಾರ್ ದಾರಿದೀಪಗಳು ಗುಣಮಟ್ಟದಿಂದ ಇಲ್ಲ ಅಲ್ಲದೆ ಟೆಂಡರ್ ಪ್ರಕ್ರಿಯೆಯ ನಿಗದಿತ ದಿನದೊಳಗೆ ಪೂರ್ಣಗೊಳಿಸಿ ಕಂಪೆನಿಯೊಂದಕ್ಕೆ ಟೆಂಡರ್ ನೀಡಲಾಗಿದೆ ಎಂದು ಗ್ರಾಮಸ್ಥ ಯತೀಶ್ ಆರೋಪಿಸಿದರು. ಇದಕ್ಕೆ ಗ್ರಾಮಸ್ಥರು ದ್ವನಿಗೂಡಿಸಿದರು. ಇದಕ್ಕೆ ಪಿಡಿಒರವರು ಉತ್ತರ ನೀಡಿದರೂ , ತಪ್ಪಾಗಿದೆ ಎಂದು ಕ್ಷಮೆಯಾಚಿಸಿದರೂ ಗ್ರಾಮಸ್ಥರು ಸಮಾಧಾನಗೊಳ್ಳಲಿಲ್ಲ. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮಧ್ಯಪ್ರವೇಶಿಸಿ ಮಾತನಾಡಿದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು, ಸೋಲಾರ್ ದಾರಿದೀಪ ಅಳವಡಿಕೆಯಲ್ಲಿ ಲೋಪ ಆಗಿರಬಹುದು. ಗ್ರಾ.ಪಂ. ಹೆಚ್ಚು ಪ್ರಚಾರದಲ್ಲಿರುವ ಪತ್ರಿಕೆಯಲ್ಲಿ ಪ್ರಕಟಣೆ ನೀಡಿಯೇ ಟೆಂಡರ್ ಕರೆಯಬೇಕು. ಕಾಮಗಾರಿಗಳು ಪಾರದರ್ಶಕವಾಗಿರಬೇಕು. ಈ ಘಟನೆ ಮುಂದೆ ಮರುಕಳಿಸದಂತೆ ಗ್ರಾ.ಪಂ.ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕೆಂದು ಹೇಳಿ ಚರ್ಚೆಗೆ ತೆರೆ ಎಳೆದರು.
ನೆಹರುತೋಟ-ವಳಕಡಮ ಜಿ.ಪಂ.ರಸ್ತೆ ತೀರಾ ಹದಗೆಟ್ಟಿದ್ದು ಬಹಳ ವರ್ಷಗಳಿಂದ ದುರಸ್ತಿಯೇ ಆಗಿಲ್ಲ. ಸದ್ರಿ ರಸ್ತೆಯಲ್ಲಿ ವಾಹನ ಓಡಾಟಕ್ಕೆ, ಜನರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ರಸ್ತೆ ದುರಸ್ತಿಗೆ ಪದೇ ಪದೇ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದ್ದರಿಂದ ಸದ್ರಿ ರಸ್ತೆಯನ್ನು ಪಿಡಬ್ಲ್ಯುಡಿ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ದುರಸ್ತಿಗೆ ಪ್ರಸ್ತಾವನೆ:
ತೀರಾ ಹದಗೆಟ್ಟಿರುವ ಗಂಡಿಬಾಗಿಲು-ಹಿರೇಬಂಡಾಡಿ ರಸ್ತೆ ದುರಸ್ತಿಗೆ 15 ಲಕ್ಷ ರೂ.,ಹಾಗೂ ನೆಹರುತೋಟ-ವಳಕಡಮ ರಸ್ತೆ ದುರಸ್ತಿಗೆ 25 ಲಕ್ಷ ರೂ. ಮಳೆಹಾನಿ ಅನುದಾನ ಕೋರಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿ.ಪಂ.ಇಂಜಿನಿಯರ್ ಸಂದೀಪ್‍ರವರು ಮಾಹಿತಿ ನೀಡಿದರು.
ಶಾಲಾ ಕೊಠಡಿ ಬಿರುಕು:
ಸಬಳೂರು ಸರಕಾರಿ ಶಾಲೆಯ 1 ಕೊಠಡಿ ಬಿರುಕು ಬಿಟ್ಟಿದೆ. ಈ ಶಾಲೆ ಮತದಾನ ಕೇಂದ್ರವೂ ಆಗಿದೆ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಕ ಪದ್ಮಯ್ಯ ಗೌಡ, ಎಸ್‍ಡಿಎಂಸಿ ಅಧ್ಯಕ್ಷ ಶೇಖರ ಗೌಡ ಆಗ್ರಹಿಸಿದರು. ಹೇಂತಾರು ಎಂಬಲ್ಲಿ ಮನೆ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಕೆಮ್ಮಾರ ನಿವಾಸಿ ಯಾಕುಬುರವರು ಕುಡಿಯುವ ನೀರಿನ ಪೈಪು ಅಳವಡಿಸುವಂತೆ ಒತ್ತಾಯಿಸಿದರು. ಗ್ರಾಮಸ್ಥರು ವಿವಿಧ ಬೇಡಿಕೆಗಳನ್ನು ಮಂಡಿಸಿದರು.
ಇತ್ತೀಚೆಗೆ ಗ್ರಾಮದ ಎಲ್ಯಂಗ ಎಂಬಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ತುರ್ತುಗಿ ಸ್ಪಂದನೆ ನೀಡಲಾಗಿದೆ. ಸುಮಾರು 12ಕ್ಕೂ ಹೆಚ್ಚು ಕುಟುಂಬಗಳಿಗೆ ತಕ್ಷಣವಾಗಿ ಸ್ಥಳಿಯವಾಗಿ ನಿರ್ಮಾಣಗೊಳ್ಳುತ್ತಿರುವ ಪಶುವೈದ್ಯಕೀಯ ಕಾಲೇಜಿನ ಇಂಜಿನಿಯಾರ್ ಅವರ ಸಹಕಾರದೊಂದಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ. ಕೊಳವೆ ಬಾವಿಯ ಕೈ ಪಂಪು ದುರಸ್ತಿಪಡಿಸಿ ನೀರು ಒದಗಿಸಲಾಗಿತ್ತು. ಈ ಮದ್ಯೆ ಗ್ರಾಮ ಪಂಚಾಯಿತಿ ಸಾಮನ್ಯ ಸಭೆಯಲ್ಲಿ ಚರ್ಚಿಸಿ ಆದ್ಯತೆ ಮೇರೆಗೆ ಗ್ರಾಮ ಪಂಚಾಯಿತಿ ನಿದಿಯಲ್ಲಿ ಎಲ್ಯಂಗದಲ್ಲಿ ನೂತನ ಕೊಳವೆಬಾವಿಗೆ ಕ್ರಿಯಾಯೋಜನೆ ತಯಾರಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾದಿಕಾರಿ , ಪಂಚಾಯಿತಿ ರಾಜ್ ಕಿರಿಯ ಇಂಜಿನಿಯಾರ್ ಅವರುಗಳನ್ನು ವಿನಂತಿಸಲಾಗಿತ್ತು. ಶಾಸಕ ಎಸ್ ಅಂಗಾರ ಅವರ ಶಿಫಾರಸ್ಸು ಮಾಡಲಾಗಿತ್ತು. ತಕ್ಷಣವಾಗಿ ಸ್ಥಳಕ್ಕೆ ಭೂವಿಜ್ಞಾನಿಗಳು ಕೊಳವೆಬಾವಿಗೆ ಸ್ಥಳ ಗುರುತಿಸಿ ಬೊರ್‍ವೆಲ್ ಕೊರೆಸಲಾಗಿತ್ತು. ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿತ್ತು. ಹಂತ ಹಂತವಾಗಿ ಸಮಸ್ಯೆಯನ್ನು ಬಗೆಹರಿಸುತ್ತಾ ಬರಲಾಗಿದ್ದನ್ನು ಮನಗಂಡು ಸಂಘಟನೆಯೊಂದರ ಕಾಯಕರ್ತರು ಎಂದು ಹೇಳಿಕೊಂಡು ನೀರಿನ ಫಲಾನುಭವಿಗಳನ್ನು ಕೂಡಿಕೊಂಡು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಾಗ ಸ್ಥಳಕ್ಕೆ ಸಂಘಟನೆ ಕಾರ್ಯರ್ತರು ಎಂದು ಹೇಳಿಕೊಂಡು ಬಂದಿರುವ ಕೆಲವರು ಫೋಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಇದರೊಂದಿಗೆ ಗ್ರಾಮ ಪಂಚಾಯಿಯ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಇದೆಲ್ಲ ಸತ್ಯಕ್ಕೆ ದೂರವಾದ ಸಂಗತಿ. ಎಲ್ಯಂಗ ನೀರಿನ ಸಮಸ್ಯೆಗೆ ಪಂಚಾಯಿತಿ ಆಡಳಿತ ಮಂಡಳಿ ಪಕ್ಷ ಬೇದ ಮರೆತು ಪರಿಹಾರಕ್ಕಾಗಿ ಶ್ರಮಿಸಲಾಗಿದೆ. ಕಾನೂನನ್ನು ಪಾಲಿಸಿಕೊಂಡು ನಿರಂತರ ಪರಿಶ್ರಮದ ಫಲವಾಗಿ ಸಮಸ್ಯೆ ಪರಿಹರಿಸಲಾಗಿದೆ ಎಂದು ಹೇಳಿದ ಅದ್ಯಕ್ಷೆ 3.50 ಲಕ್ಷ ರೂ.ನೀರಿನ ತೆರಿಗೆ ಫಲಾನುಭವಿಗಳು ಪಾವತಿಗೆ ಬಾಕಿ ಇದೆ. ಫಲಾನುಭವಿಗಳು ಸಮಯಕ್ಕೆ ಸರಿಯಾಗಿ ಕರ ಪಾವತಿಸಿ ಗ್ರಾಮಾಭಿವೃದ್ಧಿಗೆ ಸಹಕರಿಸಬೇಕೆಂದರು.
ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಜಯಂತಿ ಆರ್.ಗೌಡ ಸಂದರ್ಭೋಚಿತವಾಗಿ ಮಾತನಾಡಿದರು. ವಿವಿದ ಇಲಾಖಾದಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ವಿಜಯ ಎಸ್, ಸದಸ್ಯರುಗಳಾದ ಕೆ.ಎ.ಸುಲೈಮಾನ್, ಸುಜಾತ, ಬಿಪಾತುಮ, ಸುಧೀಶ್, ಪ್ರೇಮಾ, ವಿನೋದರ ಮಾಳ, ಲಿಂಗಪ್ಪ ಕುಂಬಾರ, ಮೀನಾಕ್ಷಿ, ಹರಿಣಿ, ಸುಂದರ ನಾಯ್ಕ್, ತಿಮ್ಮಪ್ಪ ಗೌಡ, ನಝೀರ್ ಪೂರಿಂಗ ಉಪಸ್ಥಿತರಿದ್ದರು. ಪಿಡಿಒ ನಮಿತಾ ಸ್ವಾಗತಿಸಿ,ವರದಿ ಮಂಡಿಸಿದರು.