ಗಂಡಿಬಾಗಿಲು-ನೆಹರು ತೋಟ-ವಳಕಡಮ ರಸ್ತೆಗೆ ದುರಸ್ತಿಗೆ ಒಟ್ಟು 40 ಲಕ್ಷ ರೂ► ಕೊೈಲ ಫಾರ್ಮ್‍ನೊಳಗಿನ ರಸ್ತೆ ಸಮಸ್ಯೆಗೆ ಸಚಿವರ ಭೇಟಿ: ಶಾಸಕ ಅಂಗಾರ ಭರವಸೆ

(ನ್ಯೂಸ್ ಕಡಬ) newskadaba.comನೂಜಿಬಾಳ್ತಿಲ,ಫೆ.06. ತೀರಾ ಹದಗೆಟ್ಟಿರುವ ಕೊೈಲ ಗ್ರಾಮದ ಗಂಡಿಬಾಗಿಲಿನಿಂದ ನೆಹರು ತೋಟ ತನಕ ರಸ್ತೆಗೆ ಹದಿನೈದು ಲಕ್ಷ ರೂ ಹಾಗೂ ನೆಹರು ತೋಟದಿಂದ ವಳಕಡಮ ಶಾಲಾ ಬಳಿಯವರೆಗಿನ ರಸ್ತೆಗೆ ಇಪ್ಪತೈದು ಲಕ್ಷ ರೂ ಅನುದಾನವನ್ನು ಮಳೆಹಾನಿ ಯೋಜನೆಯಲ್ಲಿ ಮಂಜೂರು ಮಾಡಲಾಗಿದೆ, ಕೊೈಲ ಕೆ.ಸಿ.ಫಾರ್ಮ್‍ನೊಳಗಿನ ರಸ್ತೆ ಸಮಸ್ಯೆಗೆ ಪರಿಹಾರಕ್ಕೆ ಸಚಿವರ ಮಟ್ಟದಲ್ಲಿ ಒತ್ತಡ ಹಾಕುವುದಾಗಿ ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.

 

ಕೊೈಲ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಕೊೈಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಹೇಮಾಮೋಹನ್‍ದಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಳಕಡಮ, ಕೊೈಲ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಭಾಗವಹಸಿದ್ದ ಎ.ಪಿ.ಎಂ.ಸಿ ಮಾಜಿ ನಿರ್ದೆಶಕ ಶೀನಪ್ಪ ಗೌಡ ವಳಕಡಮ, ಗ್ರಾಮ ಪಂ. ಸದಸ್ಯರಾದ ವಿನೋಧರ ಗೌಡ ಮಾಳ, ಲಿಂಗಪ್ಪ ಕುಂಬಾರ, ಮತ್ತಿತರರು ಮಾತನಾಡಿ ನೆಹರು ತೋಟದಿಂದ ವಳಕಡಮ ಹಾಗೂ ಗಂಡಿಬಾಗಿಲಿನಿಂದ ನೆಹರು ತೋಟದ ತನಕದ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ, ಮನುಷ್ಯ ನಡೆದಾಡಲೂ ಅಸಾಧ್ಯವಾಗಿದೆ, ಕಳೆದ ಕೆಲವು ವರ್ಷಗಳಿಂದ ನಾದುರಸ್ತಿಯಲ್ಲಿದ್ದು, ಈ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಿ ತಕ್ಷಣ ಅಭಿವೃದ್ಧಿ ಪಡಿಸಬೇಕು ಎಂದು ಅಗ್ರಹಿಸಿದರು.

 

ಇದಕ್ಕೆ ಉತ್ತರಿಸಿದ ಶಾಸಕರು ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಆದರೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ, ಒಂದು ರಸ್ತೆಯನ್ನು ಡಾಮಾರೀಕರಣ ಮಾಡಿದ ಬಳಿಕ ಅದು ಹಾಳಾದರೆ ತಕ್ಷಣಕ್ಕೆ ಮರು ಡಾಮರೀಕರಣಕ್ಕೆ ಅನುದಾನ ನೀಡಲು ಸಾಧ್ಯವಾಗುವುದಿಲ್ಲ, ಆದರೂ ಈ ಎರಡು ರಸ್ತೆಗಳನ್ನು ಸುಮಾರು ಮೂರು ಕೋಟಿ ರೂ ಕೇಂದ್ರ ರಸ್ತೆ ನಿಧಿ ಅನುದಾನದಲ್ಲಿ ಮರು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಂದೇ ಬರುತ್ತದೆ, ಮಂಜೂರಾದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು, ಒಂದು ವೇಳೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಅನುದಾನ ಬಂದರೆ ಅದರಲ್ಲಿ ಅಭಿವೃದ್ಧಿಪಡಿಸಲಾಗುವುದು, ಅಥವಾ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು, ಆದರೆ ಜನ ಸ್ವಲ್ಪ ತಾಳ್ಮೆ ವಹಿಸಬೇಕು. ಇದೀಗ ತಕ್ಷಣಕ್ಕೆ ಮಳೆ ಹಾನಿ ಯೋಜನೆಯಲ್ಲಿ ಗಂಡಿಬಾಗಿನಿಂದ ನೆಹರು ತೋಟ ತನಕ ಹದಿನೈದು ಲಕ್ಷ ರೂ ಹಾಗೂ ನೆಹರು ತೋಟದಿಂದ ವಳಕಡಮ ತನಕ 25 ಲಕ್ಷ ರೂ ಅನುದಾನದಲ್ಲಿ ದುರಸ್ತಿ ಕಾರ್ಯ ಮಾಡಲಾಗುವುದು, ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಪತ್ರ ನೀಡಿ ರಸ್ತೆಯ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಸಂಬಂಧಪಟ್ಟ ಇಂಜೀನಿಯರ್‍ಗಳಿಗೆ ಕಾಮಗಾರಿ ಪ್ರಾರಂಭಿಸಲು ಸೂಚಿಸಿದ್ದೇನೆ ಎಂದರು.

Also Read  ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬೆ ದರ್ಶನ ಆರಂಭ

ಇದರಿಂದ ಮನವಿ ಮಾಡಿದವರು ಸಮಧಾನ ಪಟ್ಟುಕೊಂಡರೂ ವಳಕಡಮ ಭಾಗದ ಕೆಲವು ಯುವಕರು ಶಾಸಕರು ಸ್ಥಳಕ್ಕೆ ಬರಬೇಕು ಅನುದಾನ ಜಾಸ್ತಿ ನೀಡಬೇಕು ಎಂದು ಪಟ್ಟು ಹಿಡಿದು ಬರುವ ಲೋಕ ಸಭಾ ಚುನಾವಣೆಗೆ ಮೊದಲು ರಸ್ತೆ ಡಾಮಾರೀಕರಣವಾಗದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಅಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು ತಾನು ಚುನಾವಣೆ ದೃಷ್ಠಿಯನ್ನು ಇಟ್ಟುಕೊಂಡು ಯಾವತ್ತೂ ಕೆಲಸ ಮಾಡಿದವನಲ್ಲ, ಚುನಾವಣೆ ಬಹಿಷ್ಕರಿಸುವುದರಿಂದ ಯಾವುದೆ ಅಭಿವೃದ್ಧಿಯಾಗುವುದಿಲ್ಲ, ತಮ್ಮ ಹಕ್ಕು ಚಲಾಯಿಸುವುದು ನಿಮ್ಮ ಧರ್ಮ, ಕೆಲಸ ಮಾಡುವುದು ನಮ್ಮ ಧರ್ಮ, ನಾನು ಯಾವುದೇ ಹೆಚ್ಚು ಭರವಸೆ ನೀಡುವುದಿಲ್ಲ, ಹೇಳಿದ ಕೆಲಸವನ್ನು ಮಾಡಿ ಮುಗಿಸುತ್ತೇನೆ, ದಯವಿಟ್ಟು ತಾಳ್ಮೆಯಿಂದ ಇರಿ ಎಂದು ಮನವಿ ಮಾಡಿದ ಶಾಸಕರು ಜಿಲ್ಲೆಯ ಇತರ ಕ್ಷೆತ್ರಗಳಿಗೆ ಹೋಲಿಸಿದರೆ ವಿಸ್ತಾರವಾದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾಗಿದೆ, ಕೆಲವೊಂದು ಬಾಕಿಯಿರುವುದು ಗಮನದಲ್ಲಿದೆ, ಹಂತ ಹಂತವಾಗಿ ಎಲ್ಲವನ್ನೂ ಅಭಿವೃದ್ಧಿ ಮಾಡಲಾಗುವುದು ಎಂದರು.

ಕೊೈಲ ಫಾರ್ಮ್‍ನೊಳಗಿನ ರಸ್ತೆ ಸಮಸ್ಯೆ ಪರಿಹರಿಸಲು ಸಚಿವರ ಭೇಟಿ:
ಕೊೈಲ ಪಶು ಸಂಗೋಪನಾ ಕ್ಷೇತ್ರದ ಮಧ್ಯೆ ಹಾದು ಹೋಗುವ ರಸ್ತೆಗಳನ್ನು ಕೆಲವೆಡೆ ಮುಚ್ಚಿ ಅನ್ಯಾಯ ಮಾಡಲಾಗಿದೆ, ಉಳಿದ ರಸ್ತೆಯನ್ನು ದುರಸ್ತಿ ಮಾಡುತ್ತಿಲ್ಲ, ಈ ರಸ್ತೆಗಳನ್ನು ಅವಲಂಬಿಸಿರುವ ಕೊನೆಮಜಲು, ಪಲ್ಲಡ್ಕ, ಪಟ್ಟೆ, ಆತೂರು, ಕಾಯರಟ್ಟ ಮುಂತಾದ ಹಳ್ಳಿಗಳ ಸುಮಾರು ಐದುನೂರು ಮನೆಗಳ ಜನತೆಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಸರಕಾರ ನಮ್ಮನ್ನು ಕಡೆಗಣಿಸುತ್ತಿದೆ ಈ ರಸ್ತೆಗಳ ಅಭಿವೃದ್ಧಿಗೆ ಶಾಸಕರು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಮುಖರಾದ ಡಿ.ಟಿ.ಭಟ್, ಯತೀಶ್ ಪುತ್ಯೆ, ಮಹೇಶ್ ಪೊಸಲಕ್ಕೆ, ಬಶೀರ್ ಆತೂರು, ಡಿ.ಎ.ಹಮೀದ್ ಮತ್ತಿತರು ಅಗ್ರಹಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು ಈ ಸಮಸ್ಯೆ ಸರಕಾರದ ಮಟ್ಟದಲ್ಲಿ ಇತ್ಯರ್ಥವಾಗಬೇಕಿದೆ, ಯಾರಿಗೆ ಮನವಿ ಮಾಡಿ ಏನೂ ಪ್ರಯೋಜನವಿಲ್ಲ, ಫೆ 6 ರಿಂದ ನಡೆಯುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಪಶುಸಂಗೋಪನಾ ಸಚಿವರು ಹಾಗೂ ಇಲಾಖಾಧಿಕಾರಿಗಳ ಸಭೆ ಮಾಡಿ ಸಮಸ್ಯೆ ಇತ್ರ್ಯಕ್ಕೆ ಪ್ರಯತ್ನಿಸಲಾಗುವುದು. ಈ ಭಾಗದಿಂದ ಒಂದು ನಿಯೋಗ ಬೆಂಗಳೂರಿಗೆ ಆಗಮಿಸಬೇಕು, ನಾನು ಸಚಿವ ದಿನ ನಿಗದಿಗೆ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

Also Read  ಬಂಟ್ವಾಳ: ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ

ಮಳೆಹಾನಿ ಅನುದಾನ ವಿತರಣೆಯಲ್ಲಿ ಅನ್ಯಾಯ:
ಮಳೆಹಾನಿ ವಿತರಣೆಯಲ್ಲಿ ಸುಳ್ಯ ಹಾಗೂ ಬೆಳ್ತಂಗಡಿ ಕ್ಷೇತ್ರಗಳಿಗೆ ಅನ್ಯಾಯವಾಗಿದೆ ಎಂದು ಶಾಸಕ ಅಂಗಾರ ದೂರಿದರು. ಈ ಬಾರಿ ಜಿಲ್ಲೆಯ ಪ್ರತೀ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ತಲಾ ಆರು ಕೋಟಿ ರೂ ಮಳೆಹಾನಿಯಲ್ಲಿ ಬಿಡುಗಡೆಯಾಗಿದೆ. ಸುಳ್ಯ ಹಾಗೂ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಅತೀ ದೊಡ್ಡ ಕ್ಷೇತ್ರವಾಗಿದ್ದು, ಇಲ್ಲಿ ಜಿಲ್ಲೆಯ ಇತರ ಕ್ಷೇತ್ರಗಳಿಗಿಂತ ಹೆಚ್ಚು ಗ್ರಾಮೀಣ ರಸ್ತೆಗಳು ಇವೆ, ಬಾಕಿ ಕ್ಷೇತ್ರಗಳು ಬಹುತೇಕ ನಗರಪ್ರದೇಶಗಳನ್ನು ಹೊಂದಿವೆ, ಅನುದಾನ ವಿಂಗಡನೆ ಮಾಡುವಾಗ ಕ್ಷೇತ್ರದ ವಿಸ್ತಾರ ನೋಡಿಕೊಂಡು ಮಾಡಿದರೆ ಹೆಚ್ಚು ರಸ್ತೆಗಳ ದುರಸ್ತಿ ಮಾಡಬಹುದು. ಕೆಲವು ಕ್ಷೇತ್ರಗಳು ಕಡಬ ತಾಲೂಕಿನಷ್ಟು ದೊಡ್ಡದಿಲ್ಲ, ಆದರೆ ಎಲ್ಲವನ್ನು ಸಮಾನಾಗಿ ನೋಡಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಶಾಸಕರು ಅಸಮಾದಾನ ವ್ಯಕ್ತಪಡಿಸಿದರು.

ತಾಲೂಕು ಪಂಚಾಯತಿ ಸದಸ್ಯೆ ಜಯಂತಿ ಆರ್ ಗೌಡ, ಗ್ರಾ. ಪಂಚಾಯತಿ ಉಪಾಧ್ಯಕ್ಷೆ ವಿಜಯ ಶೇಖರ್, ಸದಸ್ಯೆ ಪ್ರೇಮಾ ಉಪಸ್ಥಿತರಿದ್ದರು. ಪಂಚಾಯತಿ ಮಾಜಿ ಅಧ್ಯಕ್ಷರಾದ ಮೀನಾಕ್ಷಿ, ಬಾಲಕೃಷ್ಣ ಗೌಡ ಬೆಂಗದಪಡ್ಪು, ಪ್ರಮುಖರಾದ ಉಮೇಶ್ ಬೆಂಗದಪಡ್ಪು, ಮಮತಾ ಆನೆಗುಂಡಿ, ಧರ್ಮಪಾಲ ರಾವ್ ಕಜೆ, ಲಕ್ಷ್ಮೀನಾರಾಆಯಣ ರಾವ್ ಆತೂರು ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು. ಬಿಜೆಪಿ ಕೊೈಲ ಗ್ರಾಮ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.

Also Read  ಉಪ್ಪಿನಂಗಡಿ: ಹೆಚ್ಚಾದ ಹುಚ್ಚು ನಾಯಿ ಹಾವಳಿ..! ➤ ಹಲವರಿಗೆ ಕಡಿತ

 

 

error: Content is protected !!
Scroll to Top