(ನ್ಯೂಸ್ ಕಡಬ) newskadaba.com.ಮಂಗಳೂರು,ಜ.25.ಈ ಆಧುನಿಕ ಯುಗದಲ್ಲಿ ಮಕ್ಕಳಿಂದ ವಯಸ್ಸಾದವರೆಗೂ ಚಾಕಲೇಟ್ಗಳನ್ನು ಇಷ್ಟಪಡುತ್ತಾರೆ.ಅಂತೆಯೇ ಚಾಕಲೇಟ್ಗಳಲ್ಲಿಯೂ ಅನೇಕ ವೈವಿಧ್ಯಮಯವಾದ ಚಾಕಲೇಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂತಹ ರುಚಿಕರವಾದ ಚಾಕಲೇಟ್ ಗಳ ಗುಂಪಿಗೆ ಡಾರ್ಕ್ ಚಾಕಲೇಟ್ ಗಳು ಸೇರುತ್ತವೆ. ಡಾರ್ಕ್ ಚಾಕಲೇಟ್ಗಳು ಆಂಟಿ ಆಕ್ಸಿಡೆಂಟ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರಿಂದ ಫ್ರೀ ರ್ಯಾಡಿಕಲ್ಸ್ ಕಡಿಮೆ ಮಾಡಿ ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಡಾರ್ಕ್ ಚಾಕಲೇಟ್ಗಳು ಮುಖ್ಯವಾಗಿ ಸಾವಯವ ಸಂಯುಕ್ತಗಳಾದ ಜೈವಿಕವಾಗಿ ಸಕ್ರಿಯವಾಗಿರುವಂತಹ ಪಾಲಿಫಿನಾಲ್ಗಳು, ಪ್ಲೇವನ್ಸ್, ಕೆಟಕಿನ್ಗಳನ್ನು ಹೊಂದಿರುತ್ತದೆ. ಇದು ಇದರ ಚುರುಕಾದ ಆಂಟಿ ಆಕ್ಸಿಡೆಂಟ್ ಪ್ರಕ್ರಿಯೆಗಳಿಗೆ ಕಾರಣ. ಸರಿಯಾದ ರಕ್ತಸಂಚಾರಕ್ಕೆ ಅನುಕೂಲ ಮಾಡಿಕೊಡಲು ಇದರಲ್ಲಿನ ನೈಟ್ರಿಕ್ ಆಕ್ಸೈಡ್ ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಡಾರ್ಕ್ ಚಾಕಲೇಟ್ಗಳು ಸಹಕಾರಿ. ಕೆಟ್ಟ ಕೊಲೆಸ್ಟ್ರಾಲ್ ಎಲ್.ಡಿ.ಎಲ್. ಕಡಿಮೆ ಮಾಡಿ ಹೆಚ್.ಡಿ.ಎಲ್. ಎಂಬ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಅನುಕೂಲಕಾರಿ. ಅದರಲ್ಲಿಯೂ ಅಕ್ಸಿಡೇಟಿವ್ ಎಲ್.ಡಿ.ಎಲ್.ನ ಹಾನಿಯಿಂದ ರಕ್ಷಿಸಲು ಡಾರ್ಕ್ ಚಾಕಲೇಟ್ಗಳು ಸಹಾಯ ಮಾಡುತ್ತದೆ.
ಇನ್ಸುಲಿನ್ ರೆಸಿಸ್ಟನ್ಸ್ ಕಡಿಮೆ ಮಾಡಲು, ಹೃದಯಸಂಬಂಧಿ ಸಮಸ್ಯೆಗಳಿಂದ ರಕ್ಷಿಸಲು ಮತ್ತು ಮಧುಮೇಹ ಬರುವಂತಹ ಸಂಭವವನ್ನು ಕಡಿಮೆ ಮಾಡಲು ಡಾರ್ಕ್ ಚಾಕಲೇಟ್ಗಳು ಸಹಕಾರಿ. ವಾರಕ್ಕೆ ಐದು ಸಲಕ್ಕಿಂತ ಹೆಚ್ಚು ಬಾರಿ ಡಾರ್ಕ್ ಚಾಕಲೇಟ್ ಸೇವಿಸುವವರಿಗೆ ಶೇ. 57ರಷ್ಟು ಹೃದಯಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತದೆಂದು ಅಧ್ಯಯನವೊಂದು ವರದಿ ಮಾಡಿದೆ. ಸೂರ್ಯಾಘಾತದಿಂದ ಪರಿಪೋಷಣೆ ಮಾಡಲು ಇದರಲ್ಲಿನ ಫ್ಲೇವನ್ಸ್ ಸಹಾಯ ಮಾಡುತ್ತವೆ.
ಮಿದುಳಿನ ಆರೋಗ್ಯಕ್ಕೆ ಡಾರ್ಕ್ ಚಾಕಲೇಟ್ ಅತ್ಯುತ್ತಮ. ಮಿದುಳಿನ ಕ್ರಿಯೆಯನ್ನು ಚುರುಕುಗೊಳಿಸುವುದೊಂದೇ ಅಲ್ಲದೆ ಎಲ್ಲ ರೀತಿಯ ಅರಿವಿನ ಪ್ರಕ್ರಿಯೆಗಳನ್ನು (ಕಾಗ್ನಿಟಿವ್ ಫಂಕ್ಷನ್ಸ್) ಉತ್ತೇಜಿಸುತ್ತದೆ. ಆದ್ದರಿಂದ ಸಾಧ್ಯವಿದ್ದಲ್ಲಿ ಸಕ್ಕರೆರಹಿತ ಡಾರ್ಕ್ ಚಾಕಲೇಟ್ ಸೇವನೆ ಮಾಡೋಣ. ತನ್ಮೂಲಕ ಆರೋಗ್ಯವೃದ್ಧಿ ಸಾಧ್ಯವಾಗಲೆಂಬ ಆಶಯ.