ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಅನ್ನದಾತನಿಗೆ ಬಂಪರ್ ಕೊಡುಗೆ

(ನ್ಯೂಸ್ ಕಡಬ) newskadaba.comಬೆಂಗಳೂರು ,ಫೆ.05.ಬೆಂಗಳೂರು :  ಮುಖ್ಯಮಂತ್ರಿ  ಎಚ್.ಡಿ ಕುಮಾರಸ್ವಾಮಿ ಬಜೆಟ್‍ ಮಂಡನೆಗೆ ಭರದ ಸಿದ್ಧತೆ ಕೈಗೊಂಡಿದ್ದಾರೆ. ಇದೇ ವೇಳೆ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ರೈತರಿಗೆ  ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ.  ಈ ಬಾರಿ ರೈತಪರ ಬಜೆಟ್‌ ಮಂಡಿಸಲು ಮುಖ್ಯಮಂತ್ರಿ ಭರದ ಸಿದ್ಧತೆ ಕೈಗೊಂಡಿದ್ದು, ರೈತರ ಬೆಳೆಸಾಲ ಯೋಜನೆಗೆ ಬಾಕಿ ಉಳಿದಿರುವ ಎಲ್ಲ ಹಣವನ್ನೂ ಹಂಚಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಮಂಡಿಸಿದ್ದ ಬಜೆಟ್‌ ಗಾತ್ರ 2.18 ಲಕ್ಷ ಕೋಟಿ ರು.ಗಳಾಗಿದ್ದರೆ, ಫೆ.8ರಂದು ಮಂಡಿಸಲಿರುವ ಎರಡನೇ ಬಜೆಟ್‌ನ ಗಾತ್ರ 2.40 ಲಕ್ಷ ಕೋಟಿ ರು. ದಾಟುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.ಸೋಮವಾರ ನಗರದಲ್ಲಿ ಮಾಧ್ಯಮ ಮುಖ್ಯಸ್ಥರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಈ ಬಜೆಟ್‌ನಲ್ಲಿ ಸಾಲಮನ್ನಾ ಯೋಜನೆಯ ಎಲ್ಲ ಹಣ ಹಂಚಿಕೆ ಮಾಡಿ ಪೂರ್ಣಗೊಳಿಸಬೇಕು ಎಂಬ ಉದ್ದೇಶವಿದೆ. ನೋಡೋಣ ಎಂದು ಸೂಚ್ಯವಾಗಿ ಹೇಳಿದರು.

ರೈತರು ಸ್ವಾತಂತ್ರ್ಯಾನಂತರದ ಅವಧಿಯಿಂದ ಈವರೆಗೆ ಸಾಕಷ್ಟುಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದು ಗೊತ್ತಿದೆ. ಆದರೆ, ನಾನು ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಪರಿಹರಿಸಲು ಸಾಧ್ಯವಿಲ್ಲ. ನನಗೆ ಸಮಯ ಬೇಕು. ರೈತರ ಹಿತರಕ್ಷಣೆಗಾಗಿ ಮತ್ತು ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಉದ್ದೇಶದಿಂದ ನಾನು ಅನೇಕ ಯೋಜನೆಗಳನ್ನು ಹೊಂದಿದ್ದೇನೆ ಎಂದು ಹೇಳಿದರು.

Also Read  ಸುಬ್ರಹ್ಮಣ್ಯ: ನೂತನ ಕಾನ್ಸ್ಟೇಬಲ್ ಪುನೀತಾ ಕರ್ತವ್ಯಕ್ಕೆ ಹಾಜರ್

ಸಾಲಮನ್ನಾದಿಂದ ರೈತರಿಗೆ ಶಾಶ್ವತ ಪರಿಹಾರ ಸಿಕ್ಕಂತಾಗುವುದಿಲ್ಲ. ಆದರೆ, ರಾಜ್ಯದ ಹಲವೆಡೆ ನಿರಂತರ ಬರ ಪರಿಸ್ಥಿತಿ ಇತ್ತು. ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರಿಗೆ ಕೃಷಿ ಪದ್ಧತಿಯಲ್ಲಿ ಮಾರ್ಪಾಡುಗಳನ್ನು ತರಬೇಕಾಗಿದೆ. ಇಲ್ಲದಿದ್ದರೆ ಎಷ್ಟುವರ್ಷ ಸಾಲಮನ್ನಾ ಮಾಡಿದರೂ ಪ್ರಯೋಜನವಾಗುವುದಿಲ್ಲ. ಸಾಲಮನ್ನಾ ಮಾಡಿದಾಕ್ಷಣ ರೈತರ ಮನೆ ಬಾಗಿಲಿಗೆ ಸೌಭಾಗ್ಯ ತಂದುಕೊಡುತ್ತೇವೆ ಎಂದು ಹೇಳುವುದಿಲ್ಲ. ರೈತರ ಸಮಗ್ರ ಏಳಿಗೆ ಬಗ್ಗೆ ಯೋಜನೆ ರೂಪಿಸದಿದ್ದರೆ ಮುಂದಿನ ದಿನಗಳಲ್ಲಿ ರೈತರ ಬದುಕು ಮತ್ತಷ್ಟುದುಸ್ತರವಾಗುತ್ತದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಜನಪ್ರಿಯ ಯೋಜನೆಗಳಿಗೆ ಅನಿವಾರ್ಯವಾಗಿ ಮೊರೆ ಹೋಗಬೇಕಾಗಿದೆ. ಆರ್ಥಿಕ ಶಿಸ್ತಿನ ಚೌಕಟ್ಟು ದಾಟಿಲ್ಲ. ದಾಟುವುದೂ ಇಲ್ಲ. ಶಿಸ್ತು ಕಾಪಾಡುವಲ್ಲಿ ನಾವು ಎಡವಿಲ್ಲ ಎಂದು ಪ್ರತಿಪಾದಿಸಿದರು.ರೈತರಿಗೆ ಉಚಿತ ವಿದ್ಯುತ್‌ಗಾಗಿ 11 ಸಾವಿರ ಕೋಟಿ ರು. ಸಬ್ಸಿಡಿ ನೀಡುತ್ತಿದ್ದೇವೆ. ಹಾಲಿಗೆ ಪ್ರೋತ್ಸಾಹಧನಕ್ಕೂ ಸಹಸ್ರಾರು ಕೋಟಿ ರು. ವ್ಯಯವಾಗುತ್ತಿದೆ. ಶೇ.85ರಷ್ಟುಜನರಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ಹಂಚಿದ್ದೇವೆ. ಏಳು ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸುವುದನ್ನು ಐದು ಕೆ.ಜಿ.ಗೆ ಇಳಿಸಲು ಮುಂದಾದರೂ ನಂತರ ಬಂದ ಒತ್ತಡದಿಂದಾಗಿ ಆಗಲಿಲ್ಲ. ಆದರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಿನ ಜನಪ್ರಿಯ ಯೋಜನೆಗಳು ಅನುಷ್ಠಾನದಲ್ಲಿ ಇಲ್ಲ. ಹಿಂದಿನ ಸರ್ಕಾರದ ಯಾವ ಯೋಜನೆಗಳನ್ನೂ ಸ್ಥಗಿತಗೊಳಿಸದೆ ನಾನು ಕಳೆದ ಬಾರಿ ಬಜೆಟ್‌ ಮಂಡಿಸಿದೆ.

Also Read  ವಿಧಾನಪರಿಷತ್ ಚುನಾವಣೆ- ಯುಟಿ ಖಾದರ್, ಬ್ರಿಜೇಶ್ ಚೌಟ, ಭರತ್ ಶೆಟ್ಟಿ ಮತದಾನ

ಸಾಲಮನ್ನಾ ಯೋಜನೆಯಲ್ಲಿ ಬುಕ್‌ ಅಡ್ಜಸ್ಟ್‌ಮೆಂಟ್‌ಗೆ ಅವಕಾಶ ಕೊಟ್ಟಿಲ್ಲ. ರೈತನ ಅಕೌಂಟ್‌ಗೆ ನೇರವಾಗಿ ಹಣ ಹೋಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಒಂದು ನಯಾಪೈಸೆಯೂ ಮಧ್ಯವರ್ತಿಗಳ ಪಾಲಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಅದಕ್ಕಾಗಿಯೇ ಯೋಜನೆ ಜಾರಿಗೆ ತುಸು ವಿಳಂಬವಾಯಿತು. ಹಣದ ಸಮಸ್ಯೆ ಇಲ್ಲ. ಹಣ ಇಟ್ಟಿದ್ದೇವೆ. ಸಿದ್ದರಾಮಯ್ಯ ಕಾಲದಲ್ಲಿ ಮಾಡಿದ ಸಾಲಮನ್ನಾ ಯೋಜನೆಗಾಗಿ ಸುಮಾರು ಮೂರು ಸಾವಿರ ಕೋಟಿ ರು. ಮತ್ತು ಈಗ ನಾನು ಘೋಷಿಸಿದ ಸಾಲಮನ್ನಾ ಯೋಜನೆಗೆ ಒಂಬತ್ತು ಸಾವಿರ ಕೋಟಿ ರು. ಅವಕಾಶ ಕಲ್ಪಿಸಿದ್ದೇವೆ ಎಂದು ವಿವರಿಸಿದರು.ಈ ಸಾಲಮನ್ನಾ ಯೋಜನೆಯಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನುಕೂಲವಾಗಿದೆ. ಉತ್ತರ ಕರ್ನಾಟಕಕ್ಕೆ 29 ಸಾವಿರ ಕೋಟಿ ರು., ದಕ್ಷಿಣ ಕರ್ನಾಟಕಕ್ಕೆ 12 ಸಾವಿರ ಕೋಟಿ ರು., ಮಧ್ಯ ಕರ್ನಾಟಕಕ್ಕೆ ಮೂರು ಸಾವಿರ ಕೋಟಿ ರು. ಮತ್ತು ಕರಾವಳಿಗೆ ಎರಡು ಸಾವಿರ ಕೋಟಿ ರು. ಹಂಚಿಕೆಯಾಗಲಿದೆ ಎಂದು ಹೇಳಿದರು.

error: Content is protected !!
Scroll to Top